ದೇವರ ತೆಂಗಿನಕಾಯಿಗಾಗಿ ತಮ್ಮನ ಹೆಂಡತಿಯನ್ನು ಅಣ್ಣನೇ ಬರ್ಬರವಾಗಿ ಕೊ*ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಆಮಶೇತ-ಕೊಲೇಮಾಳ ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ ಸೋನು ವರಕ (35) ಹತ್ಯೆ*ಯಾದ ಮಹಿಳೆ.
ಕಾರವಾರ (ಸೆ.11): ದೇವರ ತೆಂಗಿನಕಾಯಿಗಾಗಿ ತಮ್ಮನ ಹೆಂಡತಿಯನ್ನು ಅಣ್ಣನೇ ಬರ್ಬರವಾಗಿ ಕೊ*ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ರಾಮನಗರದ ಆಮಶೇತ-ಕೊಲೇಮಾಳ ಗ್ರಾಮದಲ್ಲಿ ನಡೆದಿದೆ. ದೇವರ ತೆಂಗಿನಕಾಯಿ ತನ್ನ ಮನೆಯಲ್ಲಿ ಇಡಲು ಒಪ್ಪದಕ್ಕೆ ಕೊಲೆಯಾಗಿದ್ದು, ನಾದಿನಿ ತಲೆಗೆ ಸಲಾಕೆಯಿಂದ ಹೊಡೆದು ಕೊ*ಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.
ದೊಂಡು ಗಂಗಾರಾಮ ವರಕ (55) ಎಂಬಾತನೇ ಕೊಲೆ ಮಾಡಿ ಪರಾರಿಯಾದ ಆರೋಪಿ. ಭಾಗ್ಯಶ್ರೀ ಸೋನು ವರಕ (35) ಹತ್ಯೆ*ಯಾದ ಮಹಿಳೆ. ದೇವರ ತೆಂಗಿನಕಾಯಿ ಯಾರ ಮನೆಯಲ್ಲಿ ಇರುತ್ತೆ ಅವರಿಗೆ ಒಳಿತಾಗುತ್ತೆ ಎಂಬ ನಂಬಿಕೆ ಅಣ್ಣ ತಮ್ಮಂದಿರಲ್ಲಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಆರೋಪಿ ದೊಂಡು ಗಂಗಾರಾಮ ಮಗನಿಗೆ ಹುಷಾರಿರಲಿಲ್ಲ. ಮನೆಯಲ್ಲಿ ದೇವರು ಇರದ ಕಾರಣದಿಂದಲೇ ಮಗನಿಗೆ ಹುಷಾರಿಲ್ಲ ಎಂದು ಆರೋಪಿ ಅಂದುಕೊಂಡಿದ್ದ.
ಮಗನ ಸಲುವಾಗಿ ದೇವರ ತೆಂಗಿನಕಾಯಿ ಕೊಡುವಂತೆ ಕೆಲವು ದಿನಗಳಿಂದ ಜಗಳ ನಡೆದಿತ್ತು. ತಮ್ಮನನ್ನು ಎತ್ತಿಕಟ್ಟಿ ತೆಂಗಿನಕಾಯಿ ಕೊಡದೆ ನಾದಿನಿ ಸತಾಯಿಸುತ್ತಿದ್ದಳು ಎಂಬ ಆರೋಪ ಕೂಡ ಇತ್ತು. ಇಂದು ಆರೋಪಿಯ ತಮ್ಮ ಗೋವಾಕ್ಕೆ ಹೋಗಿದ್ದ ಸಂದರ್ಭ ತಮ್ಮನ ಮನೆಗೆ ಸಲಾಕೆ ಹಿಡಿದು ಹೋಗಿದ್ದ ಆರೋಪಿ ಅಣ್ಣ, ತಮ್ಮನ ಪತ್ನಿ ಭಾಗ್ಯಶ್ರೀ ಎದುರು ಸಿಕ್ಕಿದ್ದೇ ತಡ ಸಲಾಕೆಯಿಂದ ತಲೆಗೆ ಹೊಡೆದು ಕೊ*ಲೆ ಮಾಡಿದ್ದಾನೆ.
ಆರೋಪಿಗಾಗಿ ಶೋಧ
ಸದ್ಯ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ. ಉತ್ತರ ಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್, ದಾಂಡೇಲಿ ಡಿವೈಎಸ್‌ಪಿ ಶಿವಾನಂದ, ಜೊಯಿಡಾ ಸಿಪಿಐ ಚಂದ್ರಶೇಖರ ಹರಿಹರ, ರಾಮನಗರ ಪಿಎಸ್‌ಐ ಮಹಂತೇಶ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಮನಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
