ಬಿಹಾರ ಚುನಾವಣೆ ರಂಗೇರಿದ್ದು, ರಾಜಕೀಯ ಪಕ್ಷಗಳ ಲೆಕ್ಕಾಚಾರದ ನಡುವೆ ಜ್ಯೋತಿಷಿಗಳ ಭವಿಷ್ಯವಾಣಿ ಕುತೂಹಲ ಕೆರಳಿಸಿದೆ. ಹಾಲಿ ಸಿಎಂ ನಿತೀಶ್ ಕುಮಾರ್ ಹಾಗೂ ತೇಜಸ್ವಿ ಯಾದವ್ ಹಾಗೂ ಬಿಜೆಪಿಯ ಸಮ್ರಾಟ್ ಚೌಧರಿ ನಡುವೆ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜ್ಯೋತಿಷಿಗಳು ಹೇಳಿದ್ದೇನು?
ಬಿಹಾರದ ಚುನಾವಣೆ (Bihar Election) ರಂಗೇರಿದೆ. ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಇದಾಗಲೇ ಎಲ್ಲಾ ಪಕ್ಷಗಳು ಸರ್ಕಸ್ ನಡೆಸುತ್ತಿವೆ. ಸದ್ಯ ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಜೆಡಿಯುನ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದರೆ ಬಿಜೆಪಿಯ ಸಮ್ರಾಟ್ ಚೌಧರಿ ಉಪಮುಖ್ಯಮಂತ್ರಿಯಾಗಿದ್ದಾರೆ. ಇವರನ್ನು ಕೆಳಕ್ಕೆ ಇಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಎಲ್ಲಾ ತಯಾರಿ ನಡೆಸುತ್ತಿದೆ. ಆದರೆ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದರೂ, ಇಂಡಿ ಒಕ್ಕೂಟದ ಸೀಟು ಹಂಚಿಕೆ ಮಾತುಕತೆ ಮುಕ್ತಾಯಗೊಳ್ಳದೇ ಇರುವುದು ಕೂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಅದೇ ಇನ್ನೊಂದೆಡೆ ಇದೇ 24ರಂದು ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಭೇಟಿ ನೀಡಲಿದ್ದು, ಜನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜಕೀಯದ ನಡುವೆ ಜ್ಯೋತಿಷಿಗಳ ಲೆಕ್ಕಾಚಾರ
ಇದರ ನಡುವೆಯೇ ಒಂದೆಡೆ ರಾಜಕೀಯ ಪಕ್ಷಗಳ ಲೆಕ್ಕಾಚಾರ ಶುರುವಾಗಿದ್ದರೆ, ಅದೇ ಇನ್ನೊಂದೆಡೆ ಖ್ಯಾತ ಜ್ಯೋತಿಷಿಗಳ ಲೆಕ್ಕಚಾರವೂ ಶುರುವಾಗಿದೆ. ಇದಾಗಲೇ ಹಲವಾರು ಖ್ಯಾತನಾಮ ಜ್ಯೋತಿಷಿಗಳು ಯೂಟ್ಯೂಬ್ಗಳಲ್ಲಿ ನೇರವಾಗಿಯೇ ಮಾತನಾಡಿದ್ದಾರೆ. ಹಲವು ಸಂದರ್ಭಗಳಲ್ಲಿ ಚುನಾವಣೆಯ ವಿಷಯ ಬಂದಾಗ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಒಗಟು ಒಗಟಾಗಿ ಹೇಳುವುದು ಸಾಮಾನ್ಯವಾಗಿದೆ. ಅದರ ಬಗ್ಗೆ ಟೀಕೆಗಳೂ ಸಾಕಷ್ಟು ಕೇಳುಬರುವುದು ಉಂಟು. ಎಲ್ಲಾ ರೀತಿಯಲ್ಲಿಯೂ ಅರ್ಥೈಸಿಕೊಳ್ಳಬಹುದಾದ ಮಾತುಗಳನ್ನು ಈ ಜ್ಯೋತಿಷಿಗಳು ಹೇಳುವುದು ಉಂಟು. ಆದರೆ ಬಿಹಾರದ ವಿಷಯದಲ್ಲಿ ನೇರವಾಗಿಯೇ ಹಲವು ಜ್ಯೋತಿಷಿಗಳು ಮಾತನಾಡಿರುವುದು, ಅದರಲ್ಲಿಯೂ ಒಂದೇ ರೀತಿಯ ಅಭಿಪ್ರಾಯ ಕೊಟ್ಟಿರುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.
ಹಾಗಿದ್ದರೆ ಯಾರು ಸಿಎಂ? ಯಾರಿಗೆ ವನವಾಸ?
ಎನ್ಡಿಎ ಅಭ್ಯರ್ಥಿ, ಹಾಲಿ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರೆಯಲಿದ್ದಾರಾ? ಬಿಜೆಪಿಯ ಅಭ್ಯರ್ಥಿಯಾಗಿರುವ ಹಾಲಿ ಉಪ ಮುಖ್ಯಮಂತ್ರಿಯಾಗಿರುವ ಸಮ್ರಾಟ್ ಚೌಧರಿ ಸಿಎಂ ಖುರ್ಚಿ ಏರಲಿದ್ದಾರಾ ಅಥವಾ ಬಹು ಚರ್ಚಿತ ಹಾಗೂ ಈ ಖುರ್ಚಿಗಾಗಿ ಭಾರಿ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಜನತಾ ದಳ್ನ ತೇಜಸ್ವಿ ಯಾದವ್ (Tejaswi Yadav) ಆಗಲಿದ್ದಾರಾ ಅಥವಾ ಇನ್ನಾರು ಎನ್ನುವ ಬಗ್ಗೆ ಭಾರಿ ಕುತೂಹಲವಿದೆ.
ಸದ್ಯ ಜ್ಯೋತಿಷಿಗಳು ಎಲ್ಲಾ ಲೆಕ್ಕಾಚಾರ ಹಾಕಿ ಹೇಳಿರುವ ಪ್ರಕಾರ, ನಿತೀಶ್ ಕುಮಾರ್ (Nitish Kumar) ಅವರ ಗ್ರಹಗತಿಗಳು ಸದ್ಯ ಚೆನ್ನಾಗಿಲ್ಲ. ಅವರಿಗೆ ಆರೋಗ್ಯದಲ್ಲಿಯೂ ಸಾಕಷ್ಟು ಏರುಪೇರು ಆಗುವ ಸಾಧ್ಯತೆ ಇರುವ ಕಾರಣ ಅವರ ಮುಖ್ಯಮಂತ್ರಿಯ ಖುರ್ಚಿ ಅಲ್ಲಾಡುತ್ತಿದೆ. ಅವರು ಆ ಸ್ಥಾನದಿಂದ ಕೆಳಕ್ಕೆ ಇಳಿಯುತ್ತಾರೆ ಎಂದಿದ್ದಾರೆ. ಹಾಗಿದ್ದರೆ, ತೇಜಸ್ವಿ ಯಾದವ್ ಆಗಲಿದ್ದಾರಾ ಎನ್ನುವ ಪ್ರಶ್ನೆಗೆ ಶತಾಯುಗತಾಯು ಪ್ರಯತ್ನ ಪಟ್ಟರೂ ಅವರು ಆಗಲು ಸಾಧ್ಯವಿಲ್ಲ. ಅವರಿಗೆ ಇನ್ನೂ 14 ವರ್ಷ ವನವಾಸವಿದೆ ಎಂದಿದ್ದಾರೆ ಜ್ಯೋತಿಷಿಗಳು.
ಮುಂದಿನ ಸಿಎಂ ಇವರೇ?
ಹಾಗಿದ್ದರೆ ಉಳಿದದ್ದು ಬಿಜೆಪಿ. ಬಿಜೆಪಿಯ ಸಮ್ರಾಟ್ ಚೌಧರಿ (Samrat Choudhary) ಅವರು ಬಿಹಾರದ ಮುಖ್ಯಮಂತ್ರಿಯ ಗದ್ದುಗೆ ಏರಲಿದ್ದಾರೆ ಎನ್ನುತ್ತಿದ್ದಾರೆ ಜ್ಯೋತಿಷಿಗಳು. ಇನ್ನು ಸಮ್ರಾಟ್ ಚೌಧರಿ ಕುರಿತು ಚುಟುಕಾಗಿ ಹೇಳುವುದಾದರೆ, ಅವರು ಮಾರ್ಚ್ 2023 ರಿಂದ ಜುಲೈ 25, 2024 ರವರೆಗೆ ಬಿಜೆಪಿ ಬಿಹಾರ ರಾಜ್ಯ ಘಟಕದ ಪಕ್ಷದ ಅಧ್ಯಕ್ಷರಾಗಿದ್ದಾರೆ . ಅವರು ರಾಷ್ಟ್ರೀಯ ಜನತಾ ದಳ ಸರ್ಕಾರದಲ್ಲಿ ವಿಧಾನಸಭಾ ಸದಸ್ಯರಾಗಿ ಮತ್ತು ಬಿಹಾರ ಸರ್ಕಾರದಲ್ಲಿ ಸಚಿವರಾಗಿದ್ದರು. ಬಿಹಾರ ರಾಜ್ಯಕ್ಕೆ ಬಿಜೆಪಿಯ ಮಾಜಿ ಉಪಾಧ್ಯಕ್ಷರೂ ಆಗಿದ್ದ ಇವರು, 2019 ರಲ್ಲಿ ಅವರ ಮೊದಲ ಅವಧಿ ಮುಗಿದ ನಂತರ 2020 ರಲ್ಲಿ ಎರಡನೇ ಅವಧಿಗೆ ಎಂಎಲ್‌ಸಿಯಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಅವರು ಬಿಹಾರ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು, 2024 ರಲ್ಲಿ, ಅವರನ್ನು ಸರಕು ಮತ್ತು ಸೇವಾ ತೆರಿಗೆ ದರ ತರ್ಕಬದ್ಧಗೊಳಿಸುವಿಕೆ ಸಮಿತಿಯ ಸಚಿವರ ಗುಂಪಿನ ಸಂಚಾಲಕರನ್ನಾಗಿ ಮಾಡಲಾಯಿತು. ಆ ಬಳಿಕ ಉಪ ಮುಖ್ಯಮಂತ್ರಿ ಹುದ್ದೆ ಏರಿದ್ದಾರೆ.

