ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ ಮುಖಂಡರು ಮಾತನಾಡಿದ್ದಾರೆ. ಆದರೆ, ಅವರಿಂದ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವ್ಯಂಗವಾಡಿದರು.
ಶಿವಮೊಗ್ಗ (ಅ.15): ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹಾಗೂ ಇತರ ಕಾಂಗ್ರೆಸ್ ಮುಖಂಡರು ಮಾತನಾಡಿದ್ದಾರೆ. ಆದರೆ, ಅವರಿಂದ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವ್ಯಂಗವಾಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಪ್ರಚಾರ್ ಖರ್ಗೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಸಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ಸಿಎಂಗೆ ಪತ್ರ ಬರೆದ್ದಾರೆ. ಆರ್‌ಎಸ್‌ಎಸ್ ಕಳೆದ ನೂರು ವರ್ಷದಿಂದ ದೇಶಭಕ್ತರನ್ನು ನಿರ್ಮಾಣ ಮಾಡುತ್ತಿದೆ.
ಇವರು ಬ್ಯಾನ್ ಮಾಡಿದ್ರು, ಉರ್ಕೊಂಡ್ರು ಅಷ್ಟೇ. ನೆಹರೂ- ಇಂದಿರಾ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಿ ಕತ್ತು ಹಿಸುಕಿದಾಗಲೂ ಆರ್‌ಎಸ್‌ಎಸ್ ಬೆಳೆದಿದೆ. ಈಗಲೂ ಬೆಳೆಯುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರೋರು ಕೂಡ ಆರ್‌ಎಸ್‌ಎಸ್ ನ ಸ್ವಯಂಸೇವಕರು. ಇದನ್ನ ಮರಿಬೇಡಿ ಎಂದು ತಾಕೀತು ಮಾಡಿದರು. ಆರ್‌ಎಸ್‌ಎಸ್ ನ ಕೈಗೆ ದೇಶ ಕೊಟ್ಟರೆ ಎನಾಗುತ್ತೆ ಎಂದು ಮೋದಿ 10 ವರ್ಷದಲ್ಲಿ ತೋರಿಸಿದ್ದಾರೆ. ದೇಶದಲ್ಲಿ ಬಿಜೆಪಿ ಪಕ್ಷದ ಬೆಳೆವಣಿಗೆ ಕಂಡು ಕಾಂಗ್ರೆಸ್ ನವರಿಗೆ ಹೊಟ್ಟೆ ಕಿಚ್ಚು ಬಂದಿದೆ. ಎಲ್ಲಿ ನೋಡಿದರೂ ಬಿಜೆಪಿ ಇದೆ, ಕಾಂಗ್ರೆಸ್ ಬೆಳಿತಾನೂ ಇಲ್ಲ. ಬೆಳಸಲಿಕ್ಕೂ ಆಗ್ತಿಲ್ಲ ಎಂಬ ಅಸಮಾಧಾನ ಇದೆ.
ಇಡೀ ದೇಶದಲ್ಲಿ ಜನರೇ ಕಿತ್ತು ಬಿಸಾಡಿದ್ದಾರೆ. ರಾಜ್ಯದಲ್ಲೂ ಅಸಹನೆಯ ಜನ ಅಧಿಕಾರ ಮಾಡುತ್ತಿದ್ದಾರೆ. ದೇಶಭಕ್ತರ ಧಮನ ಮಾಡಲು ಹೊರಟಿದ್ದಾರೆ. ದೇಶ ವಿರೋಧಿಗಳನ್ನ ವೋಟಿನ ಆಸೆಗೆ ರಕ್ಷಣೆ ಮಾಡ್ತಿದ್ದಾರೆ. ಬಾಂಬ್ ತಯಾರಕರಿಗೆ ರಕ್ಷಣೆ ಕೊಡುತ್ತಿದ್ದಾರೆ. ದೇಶಭಕ್ತಿ ಹೆಚ್ಚಿಸೋರನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಮೂರು ತಿಂಗಳಿಂದ ಸಂಬಳ ಆಗಿಲ್ಲ. ಬದುಕಲಿಕ್ಕೆ ಆಗ್ತಿಲ್ಲ. ಅವಮಾನಿತಳಾಗಿ ಸಾಯ್ತಿದ್ದೇನೆ ಎಂದು ಗ್ರಂಥಾಲಯ ನಿರ್ವಾಹಕಿ ಡೆತ್ ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.
ಗಿಮಿಕ್ ರಾಜಕಾರಣಿ
ಇನ್ನೂ ಆಶಾ ಕಾರ್ಯಕರ್ತೆರಿಗೂ ಸಂಬಳ ಕೊಟ್ಟಿಲ್ಲ. ಇಷ್ಟೆಲ್ಲ ನೂನ್ಯತೆಗಳನ್ನು ಮರೆಮಾಚಿ, ಜನರ ಆಕ್ರೋಶವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ತಮಗೆ ಕೊಟ್ಟ ಖಾತೆ ಬಗ್ಗೆ ಸ್ವಲ್ಪವೂ ಯೋಚಿಸುತ್ತಿಲ್ಲ, ಗ್ರಾಪಂನಲ್ಲಿ ಕೆಲಸ ಮಾಡೋರಿಗೆ ಸಂಬಳ ಕೊಡೋಕೆ ಆಗ್ತಿಲ್ಲ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಅವರು ಗಿಮಿಕ್ ರಾಜಕಾರಣಿ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು ಸಮರ್ಥನೆ ಮಾಡಿಕೊಂಡು ದೇಶ ಭಕ್ತರ ದಮನ ಮಾಡುವ ನಿಮ್ಮ ಮಾನಸಿಕ ಸ್ಥಿತಿ ಜನರಿಗೆ ಗೊತ್ತಾಗುತ್ತೆ. ಆರ್‌ಎಸ್‌ಎಸ್ ಬ್ಯಾನ್ ಮಾಡಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಖಾರವಾಗಿ ಹೇಳಿದರು.
