ಧರ್ಮಸ್ಥಳದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಪ್ರತ್ಯಕ್ಷದರ್ಶಿಯಾಗಿ ಮುಂದೆ ಬಂದು SITಗೆ ದೂರು ನೀಡಿದ್ದಾರೆ. ಚಿಕ್ಕಕೆಂಪಮ್ಮ ಎಂಬ ಮಹಿಳೆ ಹುಡುಗಿಯೊಬ್ಬಳನ್ನು ಅಪಹರಿಸುವುದನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿದ್ದಾರೆ. ಈ ಹೊಸ ಸಾಕ್ಷ್ಯ ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.
ಮಂಡ್ಯ: ಧರ್ಮಸ್ಥಳ ಗ್ರಾಮದ ಶವ ಹೂತ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸೌಜನ್ಯ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಎಂದು ಮುಂದೆ ಬಂದ ಮಹಿಳೆಯೊಬ್ಬರು SIT ಗೆ ದೂರು ದಾಖಲಿಸಿದ್ದಾರೆ. ಹೀಗಾಗಿ ಈ ಮಹಿಳೆಯ ದೂರು ತೀವ್ರ ಕುತೂಹಲ ಕೆರಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆ ಪ್ರತ್ಯಕ್ಷ ಸಾಕ್ಷಿಯಾಗಿ ಮುಂದೆ ಬಂದಿದ್ದು, ವಿಶೇಷ ತನಿಖಾ ದಳ (SIT) ಗೆ ದೂರು ದಾಖಲಿಸಿದ್ದಾರೆ. ಚಿಕ್ಕಕೆಂಪಮ್ಮ ಅವರು ರೆಜಿಸ್ಟರ್ಡ್ ಪೋಸ್ಟ್ ಮುಖಾಂತರ ಹಾಗೂ ನೇರವಾಗಿ ಮೌಖಿಕವಾಗಿ ದೂರು ದಾಖಲಿಸಿದ್ದು, ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ತನಿಖಾ ದಳಕ್ಕೆ ಈ ಪ್ರಕರಣದ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ದೂರವಾಣಿ ಮೂಲಕವೂ ತನ್ನ ಅನುಭವವನ್ನು ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
ದೂರು ದಾಖಲಿಸುವ ಪ್ರಕ್ರಿಯೆ
ಚಿಕ್ಕಕೆಂಪಮ್ಮ ಅವರು SIT ಸಹಾಯವಾಣಿಗೆ ದೂರು ಸಲ್ಲಿಸಿದ್ದು, ಅಧಿಕಾರಿಗಳು ಸುಮಾರು 45 ನಿಮಿಷಗಳ ಕಾಲ ದೂರವಾಣಿ ಮೂಲಕ ಆಕೆಯಿಂದ ಪ್ರಕರಣದ ವಿವರಗಳನ್ನು ಕಲೆಹಾಕಿದ್ದಾರೆ. ಮಹಿಳಾ ಆಯೋಗಕ್ಕೂ ಅವರು ಕರೆ ಮಾಡಿ, ತಾನು ಕಂಡ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ತನ್ನ ಕಣ್ಣಾರೆ ಕಂಡ ಘಟನೆಯ ಬಗ್ಗೆ ಆತ್ಮವಿಶ್ವಾಸದಿಂದ ಹೇಳಿಕೆ ನೀಡಿರುವ ಅವರು, ತನಿಖೆ ಸಮಗ್ರವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ದೂರುದಾರ ಹೇಳಿಕೆ
ಚಿಕ್ಕಕೆಂಪಮ್ಮ ಅವರ ಪ್ರಕಾರ, ತಾನು ಒಬ್ಬ ಹುಡುಗಿಯನ್ನು ಕಿಡ್ನಾಪ್ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಪೂಜೆ ಸಲ್ಲಿಸಲು ಧರ್ಮಸ್ಥಳದ ದೇವಸ್ಥಾನಕ್ಕೆ ತೆರಳಿದ ಬಳಿಕ, ಪ್ರಕೃತಿ ಚಿಕಿತ್ಸಾಲಯದ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಈ ಘಟನೆ ತನ್ನ ಕಣ್ಣು ಮುಂದೆ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಮಹಿಳೆಯ ಪ್ರಕಾರ, ಒಂದು ಕಾರ್ ಬಂದು, ಆ ಹುಡುಗಿಯನ್ನು ಬಲವಂತವಾಗಿ ಕೊಂಡೊಯ್ದದ್ದು ನೇರವಾಗಿ ನನ್ನ ಕಣ್ಣು ಮುಂದೆ ಜರುಗಿತು. ಈ ದೃಶ್ಯವನ್ನು ಕಂಡ ನಂತರ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಮನಸ್ಸು ಮಾಡಿಕೊಂಡಿದ್ದೆ ಆದರೆ ಆವಾಗ ಆಗಲಿಲ್ಲ ಎಂದು ತಿಳಿಸಿದ್ದಾರೆ.
ಈ ಹೊಸ ದೂರು ಮತ್ತು ಸಾಕ್ಷ್ಯವು ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಗೆ ಹೊಸ ದಿಕ್ಕನ್ನು ತರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಕೆಂಪಮ್ಮ ಅವರ ಹೇಳಿಕೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
