ಶಿವಮೊಗ್ಗದಿಂದ ತಮಿಳುನಾಡಿನ ತಿರುನೆಲ್ವೇಲಿಗೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಸೆಪ್ಟೆಂಬರ್ 7 ರಿಂದ ಪ್ರಾಯೋಗಿಕವಾಗಿ ಎಂಟು ವಾರಗಳ ಕಾಲ ಈ ರೈಲು ಸಂಚರಿಸಲಿದ್ದು, ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಾರ್ವಜನಿಕರ ಬೇಡಿಕೆ ಮೇರೆಗೆ ಈ ರೈಲು ಸಂಚಾರ ಆರಂಭಿಸಲಾಗುತ್ತಿದೆ.

ಬೆಂಗಳೂರು (ಸೆ.3): ಮಲೆನಾಡು ಜನರಿಗೆ ರೈಲ್ವೆ ಇಲಾಖೆ ಮತ್ತೊಂದು ಗುಡ್‌ನ್ಯೂಸ್‌ ನೀಡಿದೆ. ಶಿವಮೊಗ್ಗದಿಂದ ತಮಿಳುನಾಡಿನ ತಿರುನೆಲ್ವೇಲಿಗೆ ವಿಶೇಷ ರೈಲು ಬಿಡಲು ನಿರ್ಧಾರ ಮಾಡಿದೆ. ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್‌ 7 ರಿಂದ ಪ್ರಾಯೋಗಿಕ ರೈಲಿನ ಸಂಚಾರ ಆರಂಭವಾಗಲಿದೆ. ಮುಂಬರುವ ದಸರಾ, ದೀಪಾವಳಿಗೆ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಂಟು ವಾರಗಳ ಕಾಲ ಪ್ರಾಯೋಗಿಕವಾಗಿ ಸಂಚಾರ ಮಾಡಲಿದೆ.

ಬಿವೈ ರಾಘವೇಂದ್ರ ಮಾಡಿರುವ ಪೋಸ್ಟ್‌

ಶಿವಮೊಗ್ಗದಿಂದ ತಿರುನೆಲ್ವೇಲಿಗೆ ಮತ್ತು ತಿರುನೆಲ್ವೇಲಿಯಿಂದ ಶಿವಮೊಗ್ಗಕ್ಕೆ ಒಂದು ಹೊಸ ರೈಲನ್ನು ಬಿಡುವಂತೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು ಸಾರ್ವಜನಿಕರ ಒತ್ತಾಯದ ಮೇರೆಗೆ ಕೇಂದ್ರ ಮತ್ತು ರಾಜ್ಯ ರೈಲ್ವೆ ಸಚಿವರ ಮುಂದೆ ಒಂದು ಹೊಸದಾಗಿ ರೈಲನ್ನು ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಲಾಗಿತ್ತು.

ಕೇಂದ್ರದ ರೈಲ್ವೆ ಸಚಿವರು ಮನವಿಯನ್ನು ಪುರಸ್ಕರಿಸಿ, ಪ್ರಯಾಣಿಕರು ರೈಲನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಪ್ರಾಯೋಗಿಕವಾಗಿ ರೈಲು ಗಾಡಿ ಸಂಖ್ಯೆ 06103 ದಿನಾಂಕ: 07.09.2025 ರಂದು ಮದ್ಯಾಹ್ನ 03.40 ಕ್ಕೆ ತಿರುನೆಲ್ವೇಲಿಯಿಂದ ಹೊರಟು ಶಿವಮೊಗ್ಗಕ್ಕೆ ದಿನಾಂಕ: 08.09.2025 ರ ಮದ್ಯಾಹ್ನ 01.00 ಕ್ಕೆ ತಲುಪಲಿದೆ. ಹಾಗೂ ಅದೇ ದಿನ ಮದ್ಯಾಹ್ನ ರೈಲು ಗಾಡಿ ಸಂಖ್ಯೆ 06104 ಶಿವಮೊಗ್ಗದಿಂದ ಮದ್ಯಾಹ್ನ 2.20 ಕ್ಕೆ ಹೊರಟು ದಿನಾಂಕ:09.09.2025 ರ ಬೆಳಗ್ಗೆ 09.53 ಕ್ಕೆ ತಿರುನೆಲ್ವೇಲಿಗೆ ತಲುಪಲಿದೆ.

ವಿಶೇಷವಾಗಿ ಮುಂದೆ ಬರಲಿರುವ ದಸರಾ, ದೀಪಾವಳಿ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ರೈಲು ವಾರಕ್ಕೆ ಒಮ್ಮೆ ಹಾಗೂ ಎಂಟು ವಾರಗಳು (ಅಂದರೆ 07.09.2025 ರಿಂದ 27.10.2025) ರವರೆಗೆ ಪ್ರಾಯೋಗಿಕವಾಗಿ ಸಂಚರಿಸಲಿದೆ. ಶಿವಮೊಗ್ಗದಿಂದ ಬೀರೂರು, ತುಮಕೂರು, ಬೆಂಗಳೂರು, ಜೋಲಾರ್‌ಪೆಟ್ಟೆ, ಮಧುರೈ, ಮೂಲಕ ತಿರುನೆಲ್ವೇಲಿಗೆ ತಲುಪಲಿದೆ.

ಈ ರೈಲನ್ನು ಸಾರ್ವಜನಿಕರು ಹೆಚ್ಚಾಗಿ ಬಳಕೆ ಮಾಡಿಕೊಂಡಲ್ಲಿ ಕಾರ್ಯಸಾಧ್ಯತೆ ಕುರಿತು ಮಾನ್ಯ ರೈಲ್ವೆ ಸಚಿವರ ಮನವೊಲಿಸಿ ಇದೇ ರೈಲನ್ನು ಖಾಯಂ ಆಗಿ ಶಿವಮೊಗ್ಗದಿಂದ ತಿರುನೆಲ್ವೇಲಿವರೆಗೆ ಓಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು, ಹಾಗೂ ಸಾರ್ವಜನಿಕರು ಈ ರೈಲನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡಿ ಕೊಳ್ಳುವಂತೆ ಮನವಿ.

ಶಿವಮೊಗ್ಗ ಜನರ ಬೇಸರ

ಶಿವಮೊಗ್ಗ ಅಭಿವೃದ್ಧಿ ಹೊರ ರಾಜ್ಯಕ್ಕೆ ರೈಲು ಬಿಡುವುದರಿಂದ ಮಾತ್ರ ಸಾಧ್ಯ ಎನ್ನುವ ಕಲ್ಪನೆಯಿಂದ ಮೊದಲು ಹೊರಗೆ ಬನ್ನಿ. ಅನ್ಯ ರಾಜ್ಯದವರನ್ನು ಶಿವಮೊಗ್ಗಕ್ಕೂ ತಂದು ತುಂಬುವ ಆಲೋಚನೆ ಬಿಟ್ಟು ಶಿವಮೊಗ್ಗ ಹೊಸನಗರ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿ ಎಂದು ಬಿವೈ ರಾಘವೇಂದ್ರಗೆ ಮನವಿ ಮಾಡಿದ್ದಾರೆ.

Scroll to load tweet…