top headlines highlights in kannada: 'ಐ ಲವ್ ಮೊಹಮ್ಮದ್' ಅಭಿಯಾನವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡರೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಮೀಕ್ಷೆ ನಡೆಸುತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
1.'ಐ ಲವ್ ಮೊಹಮ್ಮದ್' ಎಂದರೆ ತಪ್ಪೇನು? ಕಾಂಗ್ರೆಸ್ ಪ್ರಶ್ನೆ
ಕರ್ನಾಟಕ ಸೇರಿ ದೇಶದ 5ಕ್ಕೂ ಹೆಚ್ಚು ರಾಜ್ಯಗಳಲ್ಲಿ ವ್ಯಾಪಿಸಿರುವ ‘ಐ ಲವ್ ಮೊಹಮ್ಮದ್’ ಅಭಿಯಾನವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಜನರು ‘ತಮ್ಮ ದೇವರಾದ ಮೊಹಮದ್‌ರ ಪ್ರತಿ ಪ್ರೀತಿ ತೋರಿಸಿಕೊಳ್ಳುವುದರಲ್ಲಿ ತಪ್ಪೇನು?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೆರಾ ಮಾತನಾಡಿ, ‘ಮೀರಾ ಬಾಯಿ, ಸೂಫಿ ಸಂತರು ಬಾಳಿದ ಸಾಮರಸ್ಯದ ನಾಡಿನಲ್ಲಿ, ಅನ್ಯಕೋಮಿಗೆ ಸೇರಿದ(ಮುಸಲ್ಮಾನ) 7 ವರ್ಷದ ಹುಡುಗನನ್ನು ಹಿಂದೂಗಳು ಬಲಿ ಕೊಟ್ಟಿದ್ದಾರೆ. ಆತನಿಂದ ತೊಂದರೆಯೇನಾಗಿತ್ತು? ಅತ್ತ ಯಾರಾದರೂ ತಮಗೆ ದೇವರ ಮೇಲೆ ಪ್ರೀತಿಯಿದೆ ಎಂದರೂ ನಿಮಗೆ ತೊಂದರೆಯಾಗುತ್ತದೆ’ ಎಂದು ತಿವಿದಿದ್ದಾರೆ.
2. ಗ್ಯಾರಂಟಿ ನಿಲ್ಲಿಸಲು ಆರ್ಥಿಕ ಸಮೀಕ್ಷೆ ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು : ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುತ್ತಿದೆ ಎನ್ನುವುದು ಸುಳ್ಳು. ಗ್ಯಾರಂಟಿಗಳನ್ನು ಯಾರಿಂದಲೂ ನಿಲ್ಲಿಸಲಾಗದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಭಾನುವಾರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಜಾತಿ ಆಧಾರಿತ ಜನಗಣತಿ ಮಾಡುತ್ತಿರುವುದೇ ಗ್ಯಾರಂಟಿ ಕಡಿತಕ್ಕೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
3.ಭಾರೀ ಮಳೆ : ಕಲ್ಯಾಣ ಕರ್ನಾಟಕದ 3 ಜಿಲ್ಲೆಗೆ ಮಹಾ ವಿಪತ್ತು
ಬೆಂಗಳೂರು : ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ಭೀಮಾನದಿಗೆ 5.10 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಲ್ಯಾಣ ಕರ್ನಾಟಕದ ಯಾದಗಿರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇಬ್ಬರು ಸಾವಿಗೀಡಾಗಿದ್ದಾರೆ. 2018ರ ನಂತರ ಇದೇ ಮೊದಲ ಬಾರಿಗೆ ಯಾದಗಿರಿ ನಗರಕ್ಕೆ ಭೀಮಾ ನದಿಯ ನೀರು ನುಗ್ಗಿದೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 95ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 210 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಮಳೆಯಿಂದಾಗಿ 2.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆಹಾನಿ ಸಂಭವಿಸಿದೆ.
4.IND vs PAK Asia Cup 2025: ಪಾಕಿಸ್ತಾನ ನಾಯಕನ ಜತೆ ಟ್ರೋಫಿ ಫೋಟೋಶೂಟ್‌ಗೆ ನಿಲ್ಲದ ಸೂರ್ಯ!
ಯಾವುದೇ ಟೂರ್ನಿ, ಸರಣಿ ನಡೆಯುವಾಗಲೂ ಟ್ರೋಫಿ ಜೊತೆ ನಾಯಕರ ಫೋಟೋಶೂಟ್ ನಡೆಯುವುದು ವಾಡಿಕೆ. ಅದರಲ್ಲೂ ಫೈನಲ್‌ಗೂ ಮುನ್ನ ಉಭಯ ತಂಡಗಳ ಆಟಗಾರರು ಟ್ರೋಫಿಯ ಎರಡು ಕಡೆಗಳಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಸಂಪ್ರದಾಯವಿದೆ. ಆದರೆ ಈ ಬಾರಿ ಏಷ್ಯಾಕಪ್ ಫೈನಲ್‌ಗೂ ಮುನ್ನ ಟ್ರೋಫಿ ಫೋಟೋಶೂಟ್‌ನಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಭಾಗಿಯಾಗಲಿಲ್ಲ. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಏಕಾಂಗಿಯಾಗಿ ಟ್ರೋಫಿ ಜೊತೆ ನಿಂತು ಫೋಟೋ ತೆಗೆಸಿಕೊಂಡರು.
5.ಟ್ರಂಪ್‌ಗೆ ಪಾಕ್‌ನ ಅಪರೂಪದ ಖನಿಜ ತೋರಿಸಿ ಪಾಕ್ ಡೀಲ್
ವಾಷಿಂಗ್ಟನ್: ಅಮೆರಿಕದ ಸ್ನೇಹ ಗಟ್ಟಿಗೊಳಿಸಲು ಹವಣಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸೀಮ್ ಮುನೀರ್, ತಮ್ಮ ಇತ್ತೀಚಿನ ಅಮೆರಿಕ ಭೇಟಿ ವೇಳೆ ಅಧ್ಯಕ್ಷ ಟ್ರಂಪ್‌ಗೆ ತಮ್ಮ ದೇಶದಲ್ಲಿ ಸಿಗುವ ಅಪರೂಪದ ಖನಿಜಗಳನ್ನು ತೋರಿಸಿದ್ದಾರೆ. ವಾಹನ, ಕಂಪ್ಯೂಟರ್, ಚಿಪ್ ಸೇರಿ ತಂತ್ರಜ್ಞಾನ ವಲಯದಲ್ಲಿ ಬಹುವಾಗಿ ಬೇಕಿರುವ ಅಪರೂಪದ ಲೋಹಗಳಿಗೆ ಅಮೆರಿಕ ಬಹುವಾಗಿ ಚೀನಾ ಅವಲಂಬಿಸಿದೆ. ಆದರೆ ಅಮೆರಿಕಕ್ಕೆ ಏಟು ನೀಡಲು ಇಂಥ ವಸ್ತುಗಳ ರಫ್ತಿನ ಮೇಲೆ ಚೀನಾ ಕಡಿವಾಣ ಹಾಕಿದೆ. ಹೀಗಾಗಿ ತನ್ನ ದೇಶದಲ್ಲಿ ಲಭ್ಯವಿರುವ ಅದೇ ಖನಿಜಗಳ ಮಾದರಿಯನ್ನು ಪಾಕ್ ನಾಯಕರು, ಬ್ರೀಫ್‌ಕೇಸ್‌ನಲ್ಲಿ ಇಟ್ಟು ಟ್ರಂಪ್‌ಗೆ ತೋರಿಸಿದ್ದಾರೆ.
