Living in Burj Khalifa: ಅನೇಕರು ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡ್ತಾರೆ. ಆದರೆ ಓದು ಮುಗಿದ ನಂತರ ಓದಿಗೆ ತಕ್ಕಂತೆ ಸರಿಯಾದ ಉದ್ಯೋಗ ಸಿಗದೆ ಪರದಾಡ್ತಿರ್ತಾರೆ. ಆದರೆ ಇಲ್ಲೊಬ್ಬರು 8ನೇ ಕ್ಲಾಸಲ್ಲಿ ಓದಿಗ ಗುಡ್‌ಬಾಯ್ ಹೇಳಿದ್ರು ಈಗ ಯಶಸ್ವಿ ಉದ್ಯಮಿ ಎನಿಸಿದ್ದಾರೆ ಅವರ ಯಶೋಗಾಥೆ ಇಲ್ಲಿದೆ..

8ನೇ ಕ್ಲಾಸಲ್ಲಿ ಶಾಲೆ ಬಿಟ್ಟರೂ ಬಿಲಿಯನೇರ್ ಆದವನ ಯಶೋಗಾಥೆ

ಅನೇಕರು ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡ್ತಾರೆ. ಆದರೆ ಓದು ಮುಗಿದ ನಂತರ ಓದಿಗೆ ತಕ್ಕಂತೆ ಸರಿಯಾದ ಉದ್ಯೋಗ ಸಿಗದೆ ಪರದಾಡ್ತಿರ್ತಾರೆ. ಆದರೆ ಇನ್ನೂ ಅನೇಕರು ಓದಿಗೆ ಅರ್ಧದಲ್ಲೇ ಗುಡ್‌ಬಾಯ್ ಹೇಳಿದ್ರೂ ಬದುಕಿನಲ್ಲಿ ಸಂಪತ್ತಿನ ಸರದಾರನೆನಿಸಿದ್ದಾರೆ. ಇಂತಹವರಲ್ಲಿ ಒಬ್ಬರು ಸತೀಶ್ ಸನ್ಪಾಲ್‌. ಅವರ ಪ್ರೇರಣಾದಾಯಕ ಕತೆ ಇಲ್ಲಿದೆ.

ಈಗ ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾದಲ್ಲಿ ವಾಸ

ಪ್ರತಿ ವರ್ಷ, ಅನೇಕ ಭಾರತೀಯರು ಉತ್ತಮ ಅವಕಾಶಗಳು ಮತ್ತು ಉಜ್ವಲ ಭವಿಷ್ಯವನ್ನು ಅರಸಿ ಗಲ್ಫ್ ರಾಷ್ಟ್ರಗಳತ್ತ ವಲಸೆ ಹೋಗ್ತಾರೆ. ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳುತ್ತಾರೆ. ಇವರಲ್ಲಿ ಅನೇಕರು ಯಶಸ್ಸನ್ನು ಕಂಡುಕೊಂಡರೆ, ಮತ್ತೆ ಕೆಲವರು ಊಹಿಸದಷ್ಟು ಮೇಲೇರಿ ಅನೇಕರಿಗೆ ಸ್ಫೂರ್ತಿಯಾಗುತ್ತಾರೆ. ಅಂತಹವರಲ್ಲಿ ಒಬ್ಬರು ಉದ್ಯಮಿ ಸತೀಶ್ ಸನ್ಪಾಲ್ ಅವರು, 8ನೇ ಕ್ಲಾಸ್‌ನಲ್ಲೇ ಓದಿಗೆ ಗುಡ್‌ ಬಾಯ್ ಹೇಳಿದ ಇವರು 15ರ ಹರೆಯಕ್ಕೆಲ್ಲಾ ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸಿದರು. ಈಗ ಅವರು ದುಬೈನ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ವಾಸ ಮಾಡ್ತಿದ್ದಾರೆ. ದೃಢನಿಶ್ಚಯ ಮತ್ತು ಕಠಿಣ ಪರಿಶ್ರಮವು ನಿಮ್ಮನ್ನು ಎಷ್ಟರ ಮಟ್ಟಿಗೆ ಕೊಂಡೊಯ್ಯಬಹುದು ಎಂಬುದಕ್ಕೆ ಇವರ ಬದುಕು ಸಾಕ್ಷಿಯಾಗಿದೆ. ಸತೀಸ್ ಸನ್ಪಾಲ್ ಅವರ ಪ್ರಯಾಣವು ವಿದೇಶಕ್ಕೆ ಅದರಲ್ಲು ಗಲ್ಫ್ ದೇಶಗಳಿಗೆ ದುಡಿಮೆಗೆಂದು ತೆರಳಿ ಕನಸುಗಳನ್ನು ಬೆನ್ನಟ್ಟುವ ಮತ್ತು ಅವುಗಳನ್ನು ನಿಜವಾಗಿಸುವ ಅಸಂಖ್ಯಾತ ಭಾರತೀಯರ ನಿಜವಾದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.

15ನೇ ವಯಸ್ಸಲ್ಲಿ ದಿನಸಿ ಅಂಗಡಿ ತೆರೆದಿದ್ದ ಸತೀಶ್ ಸನ್ಪಾಲ್

ಮೂಲತಃ ಮಧ್ಯಪ್ರದೇಶದ ಜಬಲ್ಪುರದವರಾದ ಸತೀಶ್ ಸನ್ಪಾಲ್‌ ಅವರು 8 ನೇ ತರಗತಿಯ ನಂತರ ಶಾಲೆಯನ್ನು ತೊರೆದು ತಮ್ಮ ತಾಯಿ ನೀಡಿದ ಕೇವಲ 50,000 ರೂ.ಗಳೊಂದಿಗೆ ತಮ್ಮ ಉದ್ಯಮ ಪ್ರಯಾಣವನ್ನು ಪ್ರಾರಂಭಿಸಿದರು. ಕೇವಲ 15 ನೇ ವಯಸ್ಸಿನಲ್ಲಿ ಭಾರತದಲ್ಲಿ ಒಂದು ಸಣ್ಣ ದಿನಸಿ ಅಂಗಡಿಯನ್ನು ತೆರೆದರು. ಎರಡು ವರ್ಷಗಳಲ್ಲಿ ವ್ಯವಹಾರ ಮುಚ್ಚಿಹೋದರೂ, ಅದು ಅವರಿಗೆ ಕಲಿಸಿದ ಆರಂಭಿಕ ಪಾಠಗಳು ಅವರ ಮುಂದಿನ ಜೀವನಕ್ಕೆ ಬಹಳ ಅಮೂಲ್ಯವೆನಿಸಿತು

ಉದ್ಯಮದಲ್ಲಿ ಯಶಸ್ವಿಯಾಗಬೇಕೆಂಬ ದೃಢನಿಶ್ಚಯದಿಂದ, ಸತೀಶ್ ದೊಡ್ಡ ಅವಕಾಶಗಳನ್ನು ಅನ್ವೇಷಿಸಲು ಯುಎಇಗೆ ತೆರಳಿದರು. ಔಪಚಾರಿಕ ಶಿಕ್ಷಣ ಅಥವಾ ವ್ಯವಹಾರ ಪದವಿ ಇಲ್ಲದಿದ್ದರೂ ಅವರು ಎಂದಿಗೂ ಯಾರ ಅಡಿಯಲ್ಲಿಯೂ ಕೆಲಸ ಮಾಡಲಿಲ್ಲ, ಬದಲಿಗೆ ತಮ್ಮದೇ ಆದ ಮಾರ್ಗವನ್ನು ರೂಪಿಸಿದರು. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ದುಬೈ ಸತೀಶ್‌ಗಾಗಿ ಎಲ್ಲವನ್ನೂ ಬದಲಾಯಿಸಿತು. 11 ವರ್ಷಗಳ ಹಿಂದೆ ಅವರು ಯುಎಇಗೆ ಬಂದಾಗ, ಅವರ ಬಳಿ ಯಾವುದೇ ವ್ಯವಸ್ಥೆ ಇರಲಿಲ್ಲ. ಅವರು ಗ್ರಾಹಕರು ಷೇರು ಮಾರುಕಟ್ಟೆ ದಲ್ಲಾಳಿಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡವ ಸಣ್ಣ ವಿಚಾರದೊಂದಿಗೆ ಉದ್ಯಮವನ್ನು ಆರಂಭಿಸಿದರು. ಅದು ಅವರಿಗೆ ಅನುಭವ ಮತ್ತು ಆತ್ಮವಿಶ್ವಾಸ ಎರಡನ್ನೂ ನೀಡಿತು. ದುಬೈನಲ್ಲಿ ಬೆಳೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಅವರು ಭಾವಿಸಿದರು. ಈ ಮಧ್ಯೆ, ಅವರು ನಿಧಾನವಾಗಿ ಅನೇಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು.

2018ರಲ್ಲಿ ಸತೀಶ್ ಎನಾಕ್ಸ್ ಹೋಲ್ಡಿಂಗ್ (ANAX Holding) ಅನ್ನು ನಿರ್ಮಿಸಿದ್ದು, ಇದು 3 ಪ್ರಮುಖ ಭಾಗಗಳನ್ನು ಹೊಂದಿದೆ- ANAX ಡೆವಲಪ್‌ಮೆಂಟ್ಸ್, ANAX ಹಾಸ್ಪಿಟಾಲಿಟಿ ಮತ್ತು ANAX ಕ್ಯಾಪಿಟಲ್ ಈ ಸಂಸ್ಥೆಗಳು ಇಂದು ಲಾಭದಾಯಕವಾಗಿ ಓಡುತ್ತಿದ್ದು, ಅವರ ದೊಡ್ಡ ಕನಸು ನನಸಾಗುತ್ತಿದೆ.

ಇತರರು ನಿಲ್ಲಿಸಿದಾಗ ಹೂಡಿಕೆ ಆರಂಭಿಸಿದ ಸತೀಶ್ ಸನ್ಪಾಲ್

ಸತೀಶ್ ಸನ್ಪಾಲ್ ಅವರು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಕಡಿಮೆ ಮೌಲ್ಯದ ದುಬೈ ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಅದನ್ನು ಸುವರ್ಣಾವಕಾಶವನ್ನಾಗಿ ಪರಿವರ್ತಿಸಿದರು, ಈಗ ಅದು ಹತ್ತು ಪಟ್ಟು ಹೆಚ್ಚಾಗಿದೆ. ಅವರ $120 ಮಿಲಿಯನ್ ಡಾಲರ್‌ನ ದುಬೈ ಹಿಲ್ಸ್ ಮಹಲು ಅವರ ದಿಟ್ಟ ನಿರ್ಧಾರಗಳಿಗೆ ಸಾಕ್ಷಿಯಾಗಿದೆ. ಅವರು ಉಳಿತಾಯ ಮತ್ತು ಖರ್ಚುಗಳನ್ನು ಬುದ್ಧಿವಂತಿಕೆಯಿಂದ ಸಮತೋಲನಗೊಳಿಸಿದ್ದು,, ರಿಯಲ್ ಎಸ್ಟೇಟ್, ಐಷಾರಾಮಿ ಕೈಗಡಿಯಾರಗಳು, ಚಿನ್ನ ಮತ್ತು ಕಾರುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಅವರ ಬೆಳವಣಿಗೆಗೆ ಉತ್ತೇಜನ ನೀಡಿದೆ.

ಪ್ರಸ್ತುತ ಬುರ್ಜ್ ಖಲೀಫಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುವ ಸತೀಶ್, ಐಷಾರಾಮಿ ಕಾರುಗಳು ಮತ್ತು ವಿಹಾರ ನೌಕೆಯನ್ನು ಹೊಂದಿದ್ದಾರೆ. ಸತೀಶ್ ಪಾಲಿಗೆ ಅವು ಕೇವಲ ಸ್ಥಾನಮಾನವಲ್ಲ, ಆತ್ಮವಿಶ್ವಾಸದ ಸಂಕೇತ. 2034 ರ ವೇಳೆಗೆ ವಿಶ್ವದ ಅಗ್ರ 10 ಬಿಲಿಯನೇರ್‌ಗಳಲ್ಲಿ ಒಬ್ಬರಾಗುವ ಗುರಿಯನ್ನು ಅವರು ಹೊಂದಿದ್ದಾರೆ.

ಇದನ್ನೂ ಓದಿ: ಗಾಯಗೊಂಡಿದ್ದ ವೃದ್ಧೆಯ ಬಳಿ ಪೊಲೀಸರ ಕರೆದೊಯ್ದು ರಕ್ಷಿಸಿದ ಶ್ವಾನ
ಇದನ್ನೂ ಓದಿ: ಸಾವಿಗೆ ಶರಣಾದ ಐಪಿಎಸ್ ಅಧಿಕಾರಿ: IAS ಪತ್ನಿಯಿಂದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ FIR