ಬಿಜೆಪಿ ಆಡಳಿತ ಅವಧಿಯಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ಅವಕಾಶ ಕಲ್ಪಿಸಲಾಗಿದೆ, ಅದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಸೆ.12): ಬಿಜೆಪಿ ತನ್ನ ಆಡಳಿತ ಅವಧಿಯಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವ ಅವಕಾಶ ಕಲ್ಪಿಸಲಾಗಿದೆ, ಅದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಬಹುದು ಎಂದು ಕಾನೂನು ಮಾಡಲಾಗಿದೆ. ಚುನಾವಣಾ ಆಯೋಗದ ಉಪಕಾನೂನಿನಲ್ಲೂ ಮತಪತ್ರ ಬಳಸುವ ಅವಕಾಶವಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಾಯ್ದೆಗೆ ಬಿಜೆಪಿ ಮಾಡಿದ್ದ ಕಾಯ್ದೆ ಸೇರ್ಪಡೆ ಮಾಡಲಾಗಿದೆ.

ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸುವುದರಲ್ಲಿ ತಪ್ಪೇನು ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಕಾನೂನು ಸಚಿವರು ಸೂಕ್ತ ಪ್ರಸ್ತಾವನೆ ಸಲ್ಲಿಸಲಿದ್ದಾರೆ ಎಂದರು. ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಸೈಂಟ್‌ ಮೇರಿಸ್‌ ಹೆಸರಿಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಪ್ರಸ್ತಾವನೆಗೆ ಬಿಜೆಪಿ ವಿರೋಧದ ಬಗ್ಗೆ ಪ್ರತಿಕ್ರಿಯಿಸಿ, ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಕುರಿತು ಪ್ರಸ್ತಾವನೆ ಸಲ್ಲಿಸುವುದರಲ್ಲಿ ತಪ್ಪೇನೂ ಇಲ್ಲ. ಈ ವಿಚಾರವಾಗಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಮತಟ್ಟು ನೆಲದಲ್ಲಿ ಪೈಪ್‌ಲೈನ್‌ಗೆ ಡಿಕೆಶಿ ಗಮನಹರಿಸಲಿ

ಭದ್ರಾ ನಾಲೆಯನ್ನು ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗೆ ನೀರು ಹರಿಸುವ ಬದಲು ಸಮತಟ್ಟು ನೆಲದಲ್ಲಿ ಪೈಪ್ ಅಳವಡಿಸುವ ಕಾಮಗಾರಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮುಂದಾಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ.ಸಿದ್ದೇಶ್ವರ ಒತ್ತಾಯಿಸಿದರು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಭದ್ರಾ ಡ್ಯಾಂಗೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಚ್ಚುಕಟ್ಟು ರೈತರೊಂದಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಸಮೇತರಾಗಿ ಭದ್ರೆಗೆ ಬಾಗಿನ ಅರ್ಪಿಸಿ, ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸೆ.12ರಂದು ಭದ್ರೆಗೆ ಬಾಗಿನ ಅರ್ಪಿಸಲು ಇಲ್ಲಿಗೆ ಭೇಟಿ ನೀಡುವ ಡಿ.ಕೆ.ಶಿವಕುಮಾರ ಭದ್ರಾ ಬಲದಂಡೆಗೆ ಧಕ್ಕೆ ಆಗದಂತೆ ಸಮತಟ್ಟು ನೆಲದಲ್ಲಿ ಪೈಪ್ ಲೈನ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು. ಬಲದಂಡೆ ನಾಲೆ ಸೀಳಿದ ಸ್ಥಳವನ್ನು ಡಿಸಿಎಂ ಶಿವಕುಮಾರ ವೀಕ್ಷಣೆ ಮಾಡಲಿ. ಈಗ ಕೈಗೊಂಡ ಕಾಮಗಾರಿ ಸ್ಥಳ ಬಿಟ್ಟು, ಸಮನಾದ ನೆಲದಲ್ಲಿ ಪೈಪ್ ಲೈನ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಿ. ತರೀಕೆರೆ, ಹೊಸದುರ್ಗ ಭಾಗಕ್ಕೂ ನೀರು ಕೊಡಲಿ. ತರೀಕೆರೆ ಶ್ರೀನಿವಾಸ ನಾವು ಡ್ಯಾಂಗೆ ಹಿಂದೆ ಭೇಟಿ ನೀಡಿದ್ದಾಗ ತಮ್ಮ ಕ್ಷೇತ್ರದ ನೀರಿನ ಬವಣೆ ಬಗ್ಗೆ ಹೇಳಿಕೊಂಡರು. ನಮಗೂ ಮಾನವೀಯತೆ ಇದೆ. ಆದರೆ, ಬಲದಂಡೆ ಸೀಳುವ ಬದಲು ಬೇರೆ ಮಾರ್ಗದಿಂದ ನೀರೊಯ್ಯಲು ಸಲಹೆ ನೀಡಿದ್ದೆವು ಎಂದು ಅವರು ತಿಳಿಸಿದರು.

ತರೀಕೆರೆ, ಹೊಸದುರ್ಗ ಭಾಗಕ್ಕೆ 30 ಕ್ಯುಸೆಕ್‌ ನೀರನ್ನು ಹರಿಸಲು ನಮ್ಮ ಅಭ್ಯಂತರವಿಲ್ಲ. ಭದ್ರಾ ಬಲದಂಡೆ ನಾಲೆಗೆ ಧಕ್ಕೆ ಮಾಡಿ, ಮುಂದೆ ದಾವಣಗೆರೆ, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆ ಭಾಗದ ಅಚ್ಚುಕಟ್ಟು ಭಾಗದ ರೈತರಿಗೆ ತೊಂದರೆ ಆಗದಂತೆ ಸರ್ಕಾರ ನೀರು ಕೊಡಲಿ. ಭದ್ರಾದಿಂದ 30 ಕ್ಯುಸೆಕ್ ನೀರು ಬಿಟ್ಟರೆ, ಅಷ್ಟೇ ಪ್ರಮಾಣದ ನೀರನ್ನು ಭದ್ರಾಗೆ ತುಂಬಿಸುವ ಕೆಲಸವೂ ಆಗಬೇಕು. ಬಾಗಿನ ಅರ್ಪಿಸಲು ಭದ್ರಾ ಡ್ಯಾಂಗೆ ಶುಕ್ರವಾರ ಭೇಟಿ ನೀಡುವ ಡಿ.ಕೆ. ಶಿವಕುಮಾರ ಈ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳಿದರು. ಅಚ್ಚುಕಟ್ಟು ರೈತರಲ್ಲಿ ಯಾರೂ ಸಹ ತಪ್ಪು ಭಾವನೆ ಮೂಡಿಸಬಾರದು. ನಾವೂ ರೈತರ ಪರವಾಗಿಯೇ ಇದ್ದೇವೆ. ಅಚ್ಚುಕಟ್ಟು ಕೊನೆಯ ಭಾಗಕ್ಕೆ ಹರಸಾಹಸ ಮಾಡಿ ನೀರು ಕೊಡಿಸಲು ಶ್ರಮಿಸುತ್ತೇವೆ. ದಾವಣಗೆರೆ ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ, ಸೂಳೆಕೆರೆಗೂ ನೀರು ಪಡೆಯುತ್ತಿದ್ದೇವೆ. ನೆರೆ ಜಿಲ್ಲೆಯ ತಾಲೂಕುಗಳಿಗೆ ನೀರು ನೀಡಲು ಅಭ್ಯಂತರವಿಲ್ಲ. ಆದರೆ, ಬಲದಂಡೆಯನ್ನೇ ಸೀಳಿ ನೀರು ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದರು.