ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಮುಂದಿನ ಮುಖ್ಯಮಂತ್ರಿ ತಾವಾದರೆ ಮೂರು ಗ್ಯಾರೆಂಟಿ ನೀಡಿದ್ದಾರೆ. ಅವರು ಹೇಳಿದ್ದೇನು ಕೇಳಿ...
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಆಯ್ಕೆಯಾದಾಗಿನಿಂದಲೂ ಸಕತ್ ಸದ್ದು ಮಾಡುತ್ತಿರುವವರೇ. ಅವರು ಸದ್ದು ಮಾಡಿದಾಗಲೆಲ್ಲಾ ಟ್ರೋಲ್ ಆಗಿದ್ದೇ ಹೆಚ್ಚು. ತಮ್ಮ ಮಾತಿನ ವೈಖರಿಯಿಂದ ಎಂಥವರನ್ನೂ ಮರಳು ಮಾಡುವ ತಾಕತ್ತು ಪ್ರದೀಪ್ ಅವರಿಗೆ ಇದೆ. ಜನರಿಗಾಗಿ ಏನೆಲ್ಲಾ ಮಾಡಬೇಕು, ಮಾಡುತ್ತೇನೆ ಎನ್ನುವ ದೊಡ್ಡ ಲಿಸ್ಟ್ ಕೊಟ್ಟಿವರು ಅವರು. ಕೊನೆಗೆ ಇಡೀ ವ್ಯವಸ್ಥೆಯನ್ನೇ ಸರಿ ಮಾಡುತ್ತೇನೆ ಎಂದೆಲ್ಲಾ ಭಾಷಣ ಮಾಡುತ್ತಲೇ ಸದ್ಯ ಸೈಲೆಂಟ್ ಆಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಆಗೀಗ ಕಾಣಿಸಿಕೊಂಡು, ಸ್ಟೇಟ್ಮೆಂಟ್ ಕೊಡುತ್ತಿರುವ ಪ್ರದೀಪ್ ಈಶ್ವರ್ ಅವರು, ಇದೀಗ ತಾವು ಮುಂದಿನ ಸಿಎಂ ಆದರೆ ಏನು ಮಾಡುತ್ತೇವೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಕೀರ್ತಿ ಎಂಟರ್ಟೇನ್ಮೆಂಟ್ ಚಾನೆಲ್ನಲ್ಲಿ ಅವರಿಗೆ ಸಿಎಂ (Next Chief Minister of Karnatana) ಆದ್ರೆ ಐದು ಭರವಸೆಗಳ ಬಗ್ಗೆ ಕೇಳಲಾಯಿತು. ಅದರಲ್ಲಿ ಅವರು ಮೂರು ಭರವಸೆಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮೂರ್ತಿ ಪೂಜೆಯಲ್ಲಿ ಪಾಲ್ಗೊಳ್ಳೋದು ಶಿರ್ಕ್, ಇದು ಕಟ್ಟಾಜ್ಞೆ: ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಮಾತು ಕೇಳಿ...
ಮೊದಲನೆಯದ್ದಾಗಿ SC-ST ಸಮುದಾಯಕ್ಕೆ ಮನೆ ಸರಿಯಾಗಿ ಇಲ್ಲ. ಸರ್ಕಾರದಿಂದ ಅವರಿಗೆ ಮನೆ ಕೊಡಬೇಕು. ನಾನು ತುಂಬಾ ಕಡೆ ನೋಡಿದ್ದೇನೆ. ಫೌಂಡೇಷನ್ ಹಾಕಿ ಹಾಗೆಯೇ ಬಿಟ್ಟಿದ್ದಾರೆ. ಅವರಿಗೆ ಡೀಸೆಂಟ್ ಮನೆ ಕೊಡುತ್ತೇನೆ. ಸರ್ಕಾರನೇ ಕಟ್ಟಿಕೊಡುವ ರೀತಿ ಮಾಡುತ್ತೇನೆ ಎಂದಿದ್ದಾರೆ. ಎರಡನೆಯ ಭರವಸೆ ಎಲ್ಲರಿಗೂ ಫುಡ್ ಸೆಕ್ಯೂರಿಟಿ ಎಂದಿದ್ದಾರೆ. ಎಲ್ಲರಿಗೂ ಆಹಾರ ಸಿಗುವ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಮೂರನೆಯ ಭರವಸೆ ಎಂದರೆ, ಖಾಸಗಿ ಆಸ್ಪತ್ರೆ ಸೇರಿದಂತೆ ಎಲ್ಲೆಡೆ ಉಚಿತ ವೈದ್ಯಕೀಯ ಸೌಲಭ್ಯ ಎಂದಿದ್ದಾರೆ ಪ್ರದೀಪ್ ಈಶ್ವರ್. ಆರೋಗ್ಯ ಕ್ಷೇತ್ರವನ್ನು ಫ್ರೀ ಮಾಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿಯೂ ಚಾರ್ಜ್ ಮಾಡಬಾರದು. ನಾನು ನನ್ನ ಕ್ಷೇತ್ರದಲ್ಲಿ 12 ನಿಮಿಷಕ್ಕೆ ಆ್ಯಂಬುಲೆನ್ಸ್ ಕಳಿಸುವ ವ್ಯವಸ್ಥೆ ಮಾಡಿದ್ದೇನೆ. ಸರ್ಕಾರ 100-200 ಕೋಟಿ ಖರ್ಚು ಮಾಡಿದರೆ ಇವೆಲ್ಲವೂ ಸಾಧ್ಯ ಎಂದು ಹೇಳಿದ್ದಾರೆ.
ಖಾಸಗಿ ಜೀವನದ ಬಗ್ಗೆ ಮಾತು
ಇದೇ ಸಂದರ್ಶನದಲ್ಲಿ ಪ್ರದೀಪ್ ಅವರು ತಮ್ಮ ಜೀವನದ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪ್ರೀತಿ, ಪ್ರೇಮ ಇತ್ಯಾದಿಗಳ ಬಗ್ಗೆಯೂ ತಮ್ಮ ಎಂದಿನ ವಾಕ್ಚಾತುರ್ಯವನ್ನು ಮೆರೆದಿದ್ದಾರೆ. ಈಗ ಕೀರ್ತಿ ಅವರು ಪ್ರದೀಪ್ ಅವರಿಗೆ ಅವರ ಆಸ್ತಿಯ ಬಗ್ಗೆ ಕೇಳಿದ್ದಾರೆ. ಮೊಬೈಲ್ ನಂಬರ್ನಷ್ಟೇ ಆಸ್ತಿ ಇರಬೇಕು ಎಂದಿದ್ರಿ. ಈಗ ನಿಮ್ಮ ಆಸ್ತಿ ಅಷ್ಟೇ ಆಗಿದ್ಯಾ ಅಥ್ವಾ 8 ಡಿಜಿಟ್ವರೆಗೂ ಬಂದಿದ್ಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರದೀಪ್ ಅವರು, ಆಂ. ಊಂ... ಎನ್ನುತ್ತಲೇ ಅಷ್ಟೆಲ್ಲಾ ಬಂದಿಲ್ಲ. ಪಾಪ ಐಟಿಯವರು ನಮ್ಮ ಮನೆಯವರೆಗೂ ಬರಲು ರೆಡಿ ಇದ್ದಾರೆ ಎಂದು ತಮಾಷೆ ಮಾಡಿದ್ದಾರೆ. ನನ್ನ ಬ್ಯಾಂಕ್ ಬ್ಯಾಲೆನ್ಸ್ ಕಾನ್ಫಿಡೆನ್ಸ್ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಮಾಜಿ ಪ್ರೇಯಸಿಯ ಬಗ್ಗೆಯೂ ಹೇಳಿದ್ದಾರೆ. ನನ್ನ ಲೈಫ್ನಲ್ಲಿ ಮೂರು ಕಾಸ್ಲ್ಟಿಯಾಗಿರುವ ವಸ್ತುವಿದೆ. ಅದರಲ್ಲಿ ಒಂದು ನನ್ನ ಐ-ಫೋನ್, ಇನ್ನೊಂದು BMW X7 ಕಾರು. ಮೂರನೆಯದ್ದು ಸ್ವಿಸ್ ಬ್ಯಾಂಕ್ ಮಾರಿದ್ರೂ ಖರೀದಿ ಮಾಡಲು ಆಗದ ನನ್ನ ಕನಸುಗಳು ಎಂದಿದ್ದಾರೆ. ಅದಕ್ಕೆ ಕೀರ್ತಿ ಇದೇ ಕಾರು ಯಾಕೆ ಎಂದು ಪ್ರಶ್ನಿಸಿದಾಗ, ಪ್ರದೀಪ್ ಅವರು ಅಲ್ಲಿಯೂ ಹಾಸ್ಯಚಟಾಕಿ ಹಾರಿಸಿ ನನ್ನ ಎಕ್ಸ್ನ ಮರೆಯಲು BMW X ತೆಗೆದುಕೊಂಡಿದ್ದೇನೆ ಎಂದು ಇಂಗ್ಲಿಷ್ನಲ್ಲಿ ಹೇಳಿದ್ದಾರೆ. ಇನ್ನೇನು ಮಾಡೋಕೆ ಆಗತ್ತೆ? ಹಳೆಯದ್ದಕ್ಕೆ ಜೋತು ಬೀಳೋಕೆ ಆಗತ್ತಾ ಎಂದು ಪ್ರಶ್ನಿಸಿದ್ದಾರೆ.
ಬಿಗ್ಬಾಸ್ನಿಂದ (Bigg Boss) ಫೇಮಸ್
ಅಷ್ಟಕ್ಕೂ ಪ್ರದೀಪ್ ಅವರು, ಇನ್ನಷ್ಟು ಫೇಮಸ್ ಆಗಿದ್ದು, ಬಿಗ್ಬಾಸ್ಗೆ ಹೋಗಿದ್ದರಿಂದ. ಹೋದ ದಿನದಿಂದಲೇ ಸಕತ್ ಟ್ರೋಲ್ಗೆ ಒಳಗಾಗಿದ್ದ ಪ್ರದೀಪ್ ಅವರು ಹೋದ ಒಂದೇ ದಿನಕ್ಕೆ ಮರಳಿದ್ದರು. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದೇ ಹೇಳಲಾಗಿತ್ತು. ಅವರು ಬಿಗ್ಬಾಸ್ ಮನೆಯೊಳಕ್ಕೆ ಒಂದು ದಿನ ಲೇಟಾಗಿ ಎಂಟ್ರಿ ಕೊಟ್ಟಿದ್ದರು. ಅವರನ್ನು ನೋಡಿ ಉಳಿದ ಸ್ಪರ್ಧಿಗಳಿಗೂ ಅಚ್ಚರಿಯಾಗಿತ್ತು, ಅದೇ ರೀತಿ ಪ್ರೇಕ್ಷಕರೂ ಸಕತ್ ಅಚ್ಚರಿ ಪಟ್ಟುಕೊಂಡಿದ್ದರು. ಆದರೆ ಅವರು ಹೋದದ್ದು ಅತಿಥಿಯಾಗಿ. ಅವರು ಬಿಗ್ಬಾಸ್ ಮನೆಯೊಳಕ್ಕೆ ಹೋದ ಒಂದೇ ದಿನದಲ್ಲಿ ರಾಜಕೀಯ ವಲಯದಲ್ಲಿಯೂ ಸಾಕಷ್ಟು ಟೀಕೆಗಳು ಶುರುವಾಗಿದ್ದವು. ಇವರ ಅಮಾನತಿಗೆ ವಿಪಕ್ಷ ಆಗ್ರಹಿಸಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣದಲ್ಲಿಯೂ ನೂರಾರು ರೀತಿಯ ಮೀಮ್ಸ್ಗಳು ಹರಿದಾಡುತ್ತಿದ್ದವು. ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ತಮ್ಮ ಕ್ಷೇತ್ರವನ್ನು ಉದ್ಧಾರ ಮಾಡಲು, ಬಿಗ್ಬಾಸ್ ಮನೆಗೆ ಹೋಗಿ ಸೇರಿಕೊಳ್ಳಲು ಅಲ್ಲ ಅಂದೆಲ್ಲಾ ಟೀಕೆಗಳು ಕೇಳಿಬಂದಿದ್ದವು, ಖುದ್ದು ಕಾಂಗ್ರೆಸ್ಸಿಗರೂ ಕೆಲವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಕೊನೆಗೆ ಅವರು ಹೊರಕ್ಕೆ ಬಂದಿದ್ದರು. ತಾವು ಬಿಗ್ಬಾಸ್ ಮನೆಯೊಳಕ್ಕೆ ಹೋಗಿದ್ದ ಕಾರಣ ಕೊಟ್ಟು ಮತ್ತಷ್ಟು ಟ್ರೋಲ್ಗೆ ಒಳಗಾಗಿದ್ದರು. ಅನಾಥ ಮಕ್ಕಳಿಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿರುವುದಾಗಿ ಹೇಳಿದ್ದರು. ಬಿಗ್ ಬಾಸ್ನಿಂದ ಬಂದ ಹಣವನ್ನ ಅಪ್ಪಅಮ್ಮನಿಲ್ಲದ ಮಕ್ಕಳಿಗೆ ನೀಡಲು ನಿರ್ಧಾರ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ವಿಮಾನದಲ್ಲಿ ಮೊಳಗಿತು ಕನ್ನಡ: ಭಾಷೆ ಕಲಿತು ಮಾತನಾಡಿದ ಪೈಲೆಟ್! ವಿಡಿಯೋ ವೈರಲ್
