Quick Homemade Raisins Recipe: ಈ ರೀತಿಯಾಗಿ ನೀವು ಕೇವಲ 8 ರಿಂದ 10 ನಿಮಿಷಗಳ ಕಾಲ ಸ್ವಲ್ಪ ಕಷ್ಟಪಟ್ಟು, ನಂತರ ಅವುಗಳನ್ನು ಒಣಗಿಸಿದರೆ ರಾಸಾಯನಿಕ ಮುಕ್ತ ಒಣದ್ರಾಕ್ಷಿಗಳು ದ್ರಾಕ್ಷಿಯಿಂದ ಸಿದ್ಧವಾಗುತ್ತವೆ.
ಬಹುತೇಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಒಣದ್ರಾಕ್ಷಿಯನ್ನ ಮನೆಯಲ್ಲಿ ಮಾಡಬಹುದಾ, ಇಲ್ಲವೋ? ಎಂಬ ಗೊಂದಲವಿರುತ್ತದೆ. ಮತ್ತೆ ಕೆಲವರಿಗೆ ಮಾಡುವ ಮನಸ್ಸಿದ್ದರೂ ಅದನ್ನು ಮನೆಯಲ್ಲಿಯೇ ಮಾಡುವ ವಿಧಾನ ತಿಳಿದಿರುವುದಿಲ್ಲ. ಗುಡ್ ನ್ಯೂಸ್ ಎಂದರೆ ನೀವು ಯಾವಾಗಲಾದರೂ ಹಸಿರು ದ್ರಾಕ್ಷಿ ಕೊಂಡು ತಂದರೆ ಅದರಲ್ಲೇ ಒಣ ದ್ರಾಕ್ಷಿಯನ್ನೂ ಮಾಡ್ಬೋದು, ಯೂಟ್ಯೂಬರ್ ಪೂನಂ ದೇವ್ನಾನಿ ತಮ್ಮ ಚಾನೆಲ್‌ನಲ್ಲಿ ಒಣದ್ರಾಕ್ಷಿ ತಯಾರಿಸಲು ತುಂಬಾ ಸುಲಭವಾದ ಮಾರ್ಗವನ್ನು ಶೇರ್ ಮಾಡಿದ್ದಾರೆ. ಪೂನಂ ದೇವ್ನಾನಿ "ನೀವು ಕೇವಲ 50 ರೂ.ನಲ್ಲಿ 300 ರೂ.ಮೌಲ್ಯದ ಒಣದ್ರಾಕ್ಷಿಗಳನ್ನು ತಯಾರಿಸಬಹುದು" ಎಂದು ಹೇಳಿಕೊಂಡಿದ್ದಾರೆ. ಇದನ್ನು ಮಾಡಲು ನಿಮಗೆ ಯಾವುದೇ ರಾಸಾಯನಿಕ ಅಥವಾ ದುಬಾರಿ ಯಂತ್ರದ ಅಗತ್ಯವೇ ಇಲ್ಲ. ಅಷ್ಟೇ ಅಲ್ಲ, ಈ ವಿಧಾನವು ತುಂಬಾ ಸರಳ ಮತ್ತು ಅದನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು.
ಆದರೆ ನೆನಪಿಡಿ ಯಾವಾಗಲೂ ಒಣದ್ರಾಕ್ಷಿಗಳ ಗಾತ್ರವು ದ್ರಾಕ್ಷಿಯ ಗಾತ್ರವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಉದ್ದ ಅಥವಾ ದುಂಡ ನೀವು ಯಾವುದೇ ರೀತಿಯ ದ್ರಾಕ್ಷಿಯನ್ನು ತೆಗೆದುಕೊಂಡರೂ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯಿರಿ. ತೊಳೆದ ನಂತರ ಅವುಗಳ ಮೇಲಿನ ಧೂಳು ಮತ್ತು ಕೊಳಕು ಹೋಗಿ ಸ್ವಚ್ಛವಾಗುತ್ತದೆ. ನಂತರ ದ್ರಾಕ್ಷಿಯನ್ನು ಅವುಗಳ ಗೊಂಚಲುಗಳಿಂದ ಬೇರ್ಪಡಿಸಿ. ಬೀಜಗಳಿದ್ದರೆ ಅವುಗಳನ್ನು ತೆಗೆದುಹಾಕಿ. ಆದರೆ ನಿಮಗೀಗ ಬೀಜಗಳಿಲ್ಲದ ದ್ರಾಕ್ಷಿಗಳು (Seedless grapes) ಸಹ ಸುಲಭವಾಗಿ ಲಭ್ಯವಿದೆ.
ಇದು ಅತ್ಯಂತ ಪ್ರಮುಖ ಹಂತ
ಒಣದ್ರಾಕ್ಷಿ ತಯಾರಿಸುವಲ್ಲಿ ಇದು ಅತ್ಯಂತ ಪ್ರಮುಖ ಹಂತವಾಗಿದೆ. ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಅಂದರೆ ಇಡ್ಲಿ ಅಥವಾ ಕಡುಬು ಮಾಡುವ ಪಾತ್ರೆ ತೆಗೆದುಕೊಳ್ಳಿ. ಇದರಲ್ಲಿ ನೀರು ಹಾಕಿ ಬಿಸಿ ಮಾಡಿ. ನಂತರ ಇಡ್ಲಿ ಸ್ಟ್ಯಾಂಡ್ ಇರಿಸಿ. ಇಡ್ಲಿ ಸ್ಟ್ಯಾಂಡ್ ಇರುವವರು ಅಚ್ಚಿನೊಳಗೆ ಹಸಿರು ದ್ರಾಕ್ಷಿಯನ್ನು ಇರಿಸಿ. ನಿಮ್ಮ ಬಳಿ ಇಡ್ಲಿ ಅಚ್ಚು ಇಲ್ಲದಿದ್ದರೆ, ನೀರನ್ನು ಮುಟ್ಟದಂತೆ ದ್ರಾಕ್ಷಿಗೆ ಉಗಿ ಮಾತ್ರ ಸಿಗುವ ರೀತಿಯಲ್ಲಿ ಪ್ಲೇಟ್ ಇರಿಸಿ. ಪಾತ್ರೆಯ ಮುಚ್ಚಳ ಮುಚ್ಚಿ (ಥೇಟ್ ಕಡುಬು ಮತ್ತು ಇಡ್ಲಿಯನ್ನ ಬೇಯಿಸಿದ ರೀತಿಯಲ್ಲಿ).
ದ್ರಾಕ್ಷಿಯ ನೈಸರ್ಗಿಕ ಸಿಹಿ ಮತ್ತು ಪೋಷಕಾಂಶಗಳು ಹಾಗೇ ಉಳಿಯಲು ಈ ರೀತಿಯಲ್ಲಿ ಆವಿಯಲ್ಲಿ ಬೇಯಿಸುವುದು ಮುಖ್ಯ . ಆವಿಯಲ್ಲಿ ಬೇಯಿಸುವುದರಿಂದ ದ್ರಾಕ್ಷಿಯ ಹೊರ ಸಿಪ್ಪೆ ಮೃದುವಾಗುತ್ತದೆ, ಒಣಗಲು ಸಿದ್ಧವಾಗುತ್ತದೆ. ಈ ಪ್ರಕ್ರಿಯೆಯು ಒಣದ್ರಾಕ್ಷಿಗಳ ರುಚಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ. ದ್ರಾಕ್ಷಿಯನ್ನು ಸುಮಾರು 8 ನಿಮಿಷಗಳ ಕಾಲ ಬೇಯಿಸಿ. ದ್ರಾಕ್ಷಿಯ ಬಣ್ಣ ಬದಲಾಗಲು ಪ್ರಾರಂಭಿಸಿದಾಗ, ಉರಿಯನ್ನು ಆಫ್ ಮಾಡಿ ಮತ್ತು ದ್ರಾಕ್ಷಿಯನ್ನು ಹಬೆಯಿಂದ ಹೊರತೆಗೆಯಿರಿ.
ರಾಸಾಯನಿಕ ಮುಕ್ತ ಒಣದ್ರಾಕ್ಷಿಗಳು ದ್ರಾಕ್ಷಿಯಿಂದ ಸಿದ್ಧ
ಹಬೆಯಲ್ಲಿ ಬೇಯಿಸಿದ ನಂತರ ಈಗ ದ್ರಾಕ್ಷಿಯನ್ನು ಒಣಗಿಸುವ ಸಮಯ. ಅವುಗಳನ್ನು ಪ್ರಖರವಲ್ಲದ, ಸೌಮ್ಯವಾದ ಸೂರ್ಯನ ಬೆಳಕಿನಲ್ಲಿ ಅಥವಾ ಫ್ಯಾನ್ ಅಡಿಯಲ್ಲಿ ಒಣಗಿಸಬಹುದು. ಅವುಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಇಲ್ಲದಿದ್ದರೆ ಅವು ಗಟ್ಟಿಯಾಗಬಹುದು. ದ್ರಾಕ್ಷಿಯನ್ನು ತೆಳುವಾದ ಹತ್ತಿ ಬಟ್ಟೆಯ ಮೇಲೆ ಹರಡಿ, ಆಗ ಅವು ಪರಸ್ಪರ ಪ್ರತ್ಯೇಕವಾಗಿರುತ್ತವೆ. ಅಷ್ಟೇ ಅಲ್ಲ, ಬೇಗನೆ ಮತ್ತು ಸಮವಾಗಿ ಒಣಗುತ್ತವೆ. ತಪ್ಪಾಗಿ ಸಹ ಪಾಲಿಥಿನ್ ಅನ್ನು ಬಳಸಬೇಡಿ. ಏಕೆಂದರೆ ಇದರಿಂದಾಗಿ ದ್ರಾಕ್ಷಿಗಳು ತೇವವಾಗುತ್ತವೆ ಮತ್ತು ಹಾಳಾಗಬಹುದು.
ದ್ರಾಕ್ಷಿಗಳು ಸಂಪೂರ್ಣವಾಗಿ ಒಣಗಲು ಹವಾಮಾನವನ್ನು ಅವಲಂಬಿಸಿ 2 ರಿಂದ 3 ದಿನಗಳು ತೆಗೆದುಕೊಳ್ಳಬಹುದು. ದ್ರಾಕ್ಷಿಗಳು ಸಂಪೂರ್ಣವಾಗಿ ಒಣಗಿ ಕುಗ್ಗಿದಾಗ ಮತ್ತು ಅವುಗಳ ಬಣ್ಣವು ಗಾಢವಾದಾಗ ರುಚಿಕರವಾದ ಮನೆಯಲ್ಲಿಯೇ ತಯಾರಿಸಿದ ಒಣದ್ರಾಕ್ಷಿಗಳು ಸಿದ್ಧವಾಗುತ್ತವೆ. ಈ ರೀತಿಯಾಗಿ ನೀವು ಕೇವಲ 8 ರಿಂದ 10 ನಿಮಿಷಗಳ ಕಾಲ ಸ್ವಲ್ಪ ಕಷ್ಟಪಟ್ಟು, ನಂತರ ಅವುಗಳನ್ನು ಒಣಗಿಸಿದರೆ ರಾಸಾಯನಿಕ ಮುಕ್ತ ಒಣದ್ರಾಕ್ಷಿಗಳು ದ್ರಾಕ್ಷಿಯಿಂದ ಸಿದ್ಧವಾಗುತ್ತವೆ.
