Suryakumar Yadav skips trophy photo ಏಷ್ಯಾಕಪ್ ಫೈನಲ್‌ಗೂ ಮುನ್ನ ನಡೆದ ಟ್ರೋಫಿ ಫೋಟೋಶೂಟ್‌ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಭಾಗವಹಿಸಲಿಲ್ಲ, ಪಾಕಿಸ್ತಾನ ನಾಯಕ ಮಾತ್ರ ಏಕಾಂಗಿ ಫೋಟೋ ತೆಗೆಸಿಕೊಂಡರು. ಅ.ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಟಾಸ್ ವೇಳೆ ಇಬ್ಬರು ನಿರೂಪಕರು ಕಾಣಿಸಿಕೊಂಡರು.

Asia Cup final photoshoot controversy: ಯಾವುದೇ ಟೂರ್ನಿ, ಸರಣಿ ನಡೆಯುವಾಗಲೂ ಟ್ರೋಫಿ ಜೊತೆ ನಾಯಕರ ಫೋಟೋಶೂಟ್‌ ನಡೆಯುವುದು ವಾಡಿಕೆ. ಅದರಲ್ಲೂ ಫೈನಲ್‌ಗೂ ಮುನ್ನ ಉಭಯ ತಂಡಗಳ ಆಟಗಾರರು ಟ್ರೋಫಿಯ ಎರಡು ಕಡೆಗಳಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಸಂಪ್ರದಾಯವಿದೆ. ಆದರೆ ಈ ಬಾರಿ ಏಷ್ಯಾಕಪ್‌ ಫೈನಲ್‌ಗೂ ಮುನ್ನ ಟ್ರೋಫಿ ಫೋಟೋಶೂಟ್‌ನಲ್ಲಿ ಭಾರತದ ನಾಯಕ ಸೂರ್ಯಕುಮಾರ್‌ ಭಾಗಿಯಾಗಲಿಲ್ಲ. ಪಾಕಿಸ್ತಾನ ನಾಯಕ ಸಲ್ಮಾನ್ ಆಘಾ ಏಕಾಂಗಿಯಾಗಿ ಟ್ರೋಫಿ ಜೊತೆ ನಿಂತು ಫೋಟೋ ತೆಗೆಸಿಕೊಂಡರು.

---ಟಾಸ್‌ಗೆ ಇಬ್ಬರು ನಿರೂಪಕರು: ಅಂ.ರಾ. ಕ್ರಿಕೆಟ್‌ನಲ್ಲೇ ಮೊದಲು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಪಂದ್ಯವೊಂದರ ಟಾಸ್‌ ವೇಳೆ ಇಬ್ಬರು ನಿರೂಪಕರು ಕಾಣಿಸಿಕೊಂಡರು. ಭಾರತ-ಪಾಕಿಸ್ತಾನದ ಮೊದಲೆರಡು ಪಂದ್ಯಗಳಿಗೆ ನಿರೂಪಕರಾಗಿದ್ದ ರವಿ ಶಾಸ್ತ್ರಿ ಫೈನಲ್‌ನಲ್ಲೂ ನಿರೂಪನೆ ಮಾಡಬೇಕಿತ್ತು. ಆದರೆ ರವಿ ಶಾಸ್ತ್ರಿಯನ್ನು ಬದಲಿಸಿ ಬೇರೊಬ್ಬ ನಿರೂಪಕರನ್ನು ನಿಯೋಜಿಸುವಂತೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮನವಿ ಮಾಡಿತ್ತು. 

ಇದಕ್ಕೆ ಏಷ್ಯನ್‌ ಕ್ರಿಕೆಟ್‌ ಒಪ್ಪಿಲ್ಲ. ಬದಲಾಗಿ ರವಿ ಶಾಸ್ತ್ರಿ ಜೊತೆ ಪಾಕಿಸ್ತಾನ ವಖಾರ್‌ ಯೂನಿಸ್‌ರನ್ನು ನಿರೂಪಕರಾಗಿ ನೇಮಿಸಿತು. ಟಾಸ್‌ ವೇಳೆ ಸೂರ್ಯಕುಮಾರ್‌ರನ್ನು ರವಿ ಶಾಸ್ತ್ರಿ ಸಂದರ್ಶನ ಮಾಡಿದರೆ, ಸಲ್ಮಾನ್‌ರನ್ನು ವಖಾರ್‌ ಮಾತನಾಡಿಸಿದರು.