ನಕಲಿ ಆ್ಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸುತ್ತಿದ್ದ ಯುವಕನನ್ನ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.

ತಿರುವನಂತಪುರ: ನಕಲಿ ಆ್ಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ 17,000 ರೂ. ಮೌಲ್ಯದ ಮೊಬೈಲ್ ಫೋನ್ ಕದ್ದ ಯುವಕನನ್ನು ಬಂಧಿಸಲಾಗಿದೆ. ಪೆರಿಂಜನಂನ ಎಳ್ಳುಂಪರಂಬಿಲ್ ನಿವಾಸಿ ಅಹ್ಮದ್ (೧೮) ಎಂಬಾತನನ್ನು ಮತಿಲಕಂ ಪೊಲೀಸರು ಬಂಧಿಸಿದ್ದಾರೆ. ಮತಿಲಕಂನ ಮೊಬೈಲ್ ಅಂಗಡಿಯಿಂದ ಸ್ಮಾರ್ಟ್‌ಫೋನ್ ಖರೀದಿಸಿ, ಅಂಗಡಿಯವರನ್ನು ವಂಚಿಸಿ ಪರಾರಿಯಾಗಲು ಯತ್ನಿಸುತ್ತಿದ್ದನು. ಕೂಡಲೇ ಯುವಕನನ್ನು ಹಿಡಿದ ಮೊಬೈಲ್ ಅಂಗಡಿ ಮಾಲೀಕರು, ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಗುರುವಾರ ಸಂಜೆ ಮತಿಲಕಂನ ಮೊಬೈಲ್ ಪಾರ್ಕ್ ಅಂಗಡಿಯಲ್ಲಿ ಈ ವಂಚನೆ ನಡೆದಿದೆ. 17,000 ರೂ. ಮೌಲ್ಯದ ಫೋನ್ ಖರೀದಿಸಿದ ಅಹ್ಮದ್ , ಅಂಗಡಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಫೋನ್ ಪೇ ಮೂಲಕ ಹಣ ಪಾವತಿಸಿದ್ದಾಗಿ ಹೇಳಿದ್ದಾನೆ. ನಂತರ ಅವರಿಗೆ ಸ್ಕ್ರೀನ್‌ಶಾಟ್ ತೋರಿಸಿ ಅಂಗಡಿಯಿಂದ ಹೊರಡಲು ಯತ್ನಿಸಿದ್ದಾನೆ.

ಓಡಿ ಹೋಗ್ತಿದ್ದಾಗ ಹಿಡಿದ ಅಂಗಡಿ ಮಾಲೀಕ

ಅಂಗಡಿಯ ಮಾಲೀಕ ನೌಫಲ್‌ಗೆ ಯುವಕನ ಮೇಲೆ ಸಂಶಯ ಬಂದು ಆತನನ್ನು ತಡೆದಿದ್ದಾರೆ. ನೌಫಲ್ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಜಮಾ ಆಗಿರಲಿಲ್ಲ. ಹಣ ಜಮೆ ಆಗಿಲ್ಲ, ಮತ್ತೊಮ್ಮೆ ಪ್ರಯತ್ನಿಸು ಎಂದಾಗ ಅಹ್ಮದ್‌ನ ವಂಚನೆ ಬೆಳಕಿಗೆ ಬಂದಿದೆ, ಕೂಡಲೇ ನೌಫಲ್ ಮತಿಲಕಂ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ರಾಧಿಕಾ ಕುಮಾರಸ್ವಾಮಿ 2 ಕೋಟಿ ಕೊಟ್ಟದ್ದು ನಿಜ, ಆದ್ರೆ ವಾಪಸ್ ಕೊಟ್ಟಿಲ್ಲ: ಜಮೀರ್ ಅಹಮದ್

ಯಾವುದು ಈ ನಕಲಿ ಆಪ್?

ನಕಲಿ ಆ್ಯಪ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದಾಗಿ ವಂಚಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮತಿಲಕಂ ಪೊಲೀಸ್ ಠಾಣೆಯ ಎಸ್‌.ಎಚ್‌.ಒ. ಷಾಜಿ ಎಂ.ಕೆ., ಎಸ್‌.ಐ. ಅಶ್ವಿನ್ ರಾಯ್, ಜಿ.ಎಸ್‌.ಸಿ.ಪಿ.ಒ.ಗಳಾದ ಸನೀಶ್, ಷನಿಲ್ ತನಿಖಾ ತಂಡದಲ್ಲಿದ್ದರು. ಆರೋಪಿ ಈ ಹಿಂದೆಯೂ ಇದೇ ರೀತಿ ಮಾಡಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಹ್ಮದ್ ಬಳಕೆ ಮಾಡುತ್ತಿದ್ದ ಆಪ್ ಯಾವುದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ: ರಿಲಯನ್ಸ್‌ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾದಿಂದ ವಂಚನೆ ಆರೋಪ