todays news roundup: ಅಮೆರಿಕಾ ಎಚ್‌1 ಬಿ ವೀಸಾ ಗಡುವು ವಿಸ್ತರಣೆ, ಕೇಂದ್ರ ಸರ್ಕಾರದಿಂದ ಉದ್ದು ಶೇಂಗಾಕ್ಕೆ ಬೆಂಬಲ ಬೆಲೆ, GST ಕಡಿತದ ಬಳಿಕೆ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ, ಬೆಳಗಾವಿಯಲ್ಲಿ ತಿರುಪತಿ ದೇಗುಲ ನಿರ್ಮಾಣ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ಇಂದಿನ ಪ್ರಮುಖ ಸುದ್ದಿಗಳು

ಅಮೆರಿಕಕ್ಕೆ ಇಂದೇ ಮರಳಲು ನೀಡಿದ್ದ ಗಡುವು ಆತಂಕ ದೂರ

ಅಮೆರಿಕಾ ಸರ್ಕಾರದ ಹೊಸ ವೀಸಾ ನೀತಿಯಿಂದಾಗಿ,ಉದ್ಯೋಗ, ರಜೆ ಸೇರಿದಂತೆ ಯಾವುದೇ ಕಾರಣಕ್ಕೆ ದೇಶ ತೊರೆದಿರುವ ಎಚ್‌1 ಬಿ ವೀಸಾ ಹೊಂದಿರುವ ಉದ್ಯೋಗಿಗಳು ಸೆ.22ರೊಳಗೆ ಅಮೆರಿಕಕ್ಕೆ ಮರಳಬೇಕು ಎಂದು ಅಮೆರಿಕ ಮತ್ತು ಭಾರತೀಯ ಮೂಲದ ಟೆಕ್‌ ಹಾಗೂ ಇತರೆ ಕಂಪನಿಗಳು ತಮ್ಮ ಸಿಬ್ಬಂದಿಗೆ ಸೂಚಿಸಿದ್ದವು. ಹೀಗಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವಿವಿಧ ಕಾರಣಕ್ಕೆ ದೇಶ ತೊರೆದಿದ್ದ ಸಾವಿರಾರು ಜನ ಸಿಬ್ಬಂದಿಗಳು ಭಾರೀ ಸಮಸ್ಯೆ ಎದುರಿಸುವಂತಾಗಿತ್ತು. ಆದರೆ ಬಳಿಕ ಇದು ಹೊಸ ವೀಸಾಕ್ಕೆ ಮಾತ್ರ ಅನ್ವಯ. ಹಾಲಿ ಎಚ್‌1 ಬಿ ವೀಸಾ ಪಡೆದವರು ಸೆ.22ರೊಳಗೆ ತುರ್ತಾಗಿ ಮರಳಬೇಕಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಹೀಗಾಗಿ ಸಾವಿರಾರು ಭಾರತೀಯರು ಮತ್ತು ಇತರೆ ದೇಶಗಳ ಉದ್ಯೋಗಿಗಳು ನಿರಾಳರಾದರು.

ಜಾತಿ ಗಣತಿ ನಮೂನೆಯಿಂದ 33 ಕ್ರಿಶ್ಚಿಯನ್‌ ಜಾತಿಗೆ ಕೊಕ್‌

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್‌.. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್‌ಲೈನ್‌ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ.

ಬೆಂಬಲ ಬೆಲೆ ಅಡಿ ಕೇಂದ್ರದಿಂದ ಹೆಸರು, ಉದ್ದು, ಶೇಂಗಾ ಖರೀದಿ

ಅತಿವೃಷ್ಟಿಯಿಂದಾಗಿ ತತ್ತರಿಸಿರುವ ಕರ್ನಾಟಕದ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಸೆ ಮೇರೆಗೆ ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಿದೆ. 2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್‌ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಜಿಎಸ್‌ಟಿ ಇಳಿಕೆ ಎಫೆಕ್ಟ್ : ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಭಾರಿ ಕಡಿತ

ಕೇಂದ್ರ ಸರ್ಕಾರ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿ ದರ ಇಳಿಸಿರುವ ಹಿನ್ನೆಲೆಯಲ್ಲಿ ದಸರಾ ಹಬ್ಬಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿರುವ ಕೆಎಂಎಫ್‌, ಮೊಸರು ಹೊರತುಪಡಿಸಿ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್‌ ಸೇರಿ ಇತರೆ ಉತ್ಪನ್ನಗಳ ಮಾರಾಟ ದರ ಪರಿಷ್ಕರಿಸಿದೆ. ಹೊಸ ದರಗಳು ಸೆ.22ರಿಂದ ಜಾರಿಗೆ ಬರಲಿವೆ. ಹಾಲು ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿ ಪ್ರಕಟಿಸಿದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, ನವರಾತ್ರಿಯಿಂದ ಜಾರಿಗೆ ಬರುವಂತೆ ಹಾಲಿನ ಉತ್ಪನ್ನಗಳ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಅದರಂತೆ ಹಾಲಿನ ಇತರ ಉತ್ಪನ್ನಗಳ ದರವನ್ನು ಇಳಿಕೆ ಮಾಡಲಾಗಿದೆ. ಆದರೆ ಶೇ.5ರಷ್ಟು ಜಿಎಸ್‌ಟಿ ಇರುವ ಮೊಸರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದಿನ ದರದಂತೆಯೇ ಮುಂದುವರೆಯಲಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ತಲೆಯೆತ್ತಲಿದೆ ತಿರುಪತಿ ವೆಂಕಟೇಶ ದೇಗುಲ

ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಭಕ್ತರಿಗಾಗಿ ಬೆಳಗಾವಿಯಲ್ಲಿ ತಿರುಪತಿ-ತಿರುಮಲ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದ್ದು, ಬಹುತೇಕ ವರ್ಷಾಂತ್ಯದಿಂದ ದೇವಸ್ಥಾನ ಕಾಮಗಾರಿ ಆರಂಭವಾಗಲಿದೆ ಎಂದು ಟಿಟಿಡಿ ಸದಸ್ಯ ಎಸ್‌.ನರೇಶ್‌ ಕುಮಾರ್‌ ತಿಳಿಸಿದ್ದಾರೆ. ಶನಿವಾರ ನಗರದ ವೈಯಾಲಿಕಾವಲ್‌ ಟಿಟಿಡಿ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಮ್ಮ ಅಣ್ವಸ್ತ್ರ ಇನ್ನು ಸೌದಿಗೂ ಲಭ್ಯ : ಪಾಕ್‌

ಸೌದಿ ಅರೇಬಿಯಾದೊಂದಿಗೆ ಆಗಿರುವ ರಕ್ಷಣಾ ಒಪ್ಪಂದದ ಅಡಿಯಲ್ಲಿ ತನ್ನ ದೇಶದ ಪರಮಾಣು ಸಾಮರ್ಥ್ಯಗಳು ಸೌದಿಗೂ ಲಭ್ಯವಾಗಲಿದೆ ಎಂದು ಪಾಕಿಸ್ತಾನ ಘೋಷಿಸಿದೆ. ಈ ಮೂಲಕ, ಅಣ್ವಸ್ತ್ರ ಹೊಂದಿರುವ ಏಕೈಕ ಇಸ್ಲಾಮಿಕ್‌ ದೇಶ ತಾನೊಬ್ಬನೇ ಎಂದು ಪರೋಕ್ಷವಾಗಿ ಕೊಚ್ಚಿಕೊಂಡಿದೆ.ಈ ಕುರಿತು ಮಾಧ್ಯಮದವರಲ್ಲಿ ಮಾತನಾಡಿದ ಪಾಕ್‌ ರಕ್ಷಣಾ ಸಚಿವ ಖ್ವಾಜಾ ಆಸೀಫ್‌, ‘ಪಾಕಿಸ್ತಾನವು ಅಣ್ವಸ್ತ್ರವನ್ನು ಬಹಳ ಹಿಂದೆಯೇ ಸಿದ್ಧಿಸಿಕೊಂಡಿತ್ತು. ಜತೆಗೆ ಆಗಿನಿಂದಲೇ ಸೇನೆಗೂ ಅದರ ತರಬೇತಿ ಕೊಡಲಾಗುತ್ತಿದೆ. ಈಗ ಆಗಿರುವ ಒಪ್ಪಂದದ ಅಡಿ ಇವುಗಳು(ಅಣ್ವಸ್ತ್ರ) ಸೌದಿಗೂ ದೊರೆಯಲಿವೆ’ ಎಂದು ಹೇಳಿದ್ದಾರೆ.