ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಹುಬ್ಬಳ್ಳಿ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಚಾರ ಆರಂಭಿಸಲಿದೆ. ಆಗಸ್ಟ್ 26 ರಿಂದ ಈ ರೈಲು ಸೇವೆ ಲಭ್ಯವಿರುತ್ತದೆ.
ಬೆಂಗಳೂರು (ಆ.21): ಗಣೇಶ ಚತುರ್ಥಿಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸೇವೆಯನ್ನು ನಡೆಸಲಿದೆ. ರೈಲು ಸಂಖ್ಯೆ 07341, ಎಸ್.ಎಸ್.ಎಸ್. ಹುಬ್ಬಳ್ಳಿ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು ಆಗಸ್ಟ್ 26ರ ಮಂಗಳವಾರ, ಹುಬ್ಬಳ್ಳಿಯಿಂದ ಸಂಜೆ 4:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 11:45 ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ ಎಂದು ಮಾಹಿತಿ ನೀಡಿದೆ.
ಮತ್ತೊಂದೆಡೆ, ರೈಲು ಸಂಖ್ಯೆ 07342, ಮಂಗಳೂರು ಸೆಂಟ್ರಲ್‌ನಿಂದ ಆಗಸ್ಟ್ 27ರ ಬುಧವಾರದಂದು ಮಧ್ಯಾಹ್ನ 2:15 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 9:45 ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ.
ಈ ವಿಶೇಷ ರೈಲು ಪ್ರಯಾಣದ ಹಾದಿಯಲ್ಲಿ ಎಸ್‌ಎಂಎಂ ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ.
ರೈಲು 17 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ ಒಂದು ಎಸಿ ಟೂ ಟೈರ್, ಒಂದು ಎಸಿ ಥ್ರೀ ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಸೇರಿದಂತೆ ವಿಶೇಷ ಚೇತನ ಸ್ನೇಹಿ ವಿಭಾಗಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಬಹುದು.

