Shahid Siddiqui on Azam Khan: ಭೂ ಆಕ್ರಮಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಪುತ್ರನಿಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಲಾಗುತ್ತಿತ್ತು ಎಂದು ಮಾಜಿ ರಾಜ್ಯಸಭಾ ಸದಸ್ಯ ಶಾಹೀದ್ ಸಿದ್ಧಿಕಿ ಆರೋಪಿಸಿದ್ದಾರೆ.
ಭೂ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಚಿವ ಅಜಂ ಖಾನ್ ಹಾಗೂ ಅವರ ಪುತ್ರನಿಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಲಾಗುತ್ತಿತ್ತು ಎಂದು ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಪತ್ರಕರ್ತ ಶಾಹೀದ್ ಸಿದ್ಧಿಕಿ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ರಾಂಪುರದಿಂದ 10 ಬಾರಿ ಶಾಸಕನಾಗಿ ಆಯ್ಕೆ ಆಗಿರುವ ಅಜಂ ಖಾನ್ ಕ್ವಾಲಿಟಿ ಬಾರ್ ಆಸ್ತಿಗೆ ಸಂಬಂಧಿಸಿದ ಭೂ ಅತಿಕ್ರಮಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಅವರಿಗೆ ಕಳೆದ ವಾರ ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ನಂತರ ಕಳೆದ ವಾರ ಸೀತಾಪುರದ ಜೈಲಿನಿಂದ ಬಿಡುಗಡೆಯಾಗಿದ್ದರು. ದೂರು ನೀಡಿದ ಸುಮಾರು ಐದು ವರ್ಷಗಳ ನಂತರ ಈ ಪ್ರಕರಣಕ್ಕೆ ಅವರ ಹೆಸರನ್ನು ಸೇರಿಸಲಾಗಿತ್ತು. ಹಾಗೂ ಸುಮಾರು ಎರಡು ವರ್ಷಗಳ ಕಾಲ ಅವರು ಸೀತಾಪುರ ಜೈಲಿನಲ್ಲಿ ಕಳೆದಿದ್ದರು.
ಮಾಜಿ ರಾಜ್ಯಸಭಾ ಸದಸ್ಯ ಶಾಹಿದ್ ಸಿದ್ದಿಕಿ ಆರೋಪ ಏನು?
ಈ ಸಮಯದಲ್ಲಿ ಅವರಿಗೆ ಸ್ಲೋ ಪಾಯಿಸನ್(ನಿಧಾನವಾಗಿ ಕಾರ್ಯನಿರ್ವಹಿಸಿ ಕಾಲಕ್ರಮೇಣ ಕೊಲ್ಲುವ ವಿಷ) ನೀಡಲಾಗ್ತಿತ್ತು ಎಂದು ಶಾಹೀದ್ ಸಿದ್ಧಿಕಿ ಆರೋಪಿಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಕೂಡಲೇ ಮಾಜಿ ಸಚಿವ ಅಜಮ್ ಖಾನ್ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅವರನ್ನು ಭೇಟಿಯಾದ ನಂತರ, ಮಾಜಿ ರಾಜ್ಯಸಭಾ ಸದಸ್ಯ ಮತ್ತು ಪತ್ರಕರ್ತ ಶಾಹಿದ್ ಸಿದ್ದಿಕಿ, ಖಾನ್ ಮತ್ತು ಅವರ ಮಗ ಅಬ್ದುಲ್ಲಾ ಜೈಲಿನಲ್ಲಿದ್ದಾಗ ಸ್ಲೋ ಪಾಯಿಸನ್ ವಿಷಪ್ರಾಶನಕ್ಕೆ ಒಳಗಾಗಿದ್ದರು ಎಂದು ಹೇಳಿಕೊಂಡಿದ್ದಾರೆ.
ಅಜಂ ಖಾನ್ ಭೇಟಿ ಬಳಿಕ ಫೇಸ್‌ಬುಕ್‌ನಲ್ಲಿ ಫೋಟೋ ಹಂಚಿಕೊಂಡ ಶಾಹೀದ್ ಸಿದ್ಧಿಕಿ, 'ಜೈಲುವಾಸದ ಸಮಯದಲ್ಲಿ ನನಗೆ ಮತ್ತು ನನ್ನ ಮಗ ಅಬ್ದುಲ್ಲಾಗೆ ಆಹಾರದಲ್ಲಿ ಸ್ಲೋ ಪಾಯಿಸನ್ ನೀಡ್ತಿದ್ರು, ವಿಚಾರ ಅರಿತ ಮೇಲೆ, ಜೈಲಿನ ಆಹಾರವನ್ನು ತಿನ್ನುವುದನ್ನು ನಿಲ್ಲಿಸಿ ನನಗಾಗಿ ಅಡುಗೆ ಮಾಡಲು ಪ್ರಾರಂಭಿಸಿದೆ. ಗ್ಯಾಂಗ್‌ಸ್ಟಾರ್ ಮುಖ್ತಾರ್ ಅನ್ಸಾರಿಯನ್ನು ಕೊಂದ ರೀತಿಯಲ್ಲಿ ನನ್ನನ್ನು ಕೊಲ್ಲಲು ಪಿತೂರಿ ನಡೆದಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ ಎಂದು ಅಜಮ್ ಖಾನ್ ನನಗೆ ಹೇಳಿದರು ಎಂದು ಶಾಹೀದ್ ಸಿದ್ಧಿಕಿ ಬರೆದುಕೊಂಡಿದ್ದಾರೆ.
ಗ್ಯಾಂಗ್‌ಸ್ಟಾರ್ ಮುಖ್ತಾರ್ ಅನ್ಸಾರಿ ಕೊಂದಂತೆ ನನ್ನ ಕೊಲ್ಲಲು ಯತ್ನ: ಅಜಂ ಖಾನ್
ಈ ವರ್ಷದ ಆರಂಭದಲ್ಲಿ ಕಸ್ಟಡಿಯಲ್ಲಿ ಗ್ಯಾಂಗ್‌ಸ್ಟಾರ್ ಮುಖ್ತಾರ್ ಅನ್ಸಾರಿ ಹಠಾತ್ ಮರಣ ಹೊಂದಿದ ನಂತರ ನನ್ನ ಅನುಮಾನಗಳು ಹೆಚ್ಚಾದವು ಎಂದು ಅವರು ಅಜಂ ಖಾನ್ ಹೇಳಿದ್ದಾಗಿ ಸಿದ್ಧಿಕಿ ಬರೆದುಕೊಂಡಿದ್ದಾರೆ. ಅಜಂಖಾನ್ ಅವರ ಆರೋಗ್ಯ ಜೈಲಿನಲ್ಲಿ ಹದಗೆಟ್ಟಿತು, ಅವರ ಕಾಲುಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು ಮತ್ತು ತಿರುಗಾಡಲು ಸಾಧ್ಯವಾಗದಷ್ಟು ಚಿಕ್ಕದಾದ ಒಂಟಿ ಕೋಣೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಬಿಜೆಪಿ ಸರ್ಕಾರ ನನ್ನ ಹೆಂಡ್ತಿ ತಾಝಿನ್ ಫಾತ್ಮಾ, ಮಗಂದಿರು ಹಾಗೂ ಇಡೀ ಕುಟುಂಬವನ್ನು ಮುಗಿಸಲು ಬಯಸಿದೆ ಎಂದು ಎಂದು ಅವರು ಹೇಳಿದರು ಎಂದು ಸಿದ್ಧಿಕಿ ಹೇಳಿಕೊಂಡಿದ್ದಾರೆ.
ಸೀತಾಪುರದ ಜೈಲಿನಲ್ಲಿ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಖಾನ್ ಆಗಾಗ್ಗೆ ಮಾತನಾಡುತ್ತಿದ್ದರೂ, ಅವರಾಗಲಿ ಅಥವಾ ಅವರ ಕುಟುಂಬ ಸದಸ್ಯರಾಗಲಿ ವಿಷಪ್ರಾಶನದ ಆರೋಪವನ್ನು ಸಾರ್ವಜನಿಕವಾಗಿ ಇದುವರೆಗೆ ದೃಢಪಡಿಸಿಲ್ಲ. ಬುಧವಾರ ನಡೆಯಲಿರುವ ಕೋರ್ಟ್ ವಿಚಾರಣೆ ವೇಳೆ ತಮ್ಮ ವಿರುದ್ಧದ ಹಲವು ಪ್ರಕರಣಗಳಲ್ಲಿ ತಾನು ದೋಷಮುಕ್ತವಾಗುವ ವಿಶ್ವಾಸವಿದೆ ಎಂದು ಹೇಳಿದ ಅಜಮ್ ಖಾನ್, ತಾನು ಬಿಎಸ್‌ಪಿ (ಬಹುಜನ ಸಮಾಜ ಪಕ್ಷ ) ಸೇರಬಹುದೆಂಬ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ನಾನು ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂಬ ನಂಬಿಕೆ ನನಗಿದೆ. ಹೈಕೋರ್ಟ್‌ನಿಂದ, ಇಲ್ಲದಿದ್ದರೆ ಸುಪ್ರೀಂ ಕೋರ್ಟ್‌ನಿಂದ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಆದರೆ ಬಹುಶಃ ಆ ಹಂತ ಬರುವುದಿಲ್ಲ ಎಂದು ಭಾವಿಸುವೆ ಎಂದು 77 ವರ್ಷದ ರಾಜಕಾರಣಿ ರಾಂಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು. ಬಿಎಸ್ಪಿಗೆ ಪಕ್ಷಾಂತರ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ತಾವು ಯಾವಾಗಲೂ ಎಸ್ಪಿ ಜೊತೆ ದೃಢವಾಗಿ ನಿಂತಿರುವುದಾಗಿ ಹೇಳಿದರು. ನಮಗೆ ವ್ಯಕ್ತಿತ್ವವಿದೆ. ವ್ಯಕ್ತಿತ್ವ ಎಂದರೆ ನಾವು ಹುದ್ದೆಯನ್ನು ಹೊಂದಿದ್ದೇವೆಯೋ ಇಲ್ಲವೋ ಎಂಬುದು ಅರ್ಥವಲ್ಲ ಜನರು ನಮ್ಮನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದರ್ಥ. ಮತ್ತು ನಾವು ಮಾರಾಟಕ್ಕಿಲ್ಲ, ನಾವು ಅದನ್ನು ಸಾಬೀತುಪಡಿಸಿದ್ದೇವೆ ಎಂದು ಅವರು ಹೇಳಿದರು.
ಭೂಕಬಳಿಕೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಖಾನ್, ಈ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತ ಎಂದರು.
ಇದನ್ನೂ ಓದಿ: ಹುಂಡಿಯಿಂದ ಹಣ ಕದ್ದು ಆಸ್ತಿ ಖರೀದಿ: 7 ಆಸ್ತಿಗಳನ್ನು ತಿರುಪತಿಗೆ ದಾನ ನೀಡಿದ ದಂಪತಿ!
ಇದನ್ನೂ ಓದಿ: ಚಿಕನ್ ಬೇಕು ಎಂದಿದ್ದಕ್ಕೆ ಲಟ್ಟಣಿಗೆಯಿಂದ ಬಾರಿಸಿದ ತಾಯಿ: 7 ವರ್ಷದ ಬಾಲಕ ಸಾವು
