ಮದುವೆಗೆ 15 ದಿನ ಮುನ್ನವೇ ಮಸಣ ಸೇರಿದ ಯುವತಿ; ಆಪತ್ತು ತಂದ ಅಣ್ಣನ ಬೈಕ್!
ಶಿವಮೊಗ್ಗದಲ್ಲಿ ಮದುವೆಗೆ ಕೇವಲ 15 ದಿನಗಳು ಬಾಕಿ ಇರುವಾಗ ಯುವತಿ ಕವಿತಾ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾಳೆ. ಈ ಘಟನೆ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ದುಃಖ ಆವರಿಸಿದೆ.

ಶಿವಮೊಗ್ಗ (ಸೆ.08): ಇನ್ನೇನು ಹದಿನೈದು ದಿನಗಳಲ್ಲಿ ಮದುವೆಯ ಸಂಭ್ರಮದಲ್ಲಿ ಮನೆ ತುಂಬಿರುತ್ತಿದ್ದ ಯುವತಿಯೊಬ್ಬಳು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾಳೆ.
ಈ ದಾರುಣ ಘಟನೆ ಶಿವಮೊಗ್ಗ ತಾಲೂಕಿನ ಮಲವಗೊಪ್ಪ ಗ್ರಾಮದ ಬಳಿ ನಡೆದಿದೆ. ಈ ಸಾವಿನಿಂದಾಗಿ ಇಡೀ ಕುಟುಂಬದಲ್ಲಿ ಮದುವೆಯ ಸಂಭ್ರಮದ ಬದಲು ಸೂತಕದ ವಾತಾವರಣ ಆವರಿಸಿದೆ.
ದುಮ್ಮಳ್ಳಿ ತಾಂಡಾ ನಿವಾಸಿಯಾಗಿರುವ 'ಕವಿತಾ (26)' ಅಪಘಾತದಲ್ಲಿ ಮೃತಪಟ್ಟ ಯುವತಿ. ಕವಿತಾ ಅವರು ತಮ್ಮ ಸಹೋದರರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ, ಲಗೇಜ್ ತೆಗೆದುಕೊಂಡು ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಇವರ ಬೈಕಿಗೆ ತಾಗಿಸಿದ್ದಾನೆ. ಇದರಿಂದಾಗಿ ಬೈಕ್‌ನ ನಿಯಂತ್ರಣ ತಪ್ಪಿ ಕವಿತಾ ಸಹೋದರ ಪಾದಚಾರಿ ಮಾರ್ಗದ ಮೇಲೆ ಬಿದ್ದಿದ್ದಾನೆ. ಆದರೆ, ಕವಿತಾ ನೇರವಾಗಿ ರಸ್ತೆಗೆ ಬಿದ್ದಿದ್ದಾರೆ.
ದುರದೃಷ್ಟವಶಾತ್, ಅದೇ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಸಿಟಿ ಬಸ್ ಕವಿತಾ ಅವರ ಮೇಲೆ ಹರಿದಿದೆ. ಪರಿಣಾಮವಾಗಿ ತೀವ್ರ ಗಾಯಗಳಾದ ಕವಿತಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಕುಟುಂಬದಲ್ಲಿ ಶೋಕದ ವಾತಾವರಣ:
ಮದುವೆಗೆ ಸಿದ್ಧತೆಗಳು ನಡೆದಿರುವಾಗ ಸಂಭವಿಸಿದ ಈ ದುರ್ಘಟನೆ ಇಡೀ ಕುಟುಂಬ ಮತ್ತು ಗ್ರಾಮದ ಜನರಲ್ಲಿ ಆಘಾತ ಮತ್ತು ದುಃಖವನ್ನುಂಟು ಮಾಡಿದೆ. 15 ದಿನಗಳ ನಂತರ ಹಸೆಮಣೆ ಏರಬೇಕಿದ್ದ ಯುವತಿ ಈಗ ಇನ್ನಿಲ್ಲ ಎಂಬ ಸುದ್ದಿ ಕವಿತಾ ಅವರ ಮನೆಯಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ.
ಕೊನೆಯ ದಿನ ಕಚೇರಿಗೆ ಹೋಗಿ ರಜೆಯನ್ನು ಅಪ್ಲೈ ಮಾಡಿದ್ದ ಕವಿತಾ, ಮದುವೆ ಮುಗಿಸಿಕೊಂಡೇ ವಾಪಸ್ ಕೆಲಸಕ್ಕೆ ಬರುವುದಾಗಿ ಹೇಳಿ ಸಹೋದರನ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಳು. ಆದರೆ, ದುರ್ವಿಧಿ ಮದುವೆಗೂ ಮುನ್ನವೇ ಯುವತಿಯನ್ನು ಮಸಣಕ್ಕೆ ಸೇರಿಸಿದೆ.
ಈ ದುರಂತದ ಕುರಿತು ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.