KN Rajanna: ಮಾಜಿ ಸಚಿವ ರಾಜುಗೌಡ ಅವರ ಸ್ಫೋಟಕ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ, ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. 

ಬೆಂಗಳೂರು: ಬಿಜೆಪಿಯ ಮಾಜಿ ಸಚಿವ ರಾಜುಗೌಡ (Former Minister Raju Gowda) ಸ್ಫೋಟಕ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ (Minister Satish Jarkiholi) ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಕೆ.ಎನ್.ರಾಜಣ್ಣ (Former Minister KN Rajanna) ಅವರನ್ನು ಸಂಪುಟದಿಂದ ಕೈ ಬಿಟ್ಟಿರೋದರ ಬಗ್ಗೆಯೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ವಜಾ ಆಗಿರೋದು ಹೈಕಮಾಂಡ್ (Congress High Command) ನಿರ್ಧಾರ ಅಂತ ರಾಜಣ್ಣ ಅವರೇ ಹೇಳಿದ್ದಾರೆ. ಈ ಸಂಬಂಧ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗೋದಾಗಿಯೂ ತಿಳಿಸಿದ್ದಾರೆ. ಮುಂದೆ ಎಲ್ಲವೂ ಸರಿ ಹೋಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮುದಾಯಕ್ಕೆ ಮೋಸ ಅಂತ ವ್ಯಾಖ್ಯಾನ ಮಾಡಲ್ಲ

ಮುಂದುವರಿದು ಕೆ.ಎನ್.ರಾಜಣ್ಣ ಇದನ್ನು ಪಿತೂರಿ ಅಂತ ಹೇಳಿದ್ದಾರೆ. ಹೈಕಮಾಂಡ್ ಹತ್ತಿರ ಹೋಗಿ ಅವರು ಮಾತಾಡ್ತಾರೆ. ಈ ವಜಾ ಸಮುದಾಯಕ್ಕೆ ಮೋಸ ಎಂದು ವ್ಯಾಖ್ಯಾನ ಮಾಡಲು ಆಗಲ್ಲ. ಏನು ಅಂತ ರಾಜಣ್ಣ ‌ಮುಂದೆ ಹೇಳ್ತೀನಿ ಅಂತ ಹೇಳಿದ್ದಾರೆ. ಮುಂದೆ‌‌ ನೋಡೋಣ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂಬ ಮಾತುಗಳನ್ನಾಡಿದರು.

ವಿರೋಧ ಪಕ್ಷದ ನಾಯಕರು ಯಾಕೆ ಮಾತಾಡ್ತಾರೆ?

ರಾಜಣ್ಣ ವಜಾಗೊಂಡಿರೋದು ನಮ್ಮ ಪಕ್ಷದ ನಿರ್ಧಾರವಾಗಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಯಾಕೆ ಮಾತಾಡ್ತಿದ್ದಾರೆ ಎಂದು ಪ್ರಶ್ನಿಸಿದ ಸತೀಶ್ ಜಾರಕಿಹೊಳಿ, ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡುತ್ತಾರೆ ಎಂದರು. ದೆಹಲಿಗೆ ಹೋದ ಮೇಲೆ ‌ಎಲ್ಲವೂ ತಿಳಿ ಆಗಬಹುದು. ರಾಜಕೀಯದಲ್ಲಿ ಹುಷಾರಾಗಿ ಇರಬೇಕು. ಇಲ್ಲದೆ ಹೋದ್ರೆ ಹೀಗೆ ಅಗುತ್ತದೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಇರೋದು ಸಾಮಾನ್ಯ ಎಂದು ತಮ್ಮ ಮಾತನ್ನು ಸತೀಶ್ ಜಾರಕಿಹೊಳಿ ಪುನರುಚ್ಛಿಸಿದರು.

ಇದು ಸೆಟಲ್ಮೆಂಟ್ ಪಾಲಿಟಿಕ್ಸಾ ಎಂಬ ಮಾಧ್ಯಮದ ಪ್ರಶ್ನೆಗೆ ರಾಜಕೀಯದಲ್ಲಿ ಇದೆಲ್ಲವೂ ಇರುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದ್ರೆ ಹೀಗೆ ಆಗುತ್ತದೆ.ಹೈಕಮಾಂಡ್ ಮುಂದೆ ರಾಜಣ್ಣ ಕನ್ವಿನ್ಸ್ ಮಾಡೋ ಪ್ರಯತ್ನ ‌ಮಾಡ್ತಾರೆ. ಆಗ ಸರಿ ಹೋಗಬಹುದು ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ರಾಜುಗೌಡ ಸ್ಪೋಟಕ ಹೇಳಿಕೆ ಏನು?

ವಾಲ್ಮೀಕಿ ಸಮುದಾಯದಲ್ಲಿ ಒಗ್ಗಟ್ಟಿಲ್ಲದೇ ಇರುವುದೇ ಈ ಎಲ್ಲ ಸಮಸ್ಯೆಗಳಿಗೆ ಕಾರಣ. ನಮ್ಮ ಸಮುದಾಯದಲ್ಲಿ ನಾವು ಹುಟ್ಟುವಾಗಲೇ ನಾಯಕರು. ಆದರೆ, ಒಬ್ಬರೇ ನಾಯಕರಾಗಬೇಕೆಂಬ ಮನೋಭಾವ ಇಲ್ಲ. ಇದರಿಂದ ನಮ್ಮ ಸಮುದಾಯದ ಮೇಲೆ ದಾಳಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಿದೆ. ಮಂತ್ರಿ ಸ್ಥಾನ ಕೊಡುವ ಆಸೆಯನ್ನು ತೋರಿಸಿ ನಮ್ಮನ್ನು ಒಡೆಯುವ ಕೆಲಸ ಮಾಡುತ್ತಾರೆ ಎಂದು ರಾಜುಗೌಡ ಸ್ಫೋಟಕ ಹೇಳಿಕೆ ನೀಡಿದ್ದರು.

ಇದೇ ವೇಳೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ ಅವರ ಪ್ರಕರಣಗಳನ್ನೂ ರಾಜುಗೌಡ ಉಲ್ಲೇಖಿಸಿದರು. ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ, ರಾಯಚೂರು, ಬಳ್ಳಾರಿ ಚ ಚುನಾವಣೆಗೆ ಬಳಸಿ ನಾಗೇಂದ್ರ ಅವರನ್ನು ಬಲಿಪಶು ಮಾಡಲಾಯ್ತು. ಇದೀಗ ರಾಜಣ್ಣ, ಮುಂದೆ ಸತೀಶ್ ಜಾರಕಿಹೊಳಿ ಸರದಿ ಎಂದು ಹೇಳಿದ್ದರು. ಈ ಮೂಲಕ ಮುಂದೆ ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಟಾರ್ಗೆಟ್ ಮಾಡಲಾಗುತ್ತೆ ಎಂದು ರಾಜುಗೌಡ ಭವಿಷ್ಯ ನುಡಿದಿದ್ದಾರೆ.

Scroll to load tweet…