Tiger Fight Caught on Camera: ಮನುಷ್ಯರು ದೊಡ್ಡವರಾಗುತ್ತಿದ್ದಂತೆ ಆಸ್ತಿಗಾಗಿ ಹೋರಾಡುವುದು ಪರಸ್ಪರ ಕಿತ್ತಾಡುವುದು ಸಾಮಾನ್ಯ.ಆದರೆ ಅಲ್ಲೊಂದು ಕಡೆ ಅಮ್ಮ ಮಗಳು ದಟ್ಟ ಕಾಡಿನ ನಡುವೆ ಭೀಕರ ಕಾಳಗಕ್ಕೆ ಇಳಿದಿದ್ದವು. ರಜೆ ಅಂತ ಕಾಡು ಸುತ್ತಲೂ ಬಂದವರು ಈ ಘೋರ ಕಾಳಗ ನೋಡಿ ದಂಗಾಗಿದ್ದರು.. ಮುಂದೇನಾಯ್ತು…

ಕಾಡಿನ ನಡುವೆ ಅಮ್ಮ ಮಗಳ ಘೋರ ಕಾಳಗ

ಮನೆಯಲ್ಲಿ ಅಪ್ಪ ಮಗ ಅಮ್ಮ ಮಗಳು ಕಿತ್ತಾಡೋದು ಸಾಮಾನ್ಯ. ಆದರೆ ಅಲ್ಲೊಂದು ಕಡೆ ಅಮ್ಮ ಮಗಳು ದಟ್ಟ ಕಾಡಿನ ನಡುವೆ ಭೀಕರ ಕಾಳಗಕ್ಕೆ ಇಳಿದಿದ್ದವು. ರಜೆ ಅಂತ ಕಾಡು ಸುತ್ತಲೂ ಬಂದವರು ಈ ಘೋರ ಕಾಳಗ ನೋಡಿ ದಂಗಾಗಿದ್ದರು. ಇಂತಹದೊಂದು ಘಟನೆ ನಡೆದಿದ್ದು, ರಾಜಸ್ಥಾನದ ರಣಥಂಬೋರೆ ಅಭಯಾರಣ್ಯದಲ್ಲಿ. ಅಂದಹಾಗೆ ಹೀಗೆ ಕಾಳಗ ಮಾಡಿದ್ದು ಮನುಷ್ಯ ಸಮುದಾಯದ ಅಮ್ಮ ಮಗಳಲ್ಲ, ಬದಲಾಗಿ ವನ್ಯ ಸಾಮ್ರಾಜ್ಯದಲ್ಲಿ ಕಾಡಿನ ಪ್ರಾಣಿಗಳು ಎಂದು ಗುರುತಿಸಿಕೊಂಡ ತಾಯಿ ಹುಲಿ ಹಾಗೂ ಅದರ ಮಗಳು...

ಮನುಷ್ಯರು ದೊಡ್ಡವರಾಗುತ್ತಿದ್ದಂತೆ ಆಸ್ತಿಗಾಗಿ ಹೋರಾಡುವುದು ಪರಸ್ಪರ ಕಿತ್ತಾಡುವುದು ಸಾಮಾನ್ಯ ಹಾಗೆಯೇ ಈ ರೀತಿಯ ಪ್ರದೇಶ ಗುರುತಿಸುವಿಕೆ ಪ್ರಾಣಿಗಳಲ್ಲೂ ಇದೆ ಎಂಬ ವಿಚಾರ ನಿಮಗೆ ಗೊತ್ತಾ? ಇಲ್ಲಿ ಕಂಡಂತಹ ಅಮ್ಮ ಮಗಳ ಕಿತ್ತಾಟದ ದೃಶ್ಯ ಒಂದು ಪ್ರಾದೇಶಿಕ ಗಡಿಗಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಣಥಂಬೋರೆ ಅರಣ್ಯಕ್ಕೆ ಪ್ರವಾಸ ಬಂದವರಿಗೆ ಈ ಅಪರೂಪದ ದೃಶ್ಯ ಸೆರೆ ಸಿಕ್ಕಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೂಪ್ರದೇಶಕ್ಕಾಗಿ ತಾಯಿ ರಿದ್ದಿ ಹಾಗೂ ಮಗಳು ಮೀರಾಳ ಬಡಿದಾಟ

ಅಂದಹಾಗೆ ಇಲ್ಲಿ ಹೀಗೆ ಉಗ್ರ ಕಾಳಗ ಮಾಡಿದ್ದು, ರಿದ್ದಿ (ಟಿ-124) ಎಂದು ಪ್ರಸಿದ್ಧಿ ಪಡೆದಿರುವ ಹುಲಿ ಹಾಗೂ ಅದರ ಮಗಳು ಮೀರಾ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

ಪ್ರದೇಶಕ್ಕೆ ಸಂಬಂಧಿಸಿದಂತೆ ಝೋನ್-3ಯಲ್ಲಿ ಈ ಕಾಳಗ ನಡೆದಿದೆ. ಇದು ವನ್ಯಜೀವಿ ನಡವಳಿಕೆಯ ನೈಸರ್ಗಿಕ ಭಾಗವಾಗಿದೆ ವಿಶೇಷವಾಗಿ ಮರಿಗಳು ಬೆಳೆದು ತಮ್ಮದೇ ಆದ ಸ್ಥಳವನ್ನು ಹುಡುಕಲು ಪ್ರಾರಂಭಿಸಿದಾಗ ಎಂದು ಅರಣ್ಯಾಧಿಕಾರಿಗಳು ಧೃಡಪಡಿಸಿದರು.

ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ

ರಣಥಂಬೋರೆ ಅರಣ್ಯಕ್ಕೆ ಮುಂಜಾನೆ ಪ್ರವಾಸ ಬಂದಿದ್ದ ಜನರಿಗೆ ಈ ಅಪರೂಪದ ದೃಶ್ಯ ಸೆರೆ ಸಿಕ್ಕಿದೆ. ಮೊದಲಿಗೆ ತಾಯಿ ಮಗಳು ಸಮೀಪ ಸಮೀಪದಲ್ಲೇ ಕಾಣಿಸಿಕೊಂಡಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ರಿದ್ಧಿ ಇದು ತನ್ನ ಜಾಗ ಎಂದು ಗಡಿ ಗುರುತಿಸಲು ಶುರು ಮಾಡಿದಾಗ ಈ ಸವಾಲು ಅದರ ಮರಿ ಮೀರಾಳನ್ನು ಕೆರಳಿಸಿದ್ದು, ಕೂಡಲೇ ಇಬ್ಬರ ಮಧ್ಯೆ ಘೋರ ಕಾಳಗ ನಡೆದಿದೆ. ಎರಡು ಹುಲಿಗಳು ಬಹಳ ಘೋರವಾಗಿ ಘರ್ಜಿಸುತ್ತಾ ಕಾದಾಡಿವೆ. ಇವುಗಳ ಈ ಘರ್ಜನೆಯ ಸದ್ದು ಇಡೀ ಕಾಡಿನಲ್ಲಿ ಪ್ರತಿಧ್ವನಿಸಿದೆ. ಈ ಹೊಡೆದಾಟ ಕೆಲ ನಿಮಿಷ ನಡೆದರು ಬಹಳ ಘೋರವಾಗಿತ್ತು. ಈ ಕಾಳಗದಲ್ಲಿ ರಿದ್ದಿ ಗೆದ್ದಿದ್ದರೆ, ಮೀರಾ ಈ ಕಾಳಗದಲ್ಲಿ ಸೋತು ಕಾಡಿನತ್ತ ಓಡಿದೆ.

ಈ ಘೋರ ಕಾಳಗದಲ್ಲಿ ರಿದ್ಧಿ ಹಾಗೂ ಮೀರಾ ಇಬ್ಬರಿಗೂ ಗಾಯಗಳಾಗಿವೆ. ಇದೊಂದು ಪ್ರದೇಶಕ್ಕಾಗಿ ನಡೆದ ಕಿತ್ತಾಟವಾಗಿದ್ದು, ಮರಿಗಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಇದೊಂದು ಸಾಮಾನ್ಯ ವನ್ಯಜೀವಿಗಳ ವರ್ತನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ತಾಯಿ ಹುಲಿ ರಿದ್ಧಿಯ ಮೂರು ಮಕ್ಕಳು ಬೆಳೆದು ದೊಡ್ಡವರಾದ ನಂತರ ಅವರು ತಮ್ಮ ತಾಯಿಯಿಂದ ಬೇರ್ಪಟ್ಟು ಸ್ವಂತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಈ ಕಾಳಗ ನಡೆದಿದೆ. ವನ್ಯಜೀವಿ ತಜ್ಞರ ಪ್ರಕಾರ, ಮರಿಗಳು ತನ್ನದೇ ಆದ ಪ್ರದೇಶವನ್ನು ಪಡೆಯಲು ಪ್ರಯತ್ನಿಸಿದಾಗ, ಅದರ ಮೊದಲ ಸವಾಲು ಸಾಮಾನ್ಯವಾಗಿ ತಾಯಿಯೊಂದಿಗೆ ಇರುತ್ತದೆ.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ ಪ್ರಕಾರ, ರಿದ್ಧಿ ಎಂಬ ಹೆಣ್ಣು ಹುಲಿ ಪ್ರಸಿದ್ಧ ಮಚಾಲಿ ಎಂಬ ಹುಲಿಯ ಐದನೇ ತಲೆಮಾರಿಗೆ ಸೇರಿದೆ. ಅವಳು ಆರೋಹೆಡ್ ಹೆಣ್ಣು ಹುಲಿಯ ಮಗಳಾಗಿದ್ದು, ಆಕೆ ತನ್ನಳ ಮುತ್ತಜ್ಜಿಯಷ್ಟೇ ಬಲಿಷ್ಠ ಮತ್ತು ಪ್ರಭಾವಶಾಲಿ ಎಂದು ಹೇಳಲಾಗುತ್ತದೆ. ರಿದ್ಧಿ ಈಗ ತನ್ನ ತಾಯಿಯ ಪ್ರದೇಶದಲ್ಲಿ ತನ್ನದೇ ಆದ ಜಾಗವನ್ನು ಮಾಡಿಕೊಂಡಿದ್ದಾಳೆ ಮತ್ತು ರಣಥಂಬೋರ್‌ನ 3 ಮತ್ತು 4 ನೇ ವಲಯಗಳಲ್ಲಿ ಪದಮ್ ಸರೋವರ, ರಾಜ್-ಬಾಗ್, ಮಲಿಕ್ ಸರೋವರ ಮತ್ತು ಮಂಡೂಬ್ ಪ್ರದೇಶಗಳಲ್ಲಿ ಆಕೆ ಪ್ರವಾಸಿಗರಿಗೆ ಕಾಣಸಿಗುತ್ತಾಳೆ.

ಈ ಪ್ರದೇಶವನ್ನು ರಣಥಂಬೋರ್‌ನ ಹೃದಯ ಭಾಗವೆಂದು ಪರಿಗಣಿಸಲಾಗಿದೆ. ಅಲ್ಲಿ ಪ್ರಬಲ ಹುಲಿಗಳ ಪರಂಪರೆ ಮಚಲಿಯಿಂದ ಪ್ರಾರಂಭವಾಗಿದ್ದು, ಆಕೆಯ ನಂತರ ಆಕೆಯ ಮಗಳು ಸುಂದರಿ, ನಂತರ ಕೃಷ್ಣ, ಏರೋ ಹೆಡ್ ಮತ್ತು ಈಗ ರಿದ್ಧಿ ಪ್ರಸಿದ್ಧಿ ಪಡೆದಿದ್ದಾರೆ. ಈ ಮೊದಲು, ಅಮಾ ಘಾಟಿ ಅರಣ್ಯ ಪ್ರದೇಶದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಭೂಪ್ರದೇಶಕ್ಕಾಗಿ ನಡೆದ ಕಾದಾಟದಲ್ಲಿ ಸುಮಾರು 3.5 ವರ್ಷ ವಯಸ್ಸಿನ ಗಂಡು ಹುಲಿ ಸಾವನ್ನಪ್ಪಿತು. ಆರಂಭಿಕ ವರದಿಗಳ ಪ್ರಕಾರ ಈ ಹುಲಿ T-2309 ಹಾಗೂ T-120 (ಗಣೇಶ್) ಜೊತೆಗೆ ಪ್ರಾದೇಶಿಕ ಕಾದಾಟದಲ್ಲಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದ್ದು, ಗಣೇಶ್‌ 6.5 ವರ್ಷ ವಯಸ್ಸಿನ ಹುಲಿಯಾಗಿದೆ.

ಈ ಅಪರೂಪದ ವೀಡಿಯೋ ಇಲ್ಲಿದೆ ನೀವು ವೀಕ್ಷಿಸಿ…

Scroll to load tweet…

ಇದನ್ನೂ ಓದಿ: ಫೀಸ್ ಕಟ್ಟದ್ದಕ್ಕೆ ವಿದ್ಯಾರ್ಥಿಯನ್ನು ನೆಲದಲ್ಲಿ ಕೂರಿಸಿ ಪರೀಕ್ಷೆ ಬರೆಸಿದ ಶಾಲೆ
ಇದನ್ನೂ ಓದಿ: 8ನೇ ಕ್ಲಾಸಲ್ಲಿ ಶಾಲೆ ಬಿಟ್ಟರೂ ಬಿಲಿಯನೇರ್ ಆದವನ ಯಶೋಗಾಥೆ