ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ ಭಾಷಣದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಗದಗದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಕಾರಿನ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಘಟನೆ ವರದಿಯಾಗಿದೆ. ಮಂಗಳ ಗ್ರಹದಲ್ಲಿ ಜೀವಿಗಳ ಕುರುಹುಗಳು ಪತ್ತೆಯಾಗಿವೆ ಇಂದಿನ ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ
ಕನ್ಸರ್ವೇಟಿವ್ ಕಾರ್ಯಕರ್ತ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕಾದ ಉತಾಹ್ ವ್ಯಾಲಿಯ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದುಷ್ಕರ್ಮಿ ಹಾರಿಸಿದ ಒಂದೇ ಒಂದು ಗುಂಡಿನಿಂದ ಚಾರ್ಲಿ ಕಿರ್ಕ್ ಕೊನೆಯುಸಿರೆಳೆದಿದ್ದಾರೆ. ಈ ಗುಂಡಿನ ದಾಳಿಯ ನಂತರ ಅವರು ಭಾಷಣ ಮಾಡುತ್ತಿದ್ದ ವಿವಿ ಕ್ಯಾಂಪಸ್‌ನ್ನೂ ಫೂರ್ತಿ ಸೀಲ್ ಮಾಡಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಗದಗ: ಈದ್ ಮಿಲಾದ್ ವೇಳೆ ಕಾರಿನ ಮೇಲೆ ಪಾಕ್ ಧ್ವಜ ಹಾರಿಸಿ, ಜಾಲತಾಣಕ್ಕೆ ಅಪ್‌ಲೋಡ್, FIR
ಕಾರೊಂದರ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ನಗರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ. ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು , ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಹಸೀನ್ ಎಂಬಾತ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾರಿನ ಬಾನೆಟ್ ಮೇಲೆ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಈ ಫೋಟೋದಲ್ಲಿ ಇಸ್ಲಾಂ ಧರ್ಮದ ಬಾವುಟದ ಜೊತೆಗೆ ಪಾಕಿಸ್ತಾನ ಧ್ವಜದ ಚಿತ್ರವು ಸ್ಪಷ್ಟವಾಗಿ ಕಂಡುಬಂದಿದ್ದು, ಇದು ದೇಶದ ಸಾರ್ವಭೌಮತ್ವಕ್ಕೆ ವಿರೋಧ ಎಂದು ಆರೋಪಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ : ಹವಾಮಾನ ಇಲಾಖೆ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆಯಿಂದ ಬಿಸಿಲು ಹಾಗೂ ಸೆಕೆ ವಾತಾವರಣ ಕಂಡು ಬಂತು. ಮಧ್ಯಾಹ್ನ ನಗರದ ವಿವಿಧ ಭಾಗದಲ್ಲಿ ಮಳೆ ಸುರಿಯಿತು.ರಾತ್ರಿ 9.30ರ ಸುಮಾರಿಗೆ ಮೆಜೆಸ್ಟಿಕ್, ಸದಾಶಿವನಗರ, ವಿಧಾನಸೌಧ, ಶಾಂತಿನಗರ, ಚಾಮರಾಜಪೇಟೆ ಸೇರಿದಂತೆ ಮೊದಲಾದ ಕಡೆ ಧಾರಾಕಾರ ಮಳೆ ಸುರಿಯಿತು.
ಎಸ್ಸಿ ಒಳ ಮೀಸಲಿಗೆ 4 ಸಮುದಾಯ ಕಿಡಿ
ಬೆಂಗಳೂರು : ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ಸಂಬಂಧ ನ್ಯಾ.ಎಚ್.ಎನ್.ನಾಗಮೋಹನದಾಸ್ ವರದಿ ಶಿಫಾರಸ್ಸುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಬಂಜಾರ, ಭೋವಿ, ಕೊರಚ ಹಾಗೂ ಕೊರವ ಸಮುದಾಯಗಳ ಮುಖಂಡರು ಬೃಹತ್ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಬಂಜಾರ, ಭೋವಿ, ಕೊರಚ, ಕೊರವ ಮೀಸಲಾತಿ ಒಕ್ಕೂಟ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಮ್ಮ ಸಮುದಾಯಗಳಿಗೆ ಆಗಿರುವ ಅನ್ಯಾಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನೇಪಾಳ ಆಯ್ತು ಈಗ ಫ್ರಾನ್ಸಲ್ಲೂ ಜನರ ದಂಗೆ
ಪ್ಯಾರಿಸ್: ಯುವಕರ ಆಕ್ರೋಶಕ್ಕೆ ಉರುಳಿಬಿದ್ದ ನೇಪಾಳ ಸರ್ಕಾರದ ಕಡೆ ಜಗತ್ತಿನ ಗಮನ ಇರುವ ಹೊತ್ತಿನಲ್ಲಿ, ಫ್ರಾನ್ಸ್‌ನಲ್ಲಿ ಕೂಡ ಅಲ್ಲಿನ ಸರ್ಕಾರದ ವಿರುದ್ಧ ಜನ ದಂಗೆಯೆದ್ದಿದ್ದಾರೆ. ಅಧ್ಯಕ್ಷ ಎಮಾನ್ಯುವಲ್ ಮ್ಯಾಕ್ರನ್ ಹಾಗೂ ಅವರಿಂದ ನೇಮಕ ಆಗುತ್ತಿರುವ ಪ್ರಧಾನಿಗಳ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದ್ದು, 250 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್ ನೂತನ ಪ್ರಧಾನಿ ಆಗಿ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ಪ್ರಧಾನಿಯಾಗಿ ಮ್ಯಾಕ್ರನ್ ಮಂಗಳವಾರ ನೇಮಿಸಿದ್ದರು. ಈ ಮೂಲಕ, ಫ್ರಾನ್ಸ್ ಒಂದೇ ವರ್ಷದಲ್ಲಿ 4ನೇ ಪಿಎಂ ಕಾಣುವಂತಾಗಿದೆ. ಇದರ ನಡುವೆ ಮ್ಯಾಕ್ರನ್ ಆಡಳಿತ, ಪದೇ ಪದೇ ಪ್ರಧಾನಿ ಬದಲಾವಣೆ ಮತ್ತು ಸರ್ಕಾರದ ಕ್ರಮಗಳಿಂದ ಜನ ಅಸಮಾಧಾನಗೊಂಡಿದ್ದಾರೆ. ದೇಶದ ಅರ್ಥಿಕ ಸ್ಥಿತಿ ಹದಗೆಟ್ಟಿದ್ದು, ಅದನ್ನು ಸುಧಾರಿಸಲು ಪಿಂಚಣಿ, ರಜೆ ಸೇರಿ ಜನರ ಹಲವು ಸವಲತ್ತು ಕಡಿತ ಮಾಡಿರುವ ಕೆಲವು ಕ್ರಮ ಕೈಗೊಂಡ ಬಗ್ಗೆ ಸಿಡಿದೆದ್ದಿದ್ದಾರೆ.
ವೀಪಿ ಚುನಾವಣೆ ಅಡ್ಡ ಮತದಾನ : ಇಂಡಿಯಾ ಕೂಟದಲ್ಲಿ ಒಡಕು
ಉಪರಾಷ್ಟ್ರಪತಿ (ವೀಪಿ) ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರ ಪರ ವಿಪಕ್ಷಗಳ ಸಂಸದರು ಅಡ್ಡ ಮತದಾನ ನಡೆದ ಬಗ್ಗೆ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಯಾಗಿದೆ. ಅಡ್ಡಮತದ ವಿರುದ್ಧ ಆಂತರಿಕ ತನಿಖೆ ಮಾಡಬೇಕು. ಅಡ್ಡ ಮತದಾನ ಇಂಡಿಯಾ ಕೂಟದ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ’ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆಗ್ರಹಿಸಿದ್ದಾರೆ. ಇನ್ನು ಟಿಎಂಸಿ ಮೂಲಗಳು ಪ್ರತಿಕ್ರಿಯಿಸಿ, ‘ಬಿಜೆಪಿ ಜತೆ ಸಖ್ಯ ಬೆಳೆಸಿರುವ ಆಪ್ ಸಂಸದರು ಅಡ್ಡಮತದಾನ ಮಾಡಿದಂತಿದೆ’ ಎಂದು ಆರೋಪಿಸಿವೆ.
ಮಂಗಳನ ಅಂಗಳದಲ್ಲಿ ಜೀವದ ಕುರುಹು ಪತ್ತೆ !
ನವದೆಹಲಿ: ಭೂಮಿಗೆ ಸಮೀಪವಿರುವ ಹಾಗೂ ಹಲವು ಕೌತುಕಗಳ ಗೂಡಾಗಿರುವ ಮಂಗಳನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದನ್ನು ಸಾಬೀತುಪಡಿಸಲು ಕೆಲ ಕುರುಹುಗಳು ದೊರೆತಿವೆ. 2021ರಲ್ಲಿ ಮಂಗಳನ ಮಡಿಲಿಗೆ ಇಳಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಪರ್ಸೀವಿಯರೆನ್ಸ್ ರೋವರ್ ಈ ಮಹತ್ವದ ಸಂಗತಿಯನ್ನು ಬೆಳಕಿಗೆಳೆದಿದೆ. ಈ ರೋವರ್ ಜೆಜೆರೊ ಕುಳಿಯಿಂದ ಸಂಗ್ರಹಿಸಿದ ಬಂಡೆಯ ತುಣುಕುಗಳಲ್ಲಿ ಪ್ರಾಚೀನ ಸೂಕ್ಷ್ಮಜೀವಿಯ ಕುರುಹುಗಳು ಕಂಡುಬಂದಿವೆ. 2024ರಲ್ಲಿ ಸಂಗ್ರಹಿಸಲಾದ ಆ ತುಣುಕುಗಳಿಗೆ ನಾಸಾ ಸಫೈರ್ ಕ್ಯಾನ್ಯನ್ ಎಂದು ಹೆಸರಿಟ್ಟಿದ್ದು, ಅದು ಪತ್ತೆಯಾದ ಬಂಡೆಯನ್ನು ಛೆಯಾವಾ ಫಾಲ್ಸ್ ಎಂದು ಕರೆದಿದೆ. ಇವುಗಳಲ್ಲಿ ಜೀವಿಗಳ ಸೂಕ್ಷ್ಮ ಕುರುಹುಗಳಿವೆ ಎಂದಿರುವ ವಿಜ್ಞಾನಿಗಳು, ಇದನ್ನು ಸಾಬೀತುಪಡಿಸಲು ಇನ್ನಷ್ಟು ಪರೀಕ್ಷೆಗಳು ಅಗತ್ಯ ಎಂದಿದ್ದಾರೆ
ಭಾರತದ ಮೇಲೆ ಶೇ.100 ತೆರಿಗೆ ಹಾಕಿ : ಇಯುಗೆ ಟ್ರಂಪ್
ಒಂದು ಕಡೆ ವ್ಯಾಪಾರ ಒಪ್ಪಂದದ ವಿಚಾರದಲ್ಲಿ ಭಾರತದ ಜತೆ ಮೆತ್ತಗಾದಂತೆ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮತ್ತೊಂದು ಕಡೆ ಭಾರತದ ವಿರುದ್ಧ ಶೇ.100ರಷ್ಟು ತೆರಿಗೆ ವಿಧಿಸಿ ಎಂದು ಯುರೋಪಿಯನ್ ಯೂನಿಯನ್‌ಗೆ ಹೇಳಿದ್ದಾರೆ ಎಂದು ಅಮೆರಿಕದ ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘ಉಕ್ರೇನ್ ಜತೆಗೆ ಯುದ್ಧದಲ್ಲಿ ನಿರತ ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮತ್ತು ಭಾರತದ ಮೇಲೆ ಶೇ.100ರಷ್ಟು ತೆರಿಗೆ ಹಾಕಲು ನಾವು ಸಿದ್ಧರಿದ್ದೇವೆ. ಆದರೆ ಈ ವಿಚಾರದಲ್ಲಿ ನೀವೂ ಕೈಜೋಡಿಸಬೇಕು ಎಂದು ಯುರೋಪಿಯನ್ ಯೂನಿಯನ್‌ನ ಮುಖಂಡರನ್ನು ಅವರು ಮಂಗಳವಾರ ಸಭೆಯೊಂದರಲ್ಲಿ ಆಗ್ರಹಿಸಿದರು. ಈ ಮೂಲಕ ಅಮೆರಿಕದ ರೀತಿ ಯುರೋಪಿಯನ್ ರಾಷ್ಟ್ರಗಳು ಕೂಡ ಭಾರತ ಮತ್ತು ಚೀನಾ ವಿರುದ್ಧ ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು’ ಎಂದು ವರದಿ ಹೇಳಿದೆ.
