ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಬಿದ್ದಿದೆ. ಮಧುಗಿರಿ ಪುರಸಭೆ ಸದಸ್ಯತ್ವಕ್ಕೆ ಗಿರಿಜಾ ಮಂಜುನಾಥ್ ರಾಜೀನಾಮೆ ನೀಡಿದ್ದಾರೆ.

ತುಮಕೂರು (ಆ.11) ರಾಹುಲ್ ಗಾಂಧಿ ಅಭಿಯಾನದ ವಿರುದ್ಧವೇ ಹೇಳಿಕೆ ನೀಡಿದ ಕೆಎನ್ ರಾಜಣ್ಣ ತಲೆದಂಡವಾಗಿದೆ. ಸಚಿವರಾಗಿದ್ದ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಹೈಕಮಾಂಡ್ ಸೂಚನೆಯಿಂದ ತಮ್ಮ ಆಪ್ತನ ವಿರುದ್ಧವೇ ಸಿದ್ದರಾಮಯ್ಯ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಕೆಎನ್ ರಾಜಣ್ಣ ರಾಜೀನಾಮೆ ಹಿನ್ನಲೆಯಲ್ಲಿ ಮಧುಗಿರಿ ಪುರಸಭೆ ಸದಸ್ಯತ್ವಕ್ಕೆ ಗಿರಿಜಾ ಮಂಜುನಾಥ್ ರಾಜೀನಾಮೆ ನೀಡಿದ್ದಾರೆ.

ರಾಜಣ್ಣ ಬೆಂಬಲಿಗರಾಗಿರುವ ಗಿರಿಜಾ ಮಂಜುನಾಥ್ ರಾಜೀನಾಮೆ

ಕೆಎನ್ ರಾಜಣ್ಣ ತುಮಕೂರಿನ ಮಧುಗಿರಿ ಶಾಸಕರಾಗಿದ್ದಾರೆ. ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಪಕ್ಷ ವಿರೋಧಿ ಹೇಳಿಕೆ ಅಡಿ ವಜಾ ಮಾಡಿದ್ದಾರೆ. ಈ ನಿರ್ಧಾರದಿಂದ ಕೆಎನ್ ರಾಜಣ್ಣ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ. ರಾಜಣ್ಣ ಬೆಂಬಲಿಗರಾಗಿರುವ ಮಧುಗಿರಿ ಪುರಸಭೆಯ 10ನೇ ವಾರ್ಡ್ ಸದಸ್ಯೆ ಗಿರಿಜಾ ಮಂಜುನಾಥ್ ರಾಜೀನಾಮೆ ನೀಡಿದ್ದಾರೆ. ರಾಜಣ್ಣ ಅವರನ್ನು ವಜಾ ಮಾಡಿರುವ ನಿರ್ಧಾರ ತೀವ್ರ ಬೇಸರ ತಂದಿದೆ ಎಂದು ಗಿರಿಜಾ ಮಂಜುನಾಥ್ ಹೇಳಿದ್ದಾರೆ.

ರಾಜಣ್ಣ ವಜಾಗೆ ಗಿರಿಜಾ ಮಂಜುನಾಥ್ ಆಕ್ರೋಶ

ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದಕ್ಕೆ ಗಿರಿಜಾ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿರುವುದಾಗಿ ಗಿರಿಜಾ ಮಂಜುನಾಥ್ ಹೇಳಿದ್ದಾರೆ. ಮಧುಗಿರಿ ಉಪ ವಿಭಾಗಾಧಿಕಾರಿಗೆ ಗಿರೀಜಾ ಮಂಜುನಾಥ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಮತ್ತಷ್ಟು ಸದಸ್ಯರಿಂದ ರಾಜೀನಾಮೆ ಸಾಧ್ಯತೆ

ಕೆಎನ್ ರಾಜಣ್ಣ ವಜಾ ಮಾಡಿರುವ ಕ್ರಮಕ್ಕೆ ಮಧುಗಿರಿ ಪುರಸಭೆ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜಣ್ಣ ಅವರ ವಿರುದ್ಧ ಈ ನಿರ್ಧಾರ ತೆಗೆದುಕೊಂಡಿರುವುದು ನಮಗೆ ಬೇಸರ ತರಿಸಿದೆ. ಹೀಗಾಗಿ ಮಧುಗಿರಿ ಪುರಸಭೆಯ ಹಲವು ಸದಸ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ನಾಳೆ (ಆ.12) ಕೆಲ ಸದಸ್ಯರು ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಹೋರಾಟದ ಎಚ್ಚರಿಕೆ ನೀಡಿದ ರಾಜಣ್ಣ ಬೆಂಬಲಿಗರು

ರಾಜಣ್ಣ ವಜಾ ಮಾಹಿತಿ ತಿಳಿಯುತ್ತಿದ್ದಂತೆ ತುಮಕೂರಿನ ಕ್ಯಾತಸಂದ್ರ ಬಳಿಯಿರುವ ಕೆಎನ್ ರಾಜಣ್ಣ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ರಾಜಣ್ಣ ಪರ ಘೋಷಣೆ ಕೂಗಿದ್ದಾರೆ. ಅಹಿಂದ ಒಕ್ಕೂಟ ಅಧ್ಯಕ್ಷ ಹಾಗೂ ರಾಜಣ್ಣರ ಬೆಂಬಲಿಗ ಧನಿಯಾ ಕುಮಾರ್ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ರಾಜಣ್ಣ ತುಮಕೂರು ಜಿಲ್ಲೆಗೆ ದೇವರಾಜು ಅರಸು ಇದ್ದ ಹಾಗೆ. ಅವರು ಅಹಿಂದ ವರ್ಗದ ದೇವರು. ಅವರನ್ನು ವಜಾಗೊಳಿಸಿದ ನಿರ್ಧಾರ ತಪ್ಪು ಎಂದು ಧನಿಯಾ ಕುಮಾರ್ ಹೇಳಿದ್ದಾರೆ. ರಾಜಣ್ಣ ವಜಾ ಮಾಡಿದರೆ ಕಾಂಗ್ರೆಸ್ ಮುಳುಗಿ ಹೋಗಲಿದೆ. ನಾವು ರಾಜ್ಯಾದ್ಯಂತ ಹೋರಾಟ ಮಾಡಿ ಕಾಂಗ್ರೆಸ್ ನ್ನು ವಜಾ ಮಾಡುತ್ತೇವೆ. ನಾಳೆಯಿಂದ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಧನಿಯಾ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಕೆಎನ್ ರಾಜಣ್ಣಗೆ ಸಮಾಧಾನ ಮಾಡಿದ ಸಿಎಂ ಸಿದ್ದರಾಮಯ್ಯ

ಕೆಎನ್ ರಾಜಣ್ಣ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಎಲ್ಲಾ ಪ್ರಯತ್ನ ಮಾಡಿದ್ದರು. ಆದರೆ ಹೈಕಮಾಂಡ್ ಸ್ಪಷ್ಟ ಆದೇಶದ ಮುಂದೆ ಸಾಧ್ಯವಾಗಲಿಲ್ಲ. ವಜಾಗೊಂಡ ಬಳಿಕ ಸಿಎಂ ಸಿದ್ದರಾಮಯ್ಯ ಭೇಟಿಯಾದ ಕೆಎನ್ ರಾಜಣ್ಣ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ, ನಿಮ್ಮಜೊತೆಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಕೆಎನ್ ರಾಜಣ್ಣ ವಜಾ ಘಟನೆ ಕುರಿತು ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ. ವಜಾಗೊಳಿಸಿರುವುದಕ್ಕೆ ಕಾರಣ ತಿಳಿದಿಲ್ಲ, ಇದು ಪಕ್ಷದ ನಿರ್ಧಾರ ಎಂದಿದ್ದಾರೆ.