‘ಶಿಕ್ಷಣದಲ್ಲಿ ಶ್ರೇಷ್ಠ ತಮಿಳುನಾಡು’ ಕಾರ್ಯಕ್ರಮದಲ್ಲಿ, ಮಳೆಗೆ ತನ್ನ ಮನೆ ಸೋರುತ್ತದೆ ಎಂದು ಕಣ್ಣೀರು ಹಾಕಿದ ವಿದ್ಯಾರ್ಥಿನಿಗೆ ಹೊಸ ಮನೆ ನೀಡಲು ತಮಿಳುನಾಡು ಸಿಎಂ ಸ್ಟಾಲಿನ್ ಆದೇಶಿಸಿದ್ದಾರೆ.
ತಮಿಳುನಾಡು (Tamil Nadu) ಸರ್ಕಾರ ಶಿಕ್ಷಣದಲ್ಲಿ ಮಾಡಿದ ಸಾಧನೆಗಳನ್ನು ವಿವರಿಸಲು 'ಶಿಕ್ಷಣದಲ್ಲಿ ಶ್ರೇಷ್ಠ ತಮಿಳುನಾಡು' ಎಂಬ ಕಾರ್ಯಕ್ರಮ ನಿನ್ನೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ವಹಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಶಿಕ್ಷಣದಲ್ಲಿ ಶ್ರೇಷ್ಠ ತಮಿಳುನಾಡು
ಈ ಕಾರ್ಯಕ್ರಮದಲ್ಲಿ ನಟರಾದ ಶಿವಕಾರ್ತಿಕೇಯನ್, ಶಿವಕುಮಾರ್, ನಿರ್ದೇಶಕರಾದ ವೆಟ್ರಿಮಾರನ್, ಮಾರಿ ಸೆಲ್ವರಾಜ್, ಮಿಸ್ಕಿನ್, ಪ್ರೇಮ್ ಕುಮಾರ್, ಜ್ಞಾನವೇಲ್, ಕ್ರಿಕೆಟಿಗ ನಟರಾಜನ್, ತಮಿಳುನಾಡು ಸಚಿವರು, ಡಿಎಂಕೆ ಸಂಸದರು, ಶಾಸಕರು, ಶಿಕ್ಷಣ ತಜ್ಞರು ಸೇರಿದಂತೆ ಹಲವರು ಭಾಗವಹಿಸಿದ್ದರು. ಶಿಕ್ಷಣಕ್ಕಾಗಿ ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ಬೆಳಗಿನ ಉಪಾಹಾರ ಯೋಜನೆ, 'ನಾನ್ ಮುಧಲ್ವನ್' ಯೋಜನೆಗಳ ಫಲಾನುಭವಿಗಳು ವೇದಿಕೆಯೇರಿ ಹೆಮ್ಮೆಯಿಂದ ಮಾತನಾಡಿದರು.
ಮಳೆ ನೀರು ಸೋರುವ ಮನೆಯಲ್ಲಿ ಅಪ್ಪ, ಅಮ್ಮ!
ಈ ಕಾರ್ಯಕ್ರಮದಲ್ಲಿ ಮಾತನಾಡಿದ ತೆಂಕಾಸಿ ಜಿಲ್ಲೆಯ ಪ್ರೇಮಾ ಎಂಬ ವಿದ್ಯಾರ್ಥಿನಿ, ''ನಾನು ಕಾಲೇಜಿನಲ್ಲಿ ಓದುವಾಗ ಹಾಸ್ಟೆಲ್‌ನಲ್ಲಿದ್ದೆ. ನಮ್ಮ ಮನೆ ಮಳೆಗಾಲದಲ್ಲಿ ಸೋರುತ್ತದೆ. ಮಳೆ ಬಂದಾಗಲೆಲ್ಲಾ, ಸೋರುವ ಮನೆಯಲ್ಲಿ ನನ್ನ ಅಪ್ಪ-ಅಮ್ಮ ಹೇಗಿದ್ದಾರೋ ಎಂದು ಹಾಸ್ಟೆಲ್‌ನಿಂದಲೇ ಚಿಂತಿಸುತ್ತಿದ್ದೆ. ಬೇಗನೆ ಅಪ್ಪ-ಅಮ್ಮನಿಗೆ ಒಂದು ಮನೆ ಕಟ್ಟಿಸಿಕೊಡಬೇಕು ಎನ್ನುವುದೇ ನನ್ನ ಆಸೆ' ಎಂದು ಹೇಳಿದಳು. ಆ ವಿದ್ಯಾರ್ಥಿನಿ ಕಣ್ಣೀರು ಹಾಕುತ್ತಾ ಮಾತನಾಡಿದ್ದರಿಂದ ಇಡೀ ಸಭಾಂಗಣವೇ ಮೌನವಾಯಿತು.
ವಿದ್ಯಾರ್ಥಿನಿಗೆ ಹೊಸ ಮನೆ
ಈ ಹಿನ್ನೆಲೆಯಲ್ಲಿ, ಕಣ್ಣೀರು ಹಾಕಿದ ವಿದ್ಯಾರ್ಥಿನಿ ಪ್ರೇಮಾಗೆ 'ಕಲೈನಾರ್ ಕನವು ಇಲ್ಲಂ' ಯೋಜನೆಯಡಿ ಹೊಸ ಮನೆ ಕಟ್ಟಿಕೊಡಲು ಮುಖ್ಯಮಂತ್ರಿ ಸ್ಟಾಲಿನ್ ಆದೇಶಿಸಿದರು. ಇದರ ಬೆನ್ನಲ್ಲೇ, ಹೊಸ ಮನೆಯ ಆದೇಶ ಪತ್ರವನ್ನು ಆ ವಿದ್ಯಾರ್ಥಿನಿಯ ಪೋಷಕರಿಗೆ ತೆಂಕಾಸಿ ಜಿಲ್ಲಾಧಿಕಾರಿ ಹಸ್ತಾಂತರಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಸ್ಟಾಲಿನ್ ಎಕ್ಸ್ (X) ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಪ್ರೇಮಾಗೆ ಇನ್ನು ಚಿಂತೆ ಬೇಡ
ಇನ್ನು ಈ ಬಗ್ಗೆ ಸ್ಟಾಲಿನ್ ಅವರು 'ಸೋರುವ ಮನೆಯಲ್ಲಿ ಅಪ್ಪ ಇರುತ್ತಾರಲ್ಲ ಎಂಬ ಚಿಂತೆ ಪ್ರೇಮಾಗೆ ಇನ್ನು ಮುಂದೆ ಬೇಡ! ಎಷ್ಟೋ ಜನರ ವಿರೋಧದ ನಡುವೆಯೂ ನಿಮ್ಮನ್ನು ಓದಿಸಿದ ತಂದೆಗೆ, ಮೊದಲ ತಿಂಗಳ ಸಂಬಳವನ್ನು ಕೊಟ್ಟು ನೀವು ಸಂತೋಷಪಟ್ಟಿದ್ದೀರಿ! ಹಾಗೇ, ನಿಮ್ಮ ಕನಸನ್ನು ನನಸು ಮಾಡಿದ ತಂದೆಗೆ 'ಕಲೈನಾರ್ ಕನವು ಇಲ್ಲಂ' ಯೋಜನೆಯಡಿ ಹೊಸ ಮನೆ ಕಟ್ಟಿಕೊಡಲು ಆದೇಶ ನೀಡಿ ನಾನು ಸಂತೋಷಪಡುತ್ತೇನೆ' ಎಂದು ಬರೆದು ಸ್ಟಾಲಿನ್ ಪೋಸ್ಟ್ ಮಾಡಿದ್ದಾರೆ.
