ಭಾರತದ ನಿರುದ್ಯೋಗ ದರವು ಶೇ. 5.2ಕ್ಕೆ ಏರಿಕೆಯಾಗಿದ್ದು, ಇದಕ್ಕೆ ಗ್ರಾಮೀಣ ಪ್ರದೇಶಗಳ ಹಿನ್ನಡೆ ಪ್ರಮುಖ ಕಾರಣವಾಗಿದೆ. ಮಹಿಳೆಯರ ನಿರುದ್ಯೋಗ ಮೂರು ತಿಂಗಳ ಗರಿಷ್ಠ ಮಟ್ಟ ತಲುಪಿದ್ದರೂ, ಕಾರ್ಮಿಕ ಬಲದ ಭಾಗವಹಿಸುವಿಕೆ ದರ, ವಿಶೇಷವಾಗಿ ಮಹಿಳೆಯರಲ್ಲಿ, ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ.
ನವದೆಹಲಿ: ಭಾರತದ ನಿರುದ್ಯೋಗ ದರದ ಶಾಕಿಂಗ್ ಅಂಶಗಳು ಬೆಳಕಿಗೆ ಬಂದಿದೆ. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ದರವು ಸೆಪ್ಟೆಂಬರ್‌ನಲ್ಲಿ ಸ್ವಲ್ಪ ಹೆಚ್ಚಾಗಿದೆ ಮತ್ತು ಮಹಿಳೆಯರ ನಿರುದ್ಯೋಗ ದರವು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಯಾಗಿದೆ ಎಂದು ವರದಿ ತಿಳಿಸಿದೆ. 2025ರ ಆಗಸ್ಟ್‌ನಲ್ಲಿ ಶೇ. 5.1 ಇದ್ದರೆ, ಸೆಪ್ಟೆಂಬರ್‌ನಲ್ಲಿ ಶೇ. 5.2 ಕ್ಕೆ ಏರಿಕೆಯಾಗಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿದ ಇತ್ತೀಚಿನ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ ( ಪಿರಿಯಾಡಿಕ್ ಲೇಬರ್ ಫೋರ್ಸ್ ಸಮೀಕ್ಷೆ PLFS) ದತ್ತಾಂಶದಿಂದ ತಿಳಿದುಬಂದಿದೆ. ಈ ಏರಿಕೆಯು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಹಾಗೂ ಪುರುಷರು ಮತ್ತು ಮಹಿಳೆಯರಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿದ ಪರಿಣಾಮವಾಗಿದೆ.
ಗ್ರಾಮೀಣ ನಿರುದ್ಯೋಗವೇ ಒಟ್ಟಾರೆ ಏರಿಕೆಗೆ ಪ್ರಮುಖ ಕಾರಣ
- ಆಗಸ್ಟ್‌ನಲ್ಲಿ ಶೇ. 4.3 ಇದ್ದ ಗ್ರಾಮೀಣ ನಿರುದ್ಯೋಗ ದರವು ಸೆಪ್ಟೆಂಬರ್‌ನಲ್ಲಿ ಶೇ. 4.6 ಕ್ಕೆ ಏರಿಕೆಯಾಗಿದೆ.
- ಗ್ರಾಮೀಣ ಪುರುಷರ ನಿರುದ್ಯೋಗ ದರ ಶೇ. 4.5 ರಿಂದ ಶೇ. 4.7 ಕ್ಕೆ ಏರಿಕೆಯಾಗಿದೆ.
- ಗ್ರಾಮೀಣ ಮಹಿಳೆಯರ ನಿರುದ್ಯೋಗ ದರ ಶೇ. 4 ರಿಂದ ಶೇ. 4.3 ಕ್ಕೆ ಏರಿಕೆಯಾಗಿದೆ.
- ಇದರ ವಿರುದ್ಧವಾಗಿ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಶೇ. 6.7 ರಿಂದ ಶೇ. 6.8 ಕ್ಕೆ ಏರಿಕೆಯಾಗಿದೆ.
- ನಗರ ಪುರುಷರ ನಿರುದ್ಯೋಗ ಶೇ. 5.9 ರಿಂದ ಶೇ. 6 ಕ್ಕೆ ಏರಿಕೆಯಾಗಿದೆ.
- ನಗರ ಮಹಿಳೆಯರ ನಿರುದ್ಯೋಗ ಶೇ. 8.9 ರಿಂದ ಶೇ. 9.3 ಕ್ಕೆ ಏರಿಕೆಯಾಗಿ, ಇದು ಕಳೆದ ಮೂರು ತಿಂಗಳ ಗರಿಷ್ಠ ಮಟ್ಟವಾಗಿದೆ.
ಯುವಜನರಲ್ಲಿ ನಿರುದ್ಯೋಗ ಮತ್ತು ಲಿಂಗ ಅಂತರದ ವಿಸ್ತರಣೆ
15–29 ವರ್ಷ ವಯಸ್ಸಿನ ಯುವಜನರಲ್ಲಿನ ನಿರುದ್ಯೋಗ ದರವು ಆಗಸ್ಟ್‌ನ ಶೇ. 14.6ರಿಂದ ಸೆಪ್ಟೆಂಬರ್‌ನಲ್ಲಿ ಶೇ. 15ಕ್ಕೆ ಏರಿಕೆಯಾಗಿದೆ — ಇದು ಮೂರು ತಿಂಗಳ ಗರಿಷ್ಠ ಮಟ್ಟವಾಗಿದೆ. ಒಟ್ಟಾರೆ, ಪುರುಷರ ನಿರುದ್ಯೋಗ ಶೇ. 5 ರಿಂದ ಶೇ. 5.1 ಕ್ಕೆ ಏರಿದರೆ, ಮಹಿಳೆಯರ ನಿರುದ್ಯೋಗ ಶೇ. 5.2 ರಿಂದ ಶೇ. 5.5 ಕ್ಕೆ ಏರಿಕೆಯಾಗಿದೆ.
ಕಾರ್ಮಿಕ ಬಲದ ಭಾಗವಹಿಸುವಿಕೆ (LFPR) ಐದು ತಿಂಗಳ ಗರಿಷ್ಠ ಮಟ್ಟ
ಕಾರ್ಮಿಕ ಬಲದ ಭಾಗವಹಿಸುವಿಕೆ ದರ (LFPR) — ಅಂದರೆ ಕೆಲಸ ಮಾಡುತ್ತಿರುವ ಅಥವಾ ಸಕ್ರಿಯವಾಗಿ ಕೆಲಸ ಹುಡುಕುತ್ತಿರುವ ಜನಸಂಖ್ಯೆಯ ಪಾಲು — ಸೆಪ್ಟೆಂಬರ್‌ನಲ್ಲಿ ಶೇ. 55 ರಿಂದ ಶೇ. 55.3 ಕ್ಕೆ ಏರಿಕೆಯಾಗಿದೆ, ಇದು ಕಳೆದ ಐದು ತಿಂಗಳಲ್ಲಿ ಅತ್ಯಧಿಕ ಮಟ್ಟವಾಗಿದೆ.
ಮಹಿಳೆಯರ LFPR ಶೇ. 34.1 ತಲುಪಿದ್ದು, ಮೇ 2025 ನಂತರದ ಗರಿಷ್ಠ ಮಟ್ಟವಾಗಿದೆ.
ಪುರುಷರ LFPR ಶೇ. 77 ರಿಂದ ಶೇ. 77.1 ಕ್ಕೆ ಸ್ವಲ್ಪ ಏರಿಕೆಯಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಪುರುಷರ ಭಾಗವಹಿಸುವಿಕೆ ಶೇ. 77.9 ರಿಂದ 78.1 ಕ್ಕೆ ಹಾಗೂ ಮಹಿಳೆಯರ ಭಾಗವಹಿಸುವಿಕೆ ಶೇ. 37.4 ರಿಂದ 37.9 ಕ್ಕೆ ಏರಿಕೆಯಾಗಿದೆ.
ನಗರ ಪ್ರದೇಶಗಳಲ್ಲಿ ಪುರುಷರ ಭಾಗವಹಿಸುವಿಕೆ ಶೇ. 75.3 ಕ್ಕೆ ಸ್ವಲ್ಪ ಇಳಿಕೆಯಾದರೆ, ಮಹಿಳೆಯರ ಭಾಗವಹಿಸುವಿಕೆ ಶೇ. 26.1 ನಲ್ಲಿ ಸ್ಥಿರವಾಗಿದೆ.
ಯುವಜನರ LFPR ನಾಲ್ಕು ತಿಂಗಳ ಗರಿಷ್ಠವಾದ ಶೇ. 41.3 ತಲುಪಿದೆ. ವಿಶೇಷವಾಗಿ, ಮಹಿಳಾ ಯುವಕರ ಭಾಗವಹಿಸುವಿಕೆ ಶೇ. 21.7 ಕ್ಕೆ ಏರಿಕೆಯಾದುದರಿಂದ ಒಟ್ಟು ಪ್ರಮಾಣಕ್ಕೆ ಉತ್ತೇಜನ ಸಿಕ್ಕಿದೆ.
ಉದ್ಯೋಗ ಅನುಪಾತದಲ್ಲೂ ಏರಿಕೆ
ನಿರುದ್ಯೋಗ ದರದಲ್ಲಿ ಏರಿಕೆ ಕಂಡರೂ, ವಾಸ್ತವವಾಗಿ ಉದ್ಯೋಗದಲ್ಲಿರುವ ಜನಸಂಖ್ಯೆಯ ಪ್ರಮಾಣವನ್ನು ಸೂಚಿಸುವ ಕಾರ್ಮಿಕರ ಜನಸಂಖ್ಯಾ ಅನುಪಾತ (WPR) ಆಗಸ್ಟ್‌ನ ಶೇ. 52.2ರಿಂದ ಸೆಪ್ಟೆಂಬರ್‌ನಲ್ಲಿ ಶೇ. 52.4 ಕ್ಕೆ ಏರಿಕೆಯಾಗಿದೆ.
ಮಹಿಳೆಯರ WPR ಶೇ. 32 ರಿಂದ 32.3 ಕ್ಕೆ ಸುಧಾರಿಸಿದೆ.
ಪುರುಷರ WPR ಶೇ. 73.2 ನಲ್ಲಿ ಸ್ಥಿರವಾಗಿದೆ.
ಸಮೀಕ್ಷೆಯ ವ್ಯಾಪ್ತಿ ಮತ್ತು ವಿಧಾನ
PLFS ಸಮೀಕ್ಷೆಯಲ್ಲಿ ದೇಶದ ಗ್ರಾಮೀಣ ಹಾಗೂ ನಗರ ಪ್ರದೇಶಗಳ 89,291 ಮನೆಗಳು ಮತ್ತು 3,75,703 ವ್ಯಕ್ತಿಗಳನ್ನು ಒಳಗೊಂಡಿದೆ. ಈ ಸಮೀಕ್ಷೆಯಲ್ಲಿ ಪ್ರಸ್ತುತ ಸಾಪ್ತಾಹಿಕ ಸ್ಥಿತಿ (CWS) ವಿಧಾನವನ್ನು ಅನುಸರಿಸಲಾಗುತ್ತದೆ. ಇದರಡಿ, ಸಮೀಕ್ಷೆಗೆ ಮುಂಚಿನ ಏಳು ದಿನಗಳಲ್ಲಿ ವ್ಯಕ್ತಿ ಉದ್ಯೋಗದಲ್ಲಿದ್ದಾನೆಯೇ ಅಥವಾ ಸಕ್ರಿಯವಾಗಿ ಉದ್ಯೋಗ ಹುಡುಕುತ್ತಿದ್ದಾನೆಯೇ ಎಂಬುದನ್ನು ಅಳೆಯಲಾಗುತ್ತದೆ.
ಆರ್ಥಿಕ ವಿಶ್ಲೇಷಕರ ಅಭಿಪ್ರಾಯ
ಸೆಪ್ಟೆಂಬರ್ ತಿಂಗಳ PLFS ದತ್ತಾಂಶವು ಗ್ರಾಮೀಣ ಕಾರ್ಮಿಕ ಮಾರುಕಟ್ಟೆಯಲ್ಲಿ ಒತ್ತಡ ಹೆಚ್ಚುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ. ಆದರೆ ಭಾಗವಹಿಸುವಿಕೆ ದರಗಳ ಏರಿಕೆ, ಗ್ರಾಮೀಣ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮತ್ತು ಮಳೆಗಾಲದ ನಂತರದ ಕಾಲೋಚಿತ ಉದ್ಯೋಗ ಚಟುವಟಿಕೆಗಳಿಂದ ಉತ್ತೇಜಿತವಾಗಿದೆ. ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ನಿಧಾನಗತಿಯಲ್ಲಿ ಸಾಗುತ್ತಿರುವುದು ಈ ಸ್ಥಿತಿಗೆ ಕಾರಣವಾಗಿರುವುದಾಗಿ ಆರ್ಥಿಕ ವಿಶ್ಲೇಷಕರು ಹೇಳುತ್ತಾರೆ.
