ಭದ್ರಾವತಿ ಪ್ರಕರಣದಲ್ಲಿ ಮಾಧ್ಯಮದವರು ಕರೆಕ್ಟಾಗಿ ಏನು ಅಂತಾ ತಿಳಿದುಕೊಳ್ಳಿ. ಈಗಾಗಲೇ ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದೆಂಬ ಆರೋಪದ ಹಿನ್ನೆಲೆ ಆ ದೃಶ್ಯಾವಳಿಗಳನ್ನು ಎಫ್‌ಎಸ್‌ಎಲ್‌ಗೂ ಕಳಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ದಾವಣಗೆರೆ (ಸೆ.14): ಭದ್ರಾವತಿ ಪ್ರಕರಣದಲ್ಲಿ ಮಾಧ್ಯಮದವರು ಕರೆಕ್ಟಾಗಿ ಏನು ಅಂತಾ ತಿಳಿದುಕೊಳ್ಳಿ. ಈಗಾಗಲೇ ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದೆಂಬ ಆರೋಪದ ಹಿನ್ನೆಲೆ ಆ ದೃಶ್ಯಾವಳಿಗಳನ್ನು ಎಫ್‌ಎಸ್‌ಎಲ್‌ಗೂ ಕಳಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಶಿವಮೊಗ್ಗ ವಿಚಾರದಲ್ಲಿ ಯಾರೂ ಬಾಲ ಬಿಚ್ಚುವಂತಿಲ್ಲ, ಹೇಳಿ ಬಿಡ್ತೀನಿ... ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ವಿಚಾರದಲ್ಲಿ ಅದು ಇನ್ನೊಂದು ಭಾಗವಿದೆ. ಅಲ್ಲಿದ್ದವರು ಹೇಳಿದ ವರ್ಡ್ಸ್ ಬೇರೆ. ಅದು ವಿಪಕ್ಷದವರು ಹೇಳಿದ ಹಾಗೆ ಇಲ್ಲವೇ ಇಲ್ಲ. ಈ ಹಿನ್ನೆಲೆ ಸತ್ಯಾಸತ್ಯತೆ ತಿಳಿಯಲು ದೃಶ್ಯಾವಳಿ ಎಫ್ಎಸ್ಎಲ್‌ಗೆ ಕಳಿಸಿದ್ದೇವೆ. ಒಂದುವೇಳೆ ವಿಪಕ್ಷದವರು ಆರೋಪಿಸಿದಂತೆ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ಕೈಗೊಳ್ಳಿ ಅಂತಾನೂ ಸೂಚಿಸಿದ್ದೇವೆ ಎಂದು ಅವರು ತಿಳಿಸಿದರು. ಘಟನೆ ಮಾರನೆಯ ದಿನವೇ ನಾನು ಈ ಮಾತನ್ನು ಹೇಳಿದ್ದೇನೆ. ನಾನು ಶಿವಮೊಗ್ಗ ವಿಚಾರದಲ್ಲಿ ಹೇಳಿ ಬಿಡ್ತೀನಿ, ಯಾವನೂ ಸಹ ಬಾಯಿ ಬಿಚ್ಚುವಂತಿಲ್ಲ. ಯಾಕೆಂದರೆ ಅದು ತಪ್ಪು. ಕಾನೂನೇ ಗೆಲ್ಲಬೇಕು. ನಮ್ಮ ದೇಶದಲ್ಲಿ ಕಾನೂನು ಗೆದ್ದಾಗ ನಾವು, ನೀವು ಸುರಕ್ಷಿತವಾಗಿರುತ್ತೇವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಿಬಿಐಗಿಂತಲೂ ಎಸ್ಐಟಿ ತಂಡವೇ ಉತ್ತಮ
ಧರ್ಮಸ್ಥಳ ಪ್ರಕರಣವನ್ನು ಮುಂಚೆ ಸಿಬಿಐಗೆ ಕೊಟ್ಟಿದ್ದರಲ್ಲವಾ? ಸಿಬಿಐ ಯಾವ ಪಕ್ಷವಂತೆ? ಸಿಬಿಐ ತನಿಖೆ ವೇಳೆ ಯಾಕೆ ಧರ್ಮಯೋಧರು ಹೋಗಲಿಲ್ಲ? ಬಿಜೆಪಿಯವರ ಜೊತೆಗೆ ಪುಕ್ಸಟ್ಟೆಯಾಗಿ ಜೆಡಿಎಸ್‌ನವರು ಸಿಕ್ಕಿ ಹಾಕಿಕೊಂಡಿದ್ದಾರೆ. ಸಿಬಿಐ ತನಿಖೆ ನಡೆಯುವಾಗ ಇಂತಹವರೆಲ್ಲಾ ಎಲ್ಲಿ ಹೋಗಿದ್ದರು? ಬಿಜೆಪಿ-ಜೆಡಿಎಸ್- ಕಾಂಗ್ರೆಸ್ ಮೂವರೂ ಅಧಿಕಾರ ಮಾಡಿದ್ದಾರೆ. ಎಸ್ಐಟಿ ಮಾಡುವವರೆಗೂ ಸುಮ್ಮನೇ ಕುಳಿತಿದ್ದರು ಎಂದು ಮಧು ಬಂಗಾರಪ್ಪ ಟೀಕಿಸಿದರು. ಇನ್ನೂ ಎಫ್‌ಎಸ್‌ಎಲ್ ವರದಿ ಸೇರಿ ಕೆಲವು ವರದಿಗಳು ಬರಬೇಕೆನ್ನುತ್ತಿದ್ದಾರೆ. ಸಿಬಿಐನವರು ತಮ್ಮ ಕೈಯಲ್ಲಿ ಈ ಪ್ರಕರಣದ ತನಿಖೆ ಆಗುವುದಿಲ್ಲ ಎಂದು ಹೇಳಿ ಬಿಟ್ಟರಲ್ಲವಾ? ಸಿಬಿಐನವರೇ ಸೋತು ಹೋದರು. ಆದರೆ, ಸಿಬಿಐಗೆ ಹೋಲಿಸಿದರೆ ನಮ್ಮವರೇ ಬೆಟರ್.
ಹಾಗೆ ನೋಡಿದರೆ ಸಿಬಿಐಗಿಂತಲೂ ಎಸ್ಐಟಿ ತನಿಖಾ ತಂಡವೇ ಉತ್ತಮ ಎಂದು ಅಭಿಪ್ರಾಯಪಟ್ಟರು. ತಾವು ಮುಂದಿನ ಜನ್ಮದಲ್ಲಿ ಮುಸ್ಲಿಂ ಧರ್ಮದಲ್ಲಿ ಹುಟ್ಟುತ್ತೇನೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಹೇಳಿದ್ದರಲ್ಲ. ಬೇಡ ಅಂತಾ ನಾನು ಹೇಳುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಲಿ. ಅದರ ಜೊತೆಗೆ ಇನ್ನೊಂದನ್ನೂ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗ್ತೀನಿ ಅಂತಾ. ಈಗ ಅದೇ ಮೋದಿ ಕೈಹಿಡಿದುಕೊಂಡು ದೇವೇಗೌಡರು ಓಡಾಡುತ್ತಿದ್ದಾರೆ. ಅದರ ಬಗ್ಗೆ ತಿಳಿಯಲಿ. ನಾನು ಮತ್ತೆ ಹೇಳುತ್ತೇನೆ ಎಂದು ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ ಕುರಿತ ಪ್ರಶ್ನೆಗೆ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದರು.
