ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ, ವೈರಲ್ ವಿಡಿಯೋಗಾಗಿ ಹಾವಿನೊಂದಿಗೆ ಸ್ಟಂಟ್ ಮಾಡಲು ಯತ್ನಿಸಿದ ಯುವಕನೋರ್ವ ಹಾವು ಕಡಿತದಿಂದ ಸಾವನ್ನಪ್ಪಿದ್ದಾನೆ. ಪಕ್ಕದ ಮನೆಗೆ ಬಂದಿದ್ದ ಹಾವನ್ನು ಹಿಡಿದ ನಂತರ ಈ ಘಟನೆ ನಡೆದಿದೆ.
ಹಾವನ್ನು ಕೊರಳಿಗೆ ಸುತ್ತಿಕೊಂಡು ವಿಷಕಂಠನಾಗಲು ಹೋದ ಯುವಕ ಸಾವು
ಮುಜಾಫರ್‌ನಗರ: ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ಯುವಕನೋರ್ವ ಜೀವಬಿಟ್ಟ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. 24 ವರ್ಷದ ಮೋಹಿತ್ ಕುಮಾರ್ ಸಾವನ್ನಪ್ಪಿದ ಯುವಕ ಮುಜಾಫರ್‌ಗರ ಜಿಲ್ಲೆಯ ಮೊರ್ನಾ ಗ್ರಾಮದ ಭೊಪಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಹಾವನ್ನು ಕೊರಳಿಗೆ ಸುತ್ತಿಕೊಂಡ ಯುವಕ ಬಳಿ ಆ ದೃಶ್ಯದ ವೀಡಿಯೋ ಮಾಡಲು ಮುಂದಾಗಿದ್ದಾನೆ. ಅಷ್ಟರಲ್ಲಿ ಇವನ ಕಿರುಕುಳದಿಂದ ಬೆದರಿದ ಹಾವು ಈತನಿಗೆ ಕಚ್ಚಿದ್ದು, ಕೂಡಲೇ ಮೋಹಿತ್ ಕುಮಾರ್‌ನನ್ನು ಮನೆಯವರು ಆಸ್ಪತ್ರೆಗೆ ಕರೆದೊಯ್ದರಾದರೂ ಆತ ಬದುಕುಳಿಯಲಿಲ್ಲ,
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಚ್ಚು ವೀವ್ಸ್ ಬಂದು ವೈರಲ್ ಆಗುವುದಕ್ಕಾಗಿ ಯುವಕ ಯುವತಿಯರು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಒಂದು ವೀಡಿಯೋ ವೈರಲ್‌ಗಾಗಿ ರಸ್ತೆಗಳು, ರೈಲು ನಿಲ್ದಾಣಗಳು ರೈಲ್ವೆ ಟ್ರ್ಯಾಕ್‌ಗಳು ಹೀಗೆ ಎಲ್ಲೆಂದರಲ್ಲಿ ಸಾಹಸ ಮಾಡುತ್ತಾ ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುವುದಲ್ಲದೇ ಇತರರ ಜೀವಕ್ಕೂ ಅಪಾಯ ಉಂಟು ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲಿ ಯುವಕ ಹಾವಿನೊಂದಿಗೆ ಸಾಹಸ ಮಾಡಲು ಹೋಗಿ ಸಾವಿನ ಮನೆ ಸೇರಿದ್ದಾನೆ.
ಹಾವನ್ನು ಚೀಲಕ್ಕೆ ತುಂಬಿಸುವ ಮೊದಲು ಕೊರಳಿಗೆ ಸುತ್ತಿಕೊಂಡ ಮೋಹಿತ್
ಪೊಲೀಸರ ಪ್ರಕಾರ ಭೊಪಾದ ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಹಾವನ್ನು ನೋಡಿ ಅಲ್ಲಿದ್ದವರು ಬೊಬ್ಬೆ ಹೊಡೆದಿದ್ದು, ಗದ್ದಲ ಕೇಳಿ ನೆರೆಹೊರೆಯ ಹಲವಾರು ಜನ ಸ್ಥಳಕ್ಕೆ ಧಾವಿಸಿದರು. ಹಾಗೆಯೇ ಮೋಹಿತ್ ಅಲಿಯಾಸ್ ಬಂಟಿ ಕೂಡ ಅಲ್ಲಿಗೆ ಬಂದಿದ್ದು, ತನ್ನ ಬರಿ ಕೈಗಳಿಂದ ಸರೀಸೃಪವನ್ನು ಹಿಡಿದಿದ್ದಾನೆ. ಹಾವನ್ನು ಹಿಡಿದ ಆತ ಸುಮ್ಮನೇ ಅದನ್ನು ಚೀಲಕ್ಕೆ ತುಂಬಿಸಿ ಬೇರೆಡೆ ಬಿಟ್ಟಿದ್ದರೆ ಬದುಕುಳಿಯುತ್ತಿದ್ದನೋ ಏನೋ, ಆದರೆ ಆತ ನೆರೆದಿದ್ದ ಜನಸಮೂಹದ ಮುಂದೆಯೇ ಹಾವಿನೊಂದಿಗೆ ಸಾಹಸ ಪ್ರದರ್ಶಿಸಲು ಪ್ರಾರಂಭಿಸಿದ್ದಾನೆ. ಬರೀ ಇಷ್ಟೇ ಅಲ್ಲ ಈ ಘಟನೆಯನ್ನು ತನ್ನ ಮೊಬೈಲ್ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೋಹಿತ್ ಕೈಗೆ ಎರಡೆರಡು ಬಾರಿ ಕಚ್ಚಿದ ಹಾವು
ಈತನ ಈ ಕೃತ್ಯದ ಸಮಯದಲ್ಲಿ, ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು. ಅವನು ಹಾವನ್ನು ಚೀಲಕ್ಕೆ ಹಾಕುವಲ್ಲಿ ಯಶಸ್ವಿಯಾದರೂ, ಸ್ವಲ್ಪ ಸಮಯದ ನಂತರ ಅವನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಮೋಹಿತ್‌ನನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಯ ಸಮಯದಲ್ಲಿ ಮೋಹಿತ್ ಸಾವನ್ನಪ್ಪಿದ್ದಾನೆ. ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ : ವೀಡಿಯೋ
ಇದನ್ನೂ ಓದಿ: ಮಿಲಿಯನ್ ವೀವ್ಸ್ ಗಳಿಸಿದ ರೀಲ್ಸ್ ಡಿಲೀಟ್‌ಗೆ ಸೂಚಿಸಿದ ಪೊಲೀಸರು: ಸಾಯುವುದಾಗಿ ಬೆದರಿಸಿದ ಯುವತಿ
