ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಸೆಪ್ಟೆಂಬರ್ 19ರಿಂದ ಒಂದು ವಾರಗಳ ಕಾಲ ತಾತ್ಕಾಲಿಕ ಸಂಚಾರ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆ ಪ್ರವೇಶ ನಿರ್ಬಂಧಿಸಲಾಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.

ಬೆಂಗಳೂರು (ಸೆ.18): ಟ್ರಾಫಿಕ್ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 19, 2025 ರಿಂದ ಒಂದು ವಾರಗಳ ಕಾಲ ಈ ಹೊಸ ವ್ಯವಸ್ಥೆ ಜಾರಿಯಲ್ಲಿರುತ್ತದೆ ಎಂದು ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ಪ್ರಕಟಿಸಿದೆ. ಸಾರ್ವಜನಿಕರು ಮತ್ತು ವಾಹನ ಸವಾರರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಯಾವ ರಸ್ತೆಗಳಲ್ಲಿ ನಿರ್ಬಂಧ?

ಲೇ ಅರೇಬಿಯಾ, ಬಿರಿಯಾನಿ ಜೋನ್, ಮತ್ತು ಕ್ರೋಮ್ ಜಂಕ್ಷನ್ ಬಳಿ ಹೊರವರ್ತುಲ ರಸ್ತೆಯಿಂದ ಮಾರತ್ತಹಳ್ಳಿ-ಕಾಡುಬೀಸನಹಳ್ಳಿ ಸರ್ವಿಸ್ ರಸ್ತೆಗೆ ಪ್ರವೇಶಿಸುವ ಎಲ್ಲ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ ಯಾವುದು?

ಮಹದೇವಪುರ ಕಾರ್ತಿಕ್‌ನಗರ ಕಡೆಯಿಂದ ಬರುವ ವಾಹನಗಳು:

ಈ ಮಾರ್ಗದಲ್ಲಿ ಬರುವ ವಾಹನ ಸವಾರರು ಕಡ್ಡಾಯವಾಗಿ ಕಲಾಮಂದಿರದ ಬಳಿಯ ಸರ್ವಿಸ್ ರಸ್ತೆಗೆ ತೆರಳಬೇಕು. ಅಲ್ಲಿಂದ ಮಾರತ್‌ಹಳ್ಳಿ ಕಾಂತಿ ಸ್ವೀಟ್ಸ್ ಅಂಡರ್‌ಪಾಸ್ ಬಳಿ 'ಯು-ಟರ್ನ್' ತೆಗೆದುಕೊಂಡು, ಮಾರತ್ ಹಳ್ಳಿ ಸೇತುವೆಯ ಬಳಿ ಎಡಕ್ಕೆ ತಿರುಗಿ ಮುನ್ನೇಕೊಳಾಲ, ಕಾಡುಬೀಸನಹಳ್ಳಿ ಜಂಕ್ಷನ್, ಪಣತ್ತೂರು ಮತ್ತು ಕರಿಯಮ್ಮನ ಅಗ್ರಹಾರ ಕಡೆಗೆ ಹೋಗಲು ಸರ್ವಿಸ್ ರಸ್ತೆಯನ್ನು ಬಳಸಬಹುದು.

ದೇವರಬೀಸನಹಳ್ಳಿ ಮತ್ತು ಬೆಳಂದೂರು ಕಡೆಗೆ ಹೋಗುವ ವಾಹನಗಳು: ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕಡ್ಡಾಯವಾಗಿ ಹೊರವರ್ತುಲ ರಸ್ತೆಯ ಮೂಲಕವೇ ಮುಂದುವರಿಯಬೇಕು.

Scroll to load tweet…

ಈ ಬದಲಾವಣೆಯು ಒಂದು ವಾರದ ಅವಧಿಗೆ ಮಾತ್ರ ಇರುವುದರಿಂದ ಸವಾರರು ಸಹಕರಿಸಬೇಕೆಂದು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ. ಈ ಮಾರ್ಪಾಡುಗಳು ಸುಗಮ ಸಂಚಾರಕ್ಕೆ ಸಹಾಯ ಮಾಡಬಹುದೇ ಎಂದು ಪರಿಶೀಲಿಸಲು ಇದು ಒಂದು ಪ್ರಾಯೋಗಿಕ ಕ್ರಮವಾಗಿದೆ.