ಹುಬ್ಬಳ್ಳಿ-ಧಾರವಾಡದಲ್ಲಿ ಸಾರ್ವಜನಿಕ ಸಾರಿಗೆ ಸುಧಾರಣೆಗೆ ಇಆರ್‌ಟಿ ಬಸ್ ಸೇವೆ ಆರಂಭಿಸುವ ಚಿಂತನೆ. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ವರದಿ : ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ: ದಿನದಿಂದ ದಿನಕ್ಕೆ ಹುಬ್ಬಳ್ಳಿ ಧಾರವಾಡ (Hubballi-Dharwad) ಮಹಾನಗರವು ಬೆಳೆಯುತ್ತಿದ್ದು ಅವಳಿ ನಗರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಹುಬ್ಬಳ್ಳಿ ಧಾರವಾಡ ಕಾರಿಡಾರ್ ನಲ್ಲಿ ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್-ಇ.ಆರ್.ಟಿ (ERT bus service) ಬಸ್ ಸೇವೆ ಆರಂಭಿಸಲು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದುಕೊಂಡು, ಉತ್ತಮವಾದ ಯೋಜನಾ ವರದಿಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Minister Santosh Lad) ಅವರು ಹೇಳಿದರು.
ಅವರು ಇಂದು ಸಂಜೆ ನಗರದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಕಾರಿಡಾರ್‍ದಲ್ಲಿ ಇ.ಆರ್.ಟಿ. ಸಾರಿಗೆ ವ್ಯವಸ್ಥೆ ಕುರಿತು ಸಾರ್ವಜನಿಕರು ಮತ್ತು ಭಾಗಿದಾರರ ಸಭೆ ಜರುಗಿಸಿ ಮಾತನಾಡಿದರು ಹುಬ್ಬಳ್ಳಿ ಧಾರವಾಡ ಕಾರಿಡಾರ್‍ದಲ್ಲಿ ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್-ಇ.ಆರ್.ಟಿ. ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ಮತ್ತು ಖಾಸಗಿ (ಪಿಪಿಪಿ ಮಾಡಲ್) ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್-ಇ.ಆರ್.ಟಿ. ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲು ವಿಸೃತ ಯೋಜನಾ ವರದಿ (ಡಿಪಿಆರ್)ಯನ್ನು ಸಿದ್ಧಗೊಳ್ಳಿಸಲಾಗುತ್ತಿದೆ. ಸರ್ಕಾರವು 3 ತಿಂಗಳ ಕಾಲಾವಕಾಶ ನೀಡಿದ್ದು ಈಗಾಗಲೇ ಒಂದು ತಿಂಗಳ ಅಧ್ಯಯನ ನಡೆಸಲಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಂತಿಮ ವಿಸೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಂಸ್ಥೆಯು ಸಲ್ಲಿಸಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ತ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ , ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ವಿವಿಧ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ, ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ, ಮನವಿಗಳನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಮ್. ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಉಪಪೊಲೀಸ್ ಆಯುಕ್ತ ರವೀಶ ಸಿ.ಆರ್., ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
