ಉತ್ತರ ಕರ್ನಾಟಕದ ಖ್ಯಾತ ಹಾಸ್ಯ ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಾಟಕ ಮತ್ತು ಸಿನಿಮಾ ಮೂಲಕ ನಗಿಸುತ್ತಿದ್ದ ರಾಜು ಅವರ ಕುಟುಂಬದಲ್ಲಿ ನಗುವೇ ಇರಲಿಲ್ಲ. ರಾಜರಾಣಿ ರಿಯಾಲಿಟಿ ಶೋನಲ್ಲಿ ನಟಿ ತಾರಾ ಮಧ್ಯಸ್ಥಿಕೆಯಲ್ಲಿ ರಾಜು ಅವರ ಒಡೆದ ಕುಟುಂಬವನ್ನು ಒಂದುಗೂಡಿಸಲಾಗಿತ್ತು.
ಬೆಂಗಳೂರು (ಅ.13): ಉತ್ತರ ಕರ್ನಾಟಕದ ಬಹುತೇಕ ದೊಡ್ಡ ಜಾತ್ರೆಗಳು ಹಾಗೂ ಹಳ್ಳಿಗಳಲ್ಲಿ ಪ್ರದರ್ಶನವಾಗುತ್ತಿದ್ದ ನಾಟಕಗಳನ್ನು ಕುಡುಕನ ಪಾತ್ರ ಮಾಡುತ್ತಾ ಜನರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ರಾಜು ತಾಳಿಕೋಟೆ ಅವರ ಸಂಸಾರದಲ್ಲಿಯೇ ನಗುವೇ ಇರಲಿಲ್ಲ. ಸಂಸಾರದ ನೋವಿನಲ್ಲಿಯೇ ಜಂಜಾಡುತ್ತಿದ್ದ ರಾಜು ತಾಳಿಕೋಟೆ ಅವರು ಕಲರ್ಸ್ ಕನ್ನಡದಲ್ಲಿ ನಡೆಸುತ್ತಿದ್ದ ರಾಜ ರಾಣಿ ದಂಪತಿಯ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದರು. ಈ ವೇಳೆ ಶೋ ಜಡ್ಜಸ್ ಆಗಿದ್ದ ನಟಿ ತಾರಾ, ರಾಜು ಅವರ ಕುಟುಂಬದಲ್ಲಿದ್ದ ಒಡಕನ್ನು ಸರಿಪಡಿಸಿ ಎಲ್ಲರನ್ನೂ ಒಂದುಗೂಡಿಸಿದ್ದರು.
ಉತ್ತರ ಕರ್ನಾಟಕದ ಜನಪ್ರಿಯ ಹಿರಿಯ ರಂಗ ಕಲಾವಿದ ಹಾಗೂ ಕನ್ನಡ ಚಲನಚಿತ್ರದ ಹಾಸ್ಯ ನಟ ರಾಜು ತಾಳಿಕೋಟೆ ಅವರು ಇಂದು (ಅಕ್ಟೋಬರ್ 13, 2025) ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ವಾಸವಾಗಿದ್ದ ಅವರಿಗೆ ನಿನ್ನೆ (ಅ.12) ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮಣಿಪಾಲ್ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಟಿವಿ ಶೋನಲ್ಲಿ ಅನಾವರಣಗೊಂಡ ಸಂಕೀರ್ಣ ಕುಟುಂಬ ಕಥೆ:
ರಾಜು ತಾಳಿಕೋಟೆ ಅವರು ತಮ್ಮ ವಿಶಿಷ್ಟ ಹಾಸ್ಯ ಪಾತ್ರಗಳಷ್ಟೇ ಅಲ್ಲದೆ, 2021ರ ಆಗಸ್ಟ್‌ನಲ್ಲಿ 'ರಾಜ ರಾಣಿ' ಎಂಬ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ತಮ್ಮ ಇಬ್ಬರು ಪತ್ನಿಯರಾದ ಇಬ್ಬರೂ ಪ್ರೇಮಾ ಸಿಂಧನೂರು, ಪ್ರೇಮಾ ತಾಳಿಕೋಟೆ ಅವರ ಜೊತೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಅವರ ಈ ವಿಶಿಷ್ಟ ಜೋಡಿ, ಡ್ಯಾನ್ಸ್ ಮತ್ತು 'ಮನಸ್ಸು ಬಿಚ್ಚಿ ಮಾತು' ಟಾಸ್ಕ್‌ಗಳಲ್ಲಿ ವೀಕ್ಷಕರು ಮತ್ತು ತೀರ್ಪುಗಾರರ ಮನಸ್ಸು ಗೆದ್ದಿತ್ತು.
ಶೋನಲ್ಲಿ ರಾಜು ತಾಳಿಕೋಟೆಯವರ ಸಂಕೀರ್ಣ ಕುಟುಂಬ ಜೀವನದ ನೋವಿನ ಕಥೆ ಅನಾವರಣಗೊಂಡಿತ್ತು. ಅವರಿಗೆ ಮೊದಲು ಬಾಲ್ಯವಿವಾಹವಾಗಿದ್ದರೂ, ನಂತರ ಮತ್ತೊಬ್ಬರನ್ನು ಮದುವೆಯಾಗಿದ್ದರು. ಇಬ್ಬರು ಪತ್ನಿಯರು ಅನ್ಯೋನ್ಯವಾಗಿದ್ದರೂ, 'ತಪ್ಪಾಯ್ತು ಅಂತ ಮಕ್ಕಳು ಬಂದರೆ ಕ್ಷಮಿಸುತ್ತೀರಾ?' ಎಂಬ ಪ್ರಶ್ನೆಯನ್ನು ವೇದಿಕೆಯಲ್ಲಿ ಕೇಳಿ ಕಣ್ಣೀರಿಟ್ಟಿದ್ದರು. ಆರಂಭದಲ್ಲಿ ರಾಜು ತಾಳಿಕೋಟೆ ಸಿಟ್ಟಿನಿಂದ 'ಸಾಧ್ಯವಿಲ್ಲ' ಎಂದು ಉತ್ತರಿಸಿದ್ದರೂ, ನಂತರ ಅವರೂ ಮಕ್ಕಳನ್ನು ಒಪ್ಪಿಕೊಳ್ಳುವುದಾಗಿ ಭಾವುಕರಾಗಿದ್ದರು.
ನಟಿ ತಾರಾ ಮಧ್ಯಸ್ಥಿಕೆಯಲ್ಲಿ ಒಂದುಗೂಡಿದ ಸಂಸಾರ:
ಪತ್ನಿಯರ ನೋವು ತಿಳಿದುಕೊಂಡ ತೀರ್ಪುಗಾರರಲ್ಲೊಬ್ಬರಾದ ಹಿರಿಯ ನಟಿ ತಾರಾ ಅವರು ರಾಜು ತಾಳಿಕೋಟೆ ಕುಟುಂಬದ ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಮುಂದಾದರು. ಒಂದು ವಿಶೇಷ ಎಪಿಸೋಡ್‌ನಲ್ಲಿ ಗಿಫ್ಟ್ ಕೊಡುವ ನೆಪದಲ್ಲಿ ರಾಜು ತಾಳಿಕೋಟೆಯವರ ಮಗ ಭರತ್ ಅವರನ್ನು ವೇದಿಕೆಗೆ ಕರೆಸಿ, ಅಪ್ಪ-ಮಗನ ನಡುವಿನ ಮನಸ್ತಾಪವನ್ನು ಶಮನಗೊಳಿಸಿದರು. ಈ ಕುರಿತು ಭಾವುಕರಾದ ಮೊದಲ ಪತ್ನಿ ಪ್ರೇಮಾ, 'ಅಪ್ಪ ಮಗನ ಮಧ್ಯ ಮನಸ್ತಾಪ ಇತ್ತು ನಿಜ, ಆದರೆ ಅದು ದೊಡ್ಡದಾಗಿರಲಿಲ್ಲ. ನನ್ನ ಮಗ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗಿದೆ. ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ' ಎಂದು ಸಂತಸ ವ್ಯಕ್ತಪಡಿಸಿದ್ದರು. ಪುತ್ರ ಭರತ್ ಸಹ, 'ರಾಜು ತಾಳಿಕೋಟೆಯವರನ್ನು ಅಪ್ಪನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ಮಗಳು ಆರೋಹಿಯನ್ನು ಮೊದಲ ಬಾರಿಗೆ ನನ್ನ ತಂದೆ ಇವತ್ತು ನೋಡುತ್ತಿದ್ದಾರೆ' ಎಂದು ಭಾವುಕರಾಗಿದ್ದರು. ರಾಜಾ ರಾಣಿ ವೇದಿಕೆ ತಮ್ಮ ಕುಟುಂಬವನ್ನು ಒಂದುಗೂಡಿಸಿತು ಎಂದು ಅವರು ಕೃತಜ್ಞತೆ ಸಲ್ಲಿಸಿದ್ದರು.
ಉತ್ತರ ಕರ್ನಾಟಕದ ಶೈಲಿಯ ಹಾಸ್ಯ ಮತ್ತು ರಂಗಭೂಮಿಗೆ ನೀಡಿದ ಅಪಾರ ಕೊಡುಗೆಗಾಗಿ ರಾಜು ತಾಳಿಕೋಟೆಯವರು ಸದಾ ಸ್ಮರಣೀಯರಾಗಿ ಉಳಿಯುತ್ತಾರೆ. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಶೋಕ ವ್ಯಕ್ತಪಡಿಸಿದೆ.
