ಉತ್ತರ ಪ್ರದೇಶದಲ್ಲಿ, ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗಿ ಬದಲಾಗುತ್ತಾಳೆ ಎಂದು ಪತಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಆದರೆ, ಪೊಲೀಸರ ತನಿಖೆಯಿಂದ ಗೊತ್ತಾದದ್ದೇ ಬೇರೆ. ಏನಿದು ಸ್ಟೋರಿ?
'ರಾತ್ರಿಯಾಗುತ್ತಲೇ ಹೆಂಡ್ತಿ ಹಾವಾಗ್ತಾಳೆ- ಕಾಪಾಡಿ' ಎಂದು ಪತಿಯ ದೂರು: ತನಿಖೆಗೆ ಹೋದ ಪೊಲೀಸರಿಗೆ ಶಾಕ್
ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದ ಪ್ರಕರಣವೊಂದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದ. ಅವಳು ರಾತ್ರಿಯಲ್ಲಿ ಸರ್ಪವಾಗಿ ರೂಪಾಂತರಗೊಳ್ಳುತ್ತಾಳೆ ಮತ್ತು ಅವನನ್ನು ನಿದ್ರಿಸದಂತೆ ತಡೆಯುತ್ತಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ. ನನ್ನ ಹೆಂಡತಿ ರಾತ್ರಿಯ ಸಮಯದಲ್ಲಿ ಹಾವಾಗಿ ರೂಪಾಂತರಗೊಳ್ಳುತ್ತಾಳೆ. ನನ್ನನ್ನು ಹೆದರಿಸುತ್ತಾಳೆ, ನಿದ್ದೆ ಮಾಡದಂತೆ ತಡೆಯುತ್ತಾಳೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ, ನನ್ನ ಪತ್ನಿಯಿಂದ ನನ್ನನ್ನು ಕಾಪಾಡಿ ಎಂದು ದೂರು ಕೊಟ್ಟಿರೋ ಘಟನೆ ಬೆಳಕಿಗೆ ಬಂದಿದೆ.
ಮಾಧ್ಯಮದ ಎದುರೂ ದೂರು
ಸೀತಾಪುರ ಜಿಲ್ಲೆಯ ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದ ವ್ಯಕ್ತಿ ಮೆರಾಜ್ ಎಂಬಾತ ನೀಡಿದ್ದ ಈ ದೂರನ್ನು ಕೇಳಿದ ಪೊಲೀಸರು ಶಾಕ್ ಆಗಿದ್ದರು. ಆರಂಭದಲ್ಲಿ ಅವರಿಗೆ ನಗು ಬಂದರೂ, ಮಾಧ್ಯಮಗಳ ಎದುರು ಕೂಡ ಪತಿ ಇದೇ ವಾದವನ್ನು ಮುಂದಿಟ್ಟಿದ್ದಾನೆ. ಇದನ್ನು ಕೇಳಿದ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನನ್ನ ಪತ್ನಿ ನಸೀಮುನ್ ಮಾನಸಿಕವಾಗಿ ಅಸ್ವಸ್ಥಳು. ಅವಳು ರಾತ್ರಿಯಲ್ಲಿ "ಸರ್ಪ"ದಂತೆ ಸಿಳ್ಳೆ ಹೊಡೆಯುತ್ತಾಳೆ, ನಾಗರನಂತೆ ವರ್ತಿಸುತ್ತಾಳೆ. ನನ್ನನ್ನು ಹೆದರಿಸುತ್ತಾಳೆ. ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಆತ ಹೇಳಿದ್ದ.
ಪತ್ನಿ ಹೇಳಿದ್ದೇ ಬೇರೆ
ಪೊಲೀಸರು, ಪತ್ನಿಯನ್ನು ವಿಚಾರಿಸಿದಾಗ ಅಕೆ, ತನ್ನ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಇಬ್ಬರ ದೂರನ್ನೂ ಆಲಿಸಿ ಪೊಲೀಸರು ತನಿಖೆ ಕೈಗೊಂಡಾಗ ಬಯಲಿಗೆ ಬಂದದ್ದೇ ಬೇರೆಯ ವಿಷಯ!
ತನಿಖೆಯಿಂದ ಅಸಲಿಯತ್ತು ಬಯಲು
ಅದೇನೆಂದರೆ ಕೆಲವು ದಿನಗಳಿಂದ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿದೆ. ಪತ್ನಿಯನ್ನು ಹೆದರಿಸಲು ಮೆರಾಜ್, ತಾನು ಬೇರೆ ಮದುವೆಯಾಗುವುದಾಗಿ ಹೆದರಿಸುತ್ತಿದ್ದ. ದುಡ್ಡಿಗಾಗಿ ಪೀಡಿಸುತ್ತಿದ್ದ. ಅವಳು ಎಲ್ಲಿ ದೂರು ದಾಖಲು ಮಾಡುತ್ತಾಳೆಯೋ ಎಂದು ಮೊದಲೇ ಪತ್ನಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದ. ಆದರೆ ಅದನ್ನು ಪೊಲೀಸರು ಪರಿಗಣಿಸಿರಲಿಲ್ಲ. ಆದ್ದರಿಂದ ಪೊಲೀಸರು ಏನು ಮಾಡಿದರೂ ತನ್ನ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ ಎಂದು ಹಾವಿನ ಕಟ್ಟುಕಥೆ ಹೇಳಿರುವುದು ಬೆಳಕಿಗೆ ಬಂದಿದೆ.
ಇದೀಗ ಸಿರಾಜ್ ವಿರುದ್ಧವೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸುಳ್ಳು ಕಥೆಯನ್ನು ಹೆಣೆದು ಪೊಲೀಸರು ಮತ್ತು ಆಡಳಿತದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಮೆರಾಜ್ ವಿರುದ್ಧ ಮೊಕದ್ದಮೆ ಹೂಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
