ಬೆಂಗಳೂರಿನ ತಿಲಕ್‌ನಗರದಲ್ಲಿ ನಿಂತಿದ್ದ ಆಟೋ ರಿಕ್ಷಾದೊಳಗೆ ನಾಲ್ಕು ಮಕ್ಕಳ ತಾಯಿ ಸಲ್ಮಾ ಎಂಬುವವರ ಶವ ಪತ್ತೆಯಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರ ಸುಬ್ರಮಣಿ ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಿಲಕ್‌ನಗರದಲ್ಲಿ ಆಟೋ ರಿಕ್ಷಾದೊಳಗೆ ಮಹಿಳೆಯ ಶವವೊಂದು ಪತ್ತೆಯಾಗಿರುವ ಘಟನೆ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆ ಕೊಲೆ ಮಾಡಲಾಗಿದ್ದು, ನಂತರ ಶವವನ್ನು ಆಟೋದಲ್ಲಿ ಬಿಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಮೃತಳನ್ನು ಸಲ್ಮಾ (35) ಎಂದು ಗುರುತಿಸಲಾಗಿದ್ದು, ಆಕೆ ನಾಲ್ಕು ಮಕ್ಕಳ ತಾಯಿ. ತಿಲಕ್ ನಗರ ಮುಖ್ಯರಸ್ತೆಯಲ್ಲಿ ನಿಂತಿದ್ದ ಆಟೋದಲ್ಲಿ ಶವ ಪತ್ತೆಯಾದ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ

ಶನಿವಾರ ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಈ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಆಟೋ ರಿಕ್ಷಾ ದೀರ್ಘಕಾಲ ನಿಂತಿರುವುದನ್ನು ಗಮನಿಸಿ ಅನುಮಾನಗೊಂಡು ಒಳಗೆ ನೋಡಿದಾಗ ಮಹಿಳೆಯ ಶವ ಕಂಡು ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ತಿಲಕ್ ನಗರ ಪೊಲೀಸರು ಮತ್ತು ಸೋಕೋ (Scene of Crime Officers) ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಸುಬ್ರಮಣಿ ಎಂಬಾತನೊಂದಿಗೆ ಪ್ರೇಮ ಸಂಬಂಧ

ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ಮೃತಳ ಗಂಡ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಆ ನಂತರ ಸಲ್ಮಾ ಸುಬ್ರಮಣಿ ಎಂಬಾತನೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದಾಳೆ ಎಂಬ ಮಾಹಿತಿ ದೊರೆತಿದೆ. ಆರೋಪಿ ಸುಬ್ರಮಣಿ ತಿಲಕ್ ನಗರ ಠಾಣಾ ವ್ಯಾಪ್ತಿಯಲ್ಲೇ ವಾಸವಾಗಿದ್ದಾನೆ ಎಂದು ತಿಳಿದುಬಂದಿದೆ.

ಸಂಜೆ ವೇಳೆಗೆ ದುರ್ವಾಸನೆಯಿಂದ ಶವ ಪತ್ತೆ

ನೆನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆ ವೇಳೆ ಕೋಪದ ತೀವ್ರತೆಯಲ್ಲಿ ಸುಬ್ರಮಣಿ ಸಲ್ಮಾ ತಲೆಗೆ ಬಲವಾದ ವಸ್ತುವಿನಿಂದ ಹೊಡೆದು ಕೊಲೆಗೈದಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಶವವನ್ನು ಬಟ್ಟೆಯಲ್ಲಿ ಸುತ್ತಿ, ರಸ್ತೆಯ ಬದಿಯಲ್ಲಿ ನಿಂತಿದ್ದ ಆಟೋ ರಿಕ್ಷಾದೊಳಗೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಬೆಳಗ್ಗೆ ಆಟೋ ಗಮನಿಸಿದರೂ ಯಾವುದೇ ಅನುಮಾನಗೊಂಡಿರಲಿಲ್ಲ. ಸಂಜೆ ವೇಳೆಗೆ ದುರ್ವಾಸನೆಯಿಂದ ಶವ ಪತ್ತೆಯಾದ ವಿಚಾರ ಬಹಿರಂಗವಾಯಿತು.

ಘಟನೆ ಕುರಿತು ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ (IPC ಸೆಕ್ಷನ್ 302) ದಾಖಲಿಸಲಾಗಿದ್ದು, ಆರೋಪಿ ಸುಬ್ರಮಣಿಯ ಶೋಧ ಕಾರ್ಯ ನಡೆಯುತ್ತಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಆರೋಪಿಯ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಘಟನೆಯ ಹಿನ್ನೆಲೆ ವೈಯಕ್ತಿಕ ವಿವಾದವಾಗಿರುವ ಸಾಧ್ಯತೆ ಹೆಚ್ಚು. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.