ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬೆನ್ನಲ್ಲೇ ಆರೋಪಿ ಪವಿತ್ರಾ ಗೌಡರ ಮನೆಯಲ್ಲಿ ಸೂತಕದ ವಾತಾವರಣ. ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿದರೂ ಪವಿತ್ರಾ ಗೌಡರ ಮುಖದಲ್ಲಿ ಆತಂಕ. ಪೊಲೀಸರು ಮನೆಯ ಬಳಿ ಕಾವಲು ಕಾಯುತ್ತಿದ್ದಾರೆ.
ಬೆಂಗಳೂರು (ಆ.14): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದ ಬೆನ್ನಲ್ಲೇ ಆರೋಪಿ ಪವಿತ್ರಾ ಗೌಡರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿ ಪೂಜೆ ಸಲ್ಲಿಸಿ, ದೇವಸ್ಥಾನಕ್ಕೆ ಭೇಟಿ ನೀಡಿ ಮರಳಿದ ನಂತರವೂ ಪವಿತ್ರಾ ಗೌಡರ ಮುಖದಲ್ಲಿ ಆತಂಕ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆರ್.ಆರ್.ನಗರದಲ್ಲಿರುವ ತಮ್ಮ ಮನೆಯಲ್ಲಿ ಪವಿತ್ರಾ ಗೌಡ ಇಂದು ಬೆಳಗ್ಗೆ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿ, ನಂತರ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಮನೆಯ ಎದುರು ಪೂಜೆ ಸಲ್ಲಿಸುವ ವೇಳೆ ಪವಿತ್ರಾ ಗೌಡ ಅವರು ಮಾಧ್ಯಮದವರ ಕ್ಯಾಮರಾದತ್ತ ನೋಡಿ ಕಣ್ ಸನ್ನೆ ಮಾಡಿ 'ದಯವಿಟ್ಟು ಮನೆಯ ಬಳಿಯಿಂದ ಹೋಗಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಅದಾದ ಬಳಿಕ ರಾಜರಾಜೇಶ್ವರಿ ನಗರ ದೇವಸ್ಥಾನದ ಆವರಣದಲ್ಲಿ ಅವರು ಟೆನ್ಷನ್‌ನಲ್ಲಿ ಓಡಾಡುತ್ತಾ ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿತ್ತು.
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಮನೆಗೆ ವಾಪಸ್ ಆದರೂ ಪವಿತ್ರಾ ಗೌಡರ ಆತಂಕಕಾರಿ ಚಟುವಟಿಕೆಗಳು ಮುಂದುವರಿದಿವೆ. ಅವರು ಮನೆಯಿಂದ ಮತ್ತೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ, ಮುನ್ನೆಚ್ಚರಿಕಾ ಕ್ರಮವಾಗಿ ಆರ್.ಆರ್.ನಗರ ಪೊಲೀಸರು ಅವರ ಮನೆ ಬಳಿ ಬಂದಿದ್ದಾರೆ. ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಜನ ಸೇರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಫ್ತಿಯಲ್ಲಿಯೇ ಕಾವಲು ಕಾದಿದ್ದಾರೆ.
ಈ ವೇಳೆ, ಮನೆಯಿಂದ ಹೊರಗೆ ಹೋಗಲು ಯತ್ನಿಸಿದ ಪವಿತ್ರಾ ಗೌಡರನ್ನು ಪೊಲೀಸರು ತಡೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗದಂತೆ ಅವರಿಗೆ ಎಚ್ಚರಿಕೆ ನೀಡಿದ ಪೊಲೀಸರು, ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ. 'ರೆಡ್ ಕಾರ್ಪೆಟ್ ಶಾಪ್ ಗೆ ಹೋಗ್ತಿನಿ..' ಎಂದು ಪವಿತ್ರಾ ಗೌಡ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಹೋಗುವಂತಿಲ್ಲ ಎಂದು ತಡೆದ ಪೊಲೀಸರು, ಆಕೆಯನ್ನು ಮತ್ತೆ ಮನೆಯ ಒಳಗಡೆ ಕಳಿಸಿದ್ದಾರೆ.
ದರ್ಶನ್ ಮೈಸೂರು ನಿವಾಸದಲ್ಲಿ ನೀರವ ಮೌನ, ಬಿಗಿ ಬಂದೋಬಸ್ತ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ಯಾವುದೇ ಕ್ಷಣದಲ್ಲಾದರೂ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿರುವ ದರ್ಶನ್ ನಿವಾಸದ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಮನೆಯೊಳಗೆ ಉಳಿದಿದ್ದು, ಒಳಭಾಗದಿಂದ ಗೇಟ್‌ಗೆ ಬೀಗ ಹಾಕಲಾಗಿದೆ. ಮನೆಯ ಮುಂದೆ ನಿಂತ ಪೊಲೀಸರು ಬೀಟ್ ಹಾಕುತ್ತಿದ್ದು, ಮನೆ ಪರಿಸರದಲ್ಲಿ ನೀರವ ಮೌನ ಆವರಿಸಿದೆ. ಪೊಲೀಸರು ಕೆಲಕಾಲ ಮನೆಯ ಮುಂದೆ ಇದ್ದು ಹೋಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ದರ್ಶನ್ ಅವರನ್ನು ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಅವರ ಮೈಸೂರಿನ ನಿವಾಸದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇರಿಸಲಾಗಿದೆ.
