ಹಿಂದೂ ಉತ್ತರಾಧಿಕಾರ ಕಾಯ್ದೆಯು ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ನೀಡಿದರೂ, ಈ ನಿಯಮ ಪರಿಶಿಷ್ಟ ಪಂಗಡದ (ST) ಮಹಿಳೆಯರಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಅವರು ತಮ್ಮ ಸ್ಥಳೀಯ ಬುಡಕಟ್ಟು ಕಾನೂನುಗಳ ಪ್ರಕಾರವೇ ಆಸ್ತಿ ಪಡೆಯಲು ಅರ್ಹರಾಗಿರುತ್ತಾರೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ 2005ಕ್ಕಿಂತಲೂ ಮುಂಚಿತವಾಗಿ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಗೆ ಹಕ್ಕುದಾರರು ಆಗಿರಲಿಲ್ಲ. ಆದರೆ 2005ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಅದರ ಅನ್ವಯ, ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕನ್ನು ನೀಡುತ್ತದೆ. ಇದರ ಪ್ರಕಾರ, ತಂದೆ ಅಥವಾ ಮಗಳು 2005 ಕ್ಕಿಂತ ಮೊದಲು ನಿಧನರಾಗಿದ್ದರೂ ಸಹ, ಮಗಳು ಅಥವಾ ಅವಳ ಮಕ್ಕಳು ಆಸ್ತಿಯ ಮೇಲೆ ಹಕ್ಕು ಪಡೆಯಲು ಅರ್ಹರಾಗಿದ್ದಾರೆ. 2005 ರ ತಿದ್ದುಪಡಿಯು ಪೂರ್ವಾನ್ವಯವಾಗುತ್ತದೆ ಮತ್ತು ಹಿಂದಿನ ಪಾಲು ವಿವಾದಗಳ ಪ್ರಕರಣಗಳಿಗೂ ಅನ್ವಯವಾಗುತ್ತದೆ. ಇದು ಪಿತ್ರಾರ್ಜಿತಕ್ಕೆ ಮಾತ್ರ ಅನ್ವಯ ಆಗಲಿದ್ದು, ತಂದೆ ಸ್ವಂತವಾಗಿ ಸಂಪಾದಿಸಿದ ಆಸ್ತಿಯ ಬಗ್ಗೆ ಈ ನಿಯಮ ಅನ್ವಯಿಸುವುದಿಲ್ಲ, ಏಕೆಂದರೆ ಅದು ಅವರ ಸ್ವಂತ ಆಸ್ತಿಯಾಗಿರುತ್ತದೆ.
ಸುಪ್ರೀಂಕೋರ್ಟ್ ಹೇಳಿದ್ದೇನು?
ಆದರೆ, ಈ ತಿದ್ದುಪಡಿಯು ಪರಿಶಿಷ್ಟ ಪಂಗಡದ (SC) ಮಹಿಳೆಯರಿಗೆ ಅನ್ವಯ ಆಗುವುದಿಲ್ಲ ಎಂದು ಇದೀಗ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಪರಿಶಿಷ್ಟ ಪಂಗಡದ ಸದಸ್ಯರು ಸ್ಥಳೀಯ ಬುಡಕಟ್ಟು ಕಾನೂನುಗಳ ಆಧಾರದ ಮೇಲೆ ಆಸ್ತಿಗಳನ್ನು ಪಡೆಯಲು ಅರ್ಹರೇ ವಿನಾ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ಯ ಆಧಾರದ ಮೇಲೆ ಅಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಪೀಠ ಹೇಳಿದೆ. ಇದರ ಅರ್ಥ ಸ್ಥಳೀಯ ಬುಡಕಟ್ಟು ಕಾನೂನುಗಳ ಆಧಾರದ ಮೇಲೆ ಹೆಣ್ಣುಮಕ್ಕಳ ಆಸ್ತಿಯ ಬಗ್ಗೆ ಏನು ಉಲ್ಲೇಖವಾಗಿದೆಯೋ ಅದರ ಅನ್ವಯ ಅವರು ಆಸ್ತಿಗೆ ಅರ್ಹರೇ ವಿನಾ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಅಲ್ಲ ಎಂದು.
ಹಿಮಾಚಲ ಪ್ರದೇಶ ಹೈಕೋರ್ಟ್ ತೀರ್ಪು ವಜಾ
ತಮ್ಮ ರಾಜ್ಯದ ಬುಡಕಟ್ಟು ಹೆಣ್ಣುಮಕ್ಕಳಿಗೂ ಉತ್ತರಾಧಿಕಾರ ಕಾಯ್ದೆಯನ್ನು ಅನ್ವಯ ಮಾಡಿರುವ ಹಿಮಾಚಲ ಪ್ರದೇಶದ ಸರ್ಕಾರದ ಕ್ರಮವನ್ನು ಎತ್ತಿಹಿಡಿದ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ವಿಶೇಷ ಅಧಿಸೂಚನೆಯನ್ನು ನೀಡದ ಹೊರತು ಈ ಕಾಯ್ದೆಯು ಯಾವುದೇ ಪರಿಶಿಷ್ಟ ಪಂಗಡದ ಸದಸ್ಯರಿಗೆ ಅನ್ವಯಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಸಂವಿಧಾನವನ್ನು ಉಲ್ಲೇಖಿಸಿದ ನ್ಯಾಯಾಲಯ
ಇದಕ್ಕೆ ಪೂರಕವಾಗಿ ನ್ಯಾಯಪೀಠವು ಸಂವಿಧಾನದ 341 ಮತ್ತು 342 ನೇ ವಿಧಿಗಳನ್ನು ವ್ಯಾಖ್ಯಾನಿಸಿದೆ. SC ಮತ್ತು ST ಗಳ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ನಿರ್ವಹಿಸುವ ಸಂವಿಧಾನದ 341 ಮತ್ತು 342 ನೇ ವಿಧಿಗಳು ಹಿಂದೂ ಉತ್ತರಾಧಿಕಾರ ಕಾಯ್ದೆಯ ಈ ಶಾಸನ ಯಾರಿಗೆ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ST ಸಮುದಾಯದವರು ಅದರ ವ್ಯಾಪ್ತಿಯಿಂದ ಹೊರಗಿರುತ್ತಾರೆ ಎಂದು ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ತಿಳಿಸಿದೆ. ಈ ಸಂವಿಧಾನಕ್ಕೆ ತಕ್ಕಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 2(2) ರಲ್ಲಿ, ಸಂವಿಧಾನದ ವ್ಯಾಪ್ತಿಯ ಹಿನ್ನೆಲೆಯಲ್ಲಿ ಇದು ಪರಿಶಿಷ್ಟ ಪಂಗಡದ ಸದಸ್ಯರಿಗೆ ಅನ್ವಯಿಸುವುದಿಲ್ಲ, ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆಯ ಹೊರಡಿಸುವವರೆಗೂ ಸಂವಿಧಾನದಲ್ಲಿ ಇರುವ ಅಂಶಗಳೇ ಮುಂದುವರೆಯಲಿವೆ ಎಂದಿದೆ ಎಂದಿದ್ದಾರೆ.
