Davanagere KDP meeting news: ದಾವಣಗೆರೆಯಲ್ಲಿ ನಡೆದ ಕೆಡಿಪಿ ಸಭೆಗೆ ಗೈರಾದ ಗರ್ಭಿಣಿ ಮಹಿಳಾ ಅರಣ್ಯಾಧಿಕಾರಿ ವಿರುದ್ಧ ಕಾಂಗ್ರೆಸ್ ಶಾಸಕ ಬಸವರಾಜು ಶಿವಗಂಗಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಕೆಡಿಪಿ ಸಭೆಗೆ ಗೈರಾದ ಮಹಿಳಾ ಅಧಿಕಾರಿ ವಿರುದ್ದ ಕಾಂಗ್ರೆಸ್ ಶಾಸಕ ಬಸವರಾಜು ವಿ. ಶಿವಗಂಗಾ ಗರಂ ಆಗಿದ್ದು, ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಮಂಗಳವಾರ ನಡೆದ ಕೆಡಿಪಿ ಸಭೆಗೆ ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಶ್ವೇತಾ ಗೈರಾಗಿದ್ದರು. ಅಧಿಕಾರಿ ಯಾಕೆ ಸಭೆಗೆ ಬಂದಿಲ್ಲ ಎಂದು ಶಾಸಕರು ಪ್ರಶ್ನೆ ಮಾಡಿದಾಗ, ಮೇಡಂ ಗರ್ಭಿಣಿಯಾಗಿರುವ ಕಾರಣ ಸಭೆಗೆ ಬಂದಿಲ್ಲ ಎಂದು ಸಹಾಯಕ ವಲಯ ಅರಣ್ಯ ಅಧಿಕಾರಿ ಮಾಹಿತಿ ನೀಡಿದರು. ಇದಕ್ಕೆ ಸಿಡಿಮಿಡಿಗೊಂಡ ಶಾಸಕರು ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿ, ನಾಳೆ ನನಗೂ ಸಹ ಒಂದು ಕಾಪಿ ತಲುಪಬೇಕೆಂದರು.
ಗರ್ಭಿಣಿಯಾಗಿದ್ರೆ ಸರ್ಕಾರದಿಂದ ಸಿಗುವ ರಜೆಗಳನ್ನು ತೆಗೆದುಕೊಳ್ಳಲಿ. ಕೆಲಸದಲ್ಲಿರುವ ಸಂದರ್ಭದಲ್ಲಿ ಸಭೆಗೆ ಹಾಜರಾಗಬೇಕು. ಮಾಮೂಲಿ ತೆಗೆದುಕೊಳ್ಳಬೇಕಾದ್ರೆ ಡ್ಯೂಟಿ ಬೇಕಾಗುತ್ತದೆ. ಕೆಡಿಪಿ ಸಭೆಗೆ ಕರೆದ್ರೆ ಪ್ರೆಗ್ನೆಂಟ್ ಅಂತಾರೆ, ನಾಚಿಕೆ ಆಗಲ್ವಾ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಸಂಬಳ, ಗಿಂಬಳ ಬೇಕು, ಆದ್ರೆ ಡ್ಯೂಟಿ ಮಾಡೀಕೆ ಆಗಲ್ಲವಾ?
ಪ್ರೆಗ್ನೆನ್ಸಿ ರಜೆ ಇದೆ ಅಲ್ಲವಾ, ಅದನ್ನು ತಗೆದುಕೊಳ್ಳಲಿ. ಸಂಬಳ ಬೇಕು, ಗಿಂಬಳವೂ ಬೇಕು ಆದ್ರೆ ಇವರಿಗೆ ಡ್ಯೂಟಿ ಮಾಡೋಕೆ ಆಗಲ್ಲ. ಮಾತೆತ್ತಿದ್ರೆ ಪ್ರೆಗ್ನೆಂಟ್ ಅಂತಾರೆ ನಾಚಿಕೆ ಆಗಲ್ಲವಾ ಅಂತ ಅವರನ್ನು ಕೇಳಿ? ಪ್ರತಿಬಾರಿಗೂ ಕೇಳಿದಾಗ, ಪ್ರೆಗ್ನೆಂಟ್ ಇದ್ದು, ಡಾಕ್ಟರ್ ಬಳಿಯಲ್ಲಿದ್ದೀನಿ ಎಂದು ಹೇಳುತ್ತಾರೆ. ಈ ಕುರಿತು ತಕ್ಷಣವೇ ಜಿಲ್ಲಾಡಳಿತ, ಸರ್ಕಾರ ಮತ್ತು ಸಿಸಿಎಫ್‌ಗೆ ಪತ್ರ ಬರೆಯಿರಿ. ಪತ್ರದಲ್ಲಿ ನಾನು ಹೇಳಿರುವ ಎಲ್ಲಾ ಅಂಶಗಳನ್ನು ಉಲ್ಲೇಖಿಸಬೇಕು. ಸಭೆಗೆ ಬರಲು ಆಗದಿದ್ದರೆ ಸರ್ಕಾರದಿಂದ ಸಿಗುವ ಹೆರಿಗೆ ರಜೆ ತೆಗೆದುಕೊಂಡು ಹೋಗಲು ಹೇಳಿ. ನೋಟಿಸ್‌ಗೆ ಅವರೇ ಬಂದು ಉತ್ತರ ಕೊಡಬೇಕು ಎಂದು ಶಾಸಕ ಶಿವಗಂಗಾ ಬಸವರಾಜು ಸೂಚಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಸಾಧ್ಯವಿಲ್ಲ: ಶಾಸಕ ಆರಗ ಜ್ಞಾನೇಂದ್ರ
ಇದನ್ನೂ ಓದಿ: RSS ಬೆಂಬಲಿತ ವ್ಯಕ್ತಿಯ ಬೆದರಿಕೆ ಕರೆ ರೆಕಾರ್ಡ್ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
