ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬೈಕ್ ಓವರ್‌ಟೇಕ್ ಮಾಡುವ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಜಗಳ ನಡೆದು, ಓರ್ವ ಯುವಕ ಮತ್ತೊಬ್ಬನಿಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಉತ್ತರಕನ್ನಡ (ಸೆ.18): ಬೈಕ್ ಓವರ್‌ಟೇಕ್ ಮಾಡುವ ಕ್ಷುಲ್ಲಕ ವಿಚಾರಕ್ಕೆ ಹೊನ್ನಾವರದಲ್ಲಿ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಮುಸ್ಲಿಂ ಯುವಕನೊಬ್ಬ ಹಿಂದೂ ಯುವಕನಿಗೆ ಚಾಕು ಇರಿದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ರಸ್ತೆಯ ಮಾವಿನಹೊಳೆ ಸಮೀಪ ಈ ಘಟನೆ ನಡೆದಿದೆ. ಹೊನ್ನಾವರ ಸಂಶಿ ನಿವಾಸಿ ಅದ್ನಾನ್ ನದೀಂ ಶೇಖ್ (26) ಎಂಬ ಯುವಕ, ಹೊನ್ನಾವರ ಕುದ್ರಿಗಿ ನಿವಾಸಿ ವಿವೇಕ್ ಸುರೇಶ್ ನಾಯ್ಕ (26) ಎಂಬುವವರಿಗೆ ಚಾಕು ಇರಿದಿದ್ದಾನೆ. ಪೊಲೀಸರ ಪ್ರಕಾರ, ಈ ಹಿಂದೆ ಇಬ್ಬರೂ ಸ್ನೇಹಿತರಾಗಿದ್ದರು. ಆದರೆ, ಬೈಕ್ ಓವರ್‌ಟೇಕ್ ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಮಾತಿನ ಚಕಮಕಿ ಹೆಚ್ಚಾದಾಗ, ಅದ್ನಾನ್ ತನ್ನ ಕೈಯಲ್ಲಿದ್ದ ಬೈಕ್ ಕೀಚೈನ್‌ನಲ್ಲಿರುವ ಸಣ್ಣ ಚಾಕುವಿನಿಂದ ವಿವೇಕ್ ಮುಖ ಮತ್ತು ಕಿವಿಯ ಬಳಿ ಇರಿದಿದ್ದಾನೆ.
ಗಾಯಾಳು ಆಸ್ಪತ್ರೆಗೆ ದಾಖಲು
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ವಿವೇಕ್ ನಾಯ್ಕ ಅವರನ್ನು ತಕ್ಷಣವೇ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಗಾಯಾಳು ಯುವಕನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಕಾರ್ಯಪ್ರವೃತ್ತರಾದ ಹೊನ್ನಾವರ ಪೊಲೀಸರು, ಆರೋಪಿ ಅದ್ನಾನ್ ನದೀಂ ಶೇಖ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬೈಕ್ ಓವರ್‌ಟೇಕ್‌ನಂತಹ ಸಣ್ಣ ಕಾರಣಕ್ಕೆ ಈ ರೀತಿಯ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
