ಸಚಿವ ಮಲ್ಲಿಕಾರ್ಜುನ್ ಮತ್ತು ಕಾಂಗ್ರೆಸ್ ಶಾಸಕ ಶಾಂತನಗೌಡ ಮಧ್ಯೆ ವೇದಿಕೆಯಲ್ಲಿ ಭದ್ರಾ ಬಲದಂಡೆ ಸೀಳಿ ಅನುಷ್ಠಾನಗೊಳಿಸುವ ಕುಡಿಯುವ ನೀರಿನ ಯೋಜನೆ ಕುರಿತು ಪರಸ್ಪರ ವೈರುಧ್ಯದ ಹೇಳಿಕೆಗಳ ಸಮರ ಬಹಿರಂಗವಾಗಿ ನಡೆಯಿತು.
ಶಿವಮೊಗ್ಗ (ಸೆ.12): ಭದ್ರಾ ಜಲಾಶಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಪಕ್ಷದ ಸಚಿವ ಮಲ್ಲಿಕಾರ್ಜುನ್ ಮತ್ತು ಕಾಂಗ್ರೆಸ್ ಶಾಸಕ ಶಾಂತನಗೌಡ ಮಧ್ಯೆ ವೇದಿಕೆಯಲ್ಲಿ ಭದ್ರಾ ಬಲದಂಡೆ ಸೀಳಿ ಅನುಷ್ಠಾನಗೊಳಿಸುವ ಕುಡಿಯುವ ನೀರಿನ ಯೋಜನೆ ಕುರಿತು ಪರಸ್ಪರ ವೈರುಧ್ಯದ ಹೇಳಿಕೆಗಳ ಸಮರ ಬಹಿರಂಗವಾಗಿ ನಡೆಯಿತು. ಕೈ ಶಾಸಕ ಯೋಜನೆ ಅವೈಜ್ಞಾನಿಕ ಎಂದರೆ ಸಚಿವ ಯೋಜನೆ ಕಾರ್ಯಗತಗೊಳಿಸುವ ಹೇಳಿಕೆ ನೀಡಿದರು.
ನಂತರ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಕುಡಿಯುವ ನೀರಿನ ಯೋಜನೆಯಲ್ಲಿ ರಾಜಕೀಯ ಬೇಡ ಎಂದು ಕಿವಿಮಾತು ಹೇಳಿ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ಸುಳಿವು ನೀಡಿದರು. ಭದ್ರಾವತಿ ತಾಲೂಕಿನ ಬಿ ಆರ್ ಪ್ರಾಜೆಕ್ಟ್ ನಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ನಡೆದ ವೇದಿಕೆ ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ ಮಾತನಾಡಿ, ಭದ್ರಾ ಜಲಾಶಯದಿಂದ ಮೂರು ಜಿಲ್ಲೆಗೆ ನೀರನ್ನು ಒದಗಿಸುವ ಕೆಲಸ ಮಾಡಿಲಾಗಿದ್ದು, ಆ ಭಾಗದ ಜನರಿಗೆ ಭದ್ರಾ ಜಲಾಶಯ ಜೀವನಾಡಿ ಆಗಿದೆ.
ಎಲ್ಲರಿಗೂ ಕುಡಿಯುವ ನೀರನ್ನು ಕೊಡಬೇಕು
ಎಸ್. ಎಂ. ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದಾಗ ಈ ಯೋಜನೆಗಾಗಿ 300 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದರಿಂದ ಹೊಸಪೇಟೆಯ ಒಂದು ತಾಲ್ಲೂಕು, ದಾವಣಗೆರೆಯ 3 ತಾಲ್ಲೂಕಿಗೆ ಅನುಕೂಲವಾಯಿತು ಹಾಗೂ ಭದ್ರ ಬಲದಂಡೆಯಿಂದ ಭದ್ರಾವತಿ, ಮಾಯಕೊಂಡ, ಹರಪ್ಪನಹಳ್ಳಿ, ದಾವಣಗೆರೆ ತಾಲೂಕುಗಳಿಗೆ 1.46 ಲಕ್ಷ ಕ್ಯೂಸೆಕ್ಸ್ ನೀರು ಹರಿಯುತ್ತಿದೆ ಎಂದರು. ಇದೆ ವೇಳೆ ಬದ್ರ ಬಲದಂಡೆ ನಾಳೆ ಸೀಳಿ ಹೊಸದುರ್ಗ, ತರೀಕೆರೆ, ಅಜ್ಜಂಪುರ, ಹೊಸದುರ್ಗ ಪಟ್ಟಣ ಸೇರಿದಂತೆ 1236 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಎಲ್ಲರಿಗೂ ಕುಡಿಯುವ ನೀರನ್ನು ಕೊಡಬೇಕು. ಇದರ ಬಗ್ಗೆ ಒಂದು ಸೂಕ್ತವಾದ ನಿರ್ಧಾರವನ್ನು ಕೂಡ ಮಾಡಲಾಗಿದೆ. ಆ ನಿಟ್ಟಿನಲ್ಲಿ ಭದ್ರಾ ಜಲಾಶಯದ ನೀರಾವರಿ ಯೋಜನೆಗೆ ಹೆಚ್ಚು ಅನುದಾನ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಇದೆ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಹೊನ್ನಾಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಂತನಗೌಡ ಮಧ್ಯಪ್ರವೇಶಿಸಿ ಯೋಜನೆ ಅವಜ್ಞಾನಿಕವಾಗಿದ್ದು ಬಲದಂಡೆನಹಳ್ಳಿ ಸೀಳಿ ನೀರು ಹರಿಸುವ ಬದಲು ಭದ್ರ ನದಿಯಿಂದಲೇ ಮೂರು ಟಿಎಂಸಿ ಅಲ್ಲ 300 ಕ್ಯೂಸೆಕ್ ನೀರು ಬೇಕಾದರೂ ಪಡೆದುಕೊಳ್ಳಿ ಎಂದು ವೈರುಧ್ಯದ ಹೇಳಿಕೆ ನೀಡಿದರು. ಇದಕ್ಕೆ ಬಂದಿದ್ದ ಜನರೆಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸುತಿದ್ದಂತೆ ಸಚಿವ ಮಲ್ಲಿಕಾರ್ಜುನ್ ಶಾಸಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ರೈತರಿಗೆ ನೀರನ್ನು ತಲುಪಿಸುವ ಕೆಲಸ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ನೀರಾವರಿ ಅಭಿವೃದ್ಧಿಗಾಗಿ ಅನುದಾನವನ್ನು ಸರ್ಕಾರ ಬಳಿ ಕೇಳಿದ್ದೇವೆ ಅದನ್ನು ಪೂರೈಸುವ ಭರವಸೆಯಿದೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿ ತಮ್ಮ ಭಾಷಣ ಮುಕ್ತಾಯ ಮಾಡಿದರು.
