ಗ್ವಾಲಿಯರ್‌ನ ಸಿಂಧಿಯಾ ಮತ್ತು ಇಂದೋರ್ ರಾಜಮನೆತನದ ವಿವಾಹವು ವಿಚ್ಛೇದನದಲ್ಲಿ ಕೊನೆಗೊಂಡಿದ್ದು, ನೆಹರೂ ಕಾಲದ ರೋಲ್ಸ್ ರಾಯ್ಸ್ ಕಾರು ಈ ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದು, ಪರಿಹಾರದ ರೂಪದಲ್ಲಿ 2.25 ಕೋಟಿ ರೂಪಾಯಿಗಳನ್ನು ಪಾವತಿಸಲು ಆದೇಶಿಸಲಾಗಿದೆ.
ರಾಜಮನೆತನದ ಮದುವೆಯೊಂದು ವಿಚ್ಛೇದನದೊಂದಿಗೆ ಅಂತ್ಯಕೊಂಡಿದ್ದು, ಈ ವಿಚ್ಛೇದನಕ್ಕೆ ನೆಹರೂ ಕಾಲದಲ್ಲಿ ಆರ್ಡರ್ ಮಾಡಲಾಗಿದ್ದ ರೋಲ್ಸ್ ರಾಯ್ಸ್ ಕಾರೊಂದು ಕಾರಣವಾಗಿದೆ. ಹೌದು ಅಚ್ಚರಿ ಆದರೂ ಸತ್ಯ. ಗ್ವಾಲಿಯರ್‌ನ ಸಿಂಧಿಯಾ ರಾಜಮನೆತನದ ಸರ್ದಾರ್ ಮೊಮ್ಮಗಳಾದ ಕಾತ್ಯಾಯಿನಿ ಅಂಗ್ರೆ ಹಾಗೂ ಇಂದೋರ್ ರಾಜಮನೆತನಕ್ಕೆ ಸೇರಿದ ಅರ್ಜುನ್ ಸಿಂಗ್ ಕಾಕ್ ಮಧ್ಯೆ ಮದುವೆ ನಡೆದಿತ್ತು. ಆದರೆ ಈ ಮದುವೆಯನ್ನು ಈಗ ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಇವರಿಬ್ಬರ ನಡುವಿ ಒಪ್ಪಂದದಂತೆ ಕಾತ್ಯಾಯಿನಿಗೆ ಅರ್ಜುನ್ ಸಿಂಗ್ ಕಾಕ್ 2.25 ಕೋಟಿ ಪರಿಹಾರ ಹಣ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
2018ರಲ್ಲಿಉತ್ತರಾಖಂಡ್‌ನ ರಿಷಿಕೇಶದಲ್ಲಿ ನಡೆದಿದ್ದ ಮದುವೆ:
ಸಿಂಧಿಯಾ ರಾಜಮನೆತನದ ತುಲಜಿರಾವ್ ಅಂಗ್ರೆ ಅವರ ಪುತ್ರಿ ಕಾತ್ಯಾಯನಿ ಮತ್ತು ಇಂದೋರ್ ರಾಜಮನೆತನದ ನಿವೃತ್ತ ಕರ್ನಲ್ ಅನಿಲ್ ಕಾಕ್ ಮತ್ತು ಮಂಗೇಶ್ ಕಾಕ್ ಅವರ ಪುತ್ರ ಅರ್ಜುನ್ ಕಾಕ್ ನಡುವಿನ ವಿವಾಹ ಏಪ್ರಿಲ್ 2018 ರಲ್ಲಿ ಉತ್ತರಾಖಂಡದ ಋಷಿಕೇಶದಲ್ಲಿ ನಡೆದಿತ್ತು. ಆಂಗ್ರೆ ಮತ್ತು ಕಾಕ್ ಕುಟುಂಬಗಳ ಶ್ರೀಮಂತಿಕೆ ಸ್ಥಾನಮಾನವನ್ನು ಗಮನಿಸಿ ಈ ವಿವಾಹವನ್ನು ಎರಡು ಪ್ರಭಾವಿ ರಾಜಮನೆತನದವರ ನಡುವಿನ ಒಕ್ಕೂಟವೆಂದು ಪರಿಗಣಿಸಲಾಗಿತ್ತು. ಆದರೆ, ಒಂದು ವರ್ಷದೊಳಗೆ, ಇವರಿಬ್ಬರ ಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಂಡವು.
ಪತ್ನಿ ಮನೆಯವರ ವಿರುದ್ಧ ನಕಲಿ ವಿವಾಹ ಪ್ರಮಾಣಪತ್ರ ಸಿದ್ಧಪಡಿಸಿದ ಆರೋಪ:
ನವೆಂಬರ್ 2019 ರಲ್ಲಿ, ಅರ್ಜುನ್ ಕಾಕ್ ಅವರು ಗ್ವಾಲಿಯರ್‌ನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ನಕಲಿ ವಿವಾಹ ಪ್ರಮಾಣಪತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದರು. ಗ್ವಾಲಿಯರ್‌ನ ಮುನ್ಸಿಪಲ್ ಕಾರ್ಪೊರೇಷನ್ ಕಾನೂನು ಬಾಹಿರವಾಗಿ ವಿವಾಹ ಪ್ರಮಾಣಪತ್ರವನ್ನು ನೀಡಿದ್ದು, ರಿಷಿಕೇಷದಲ್ಲಿ ವಿವಾಹದ ಆದ ದಿನವೇ ಗ್ವಾಲಿಯರ್‌ನಲ್ಲಿ ಮದುವೆ ನಡೆದಿದೆ ಎಂದು ಸುಳ್ಳು ಹೇಳಿದೆ ಎಂದು ಎಫ್‌ಐಆರ್‌ನಲ್ಲಿ ಅವರು ಹೇಳಿದ್ದರು. ಅರ್ಜುನ್ ಅವರ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು ಹಾಗೂ ಮಾರ್ಚ್ 2023ರಲ್ಲಿ ಹೈಕೋರ್ಟ್ ಇದೊಂದು ನಕಲಿ ಪ್ರಮಾಣಪತ್ರ ಎಂದು ತೀರ್ಪು ನೀಡಿದ್ದಲ್ಲದೇ ಅದನ್ನು ಅಸಮರ್ಥ ಅಧಿಕಾರಿಯೊಬ್ಬರು ನೀಡಿದ್ದಾರೆ ಅದನ್ನು ರದ್ದುಗೊಳಿಸಲಾಗಿದೆ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪು ಈ ವಿಷಯದಲ್ಲಿ ಮೋಸದ ದಾಖಲೆಗಳನ್ನು ಬಳಸಲಾಗಿದೆ ಎಂಬ ಅರ್ಜುನ್ ಅವರ ಹೇಳಿಕೆಯನ್ನು ದೃಢಪಡಿಸಿತು.
ಈ ಆರೋಪಕ್ಕೆ ಪ್ರತಿಯಾಗಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದ ಕಾತ್ಯಾಯಿನಿ:
ಇದಾದ ನಂತರ ಮಾರ್ಚ್ 2021 ರಲ್ಲಿ, ಕಾತ್ಯಾಯನಿ ಆಂಗ್ರೆ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಗ್ವಾಲಿಯರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅರ್ಜುನ್ ಮತ್ತು ಅವರ ಕುಟುಂಬದವರು ಮುಂಬೈನಲ್ಲಿ ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಮತ್ತು ಫ್ಲಾಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಆರೋಪಿಸಿದರು. ಆದರೆ ಅರ್ಜುನ್ ಅವರು ಈ ಹಿಂದೆ ದಾಖಲಿಸಿದ ವಂಚನೆ ಪ್ರಕರಣಕ್ಕೆ ಪ್ರತಿಯಾಗಿ ಪತ್ನಿ ಕಾತ್ಯಾಯಿನಿ ಈ ದೂರು ದಾಖಲಿಸಿದ್ದಾರೆ ಎಂಬುದನ್ನು ನಂತರ ಹೈಕೋರ್ಟ್ ಗಮನಿಸಿತ್ತು.
ಮದುವೆಯಾದ ಕೆಲವು ತಿಂಗಳುಗಳಲ್ಲೇ ಕಾತ್ಯಾಯನಿ ವಿಚ್ಛೇದನವನ್ನು ಕೋರಿದ್ದರು. ಆದರೆ ಎರಡು ವರ್ಷಗಳ ನಂತರ ವರದಕ್ಷಿಣೆ ದೂರು ದಾಖಲಾಗಿದ್ದು, ಅದರ ಉದ್ದೇಶದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂಬುದನ್ನು ಕೋರ್ಟ್ ಗಮನಿಸಿತು. ಹೀಗೆ ಕ್ಯಾತ್ಯಾಯಿನಿ ನೀಡಿದ ದೂರಿನಲ್ಲಿ ಉಲ್ಲೇಖವಾದ ರೋಲ್ಸ್ ರಾಯ್ಸ್ ಕಾರು 1951ರಲ್ಲಿ ಭಾರತದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರೂ ಅವರು ಬರೋಡಾದ ಮಹಾರಾಣಿಗಾಗಿ ಆರ್ಡರ್ ಮಾಡಿದ್ದ ಕಾರಾಗಿತ್ತು ಎಂಬ ಮಾಹಿತಿ ಇದೆ.
ಮಾವ ಪತಿ ತಮ್ಮ ಕುಟುಂಬದ ರೋಲ್ಸ್ ರಾಯ್ಸ್ ಕಾರಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ:
ಅವರ ಪ್ರಕಾರ, ರೋಲ್ಸ್ ರಾಯ್ಸ್ ಕಾರು ಹೆಚ್.ಜೆ. ಮುಲ್ಲಿನರ್ & ಕಂಪನಿಯಿಂದ ಕೈಯಿಂದ ತಯಾರಿಸಲ್ಪಟ್ಟ ಅಪರೂಪದ ಮಾದರಿಯಾಗಿದ್ದು, ಇದನ್ನು ಮಹಾರಾಣಿ ಚಿಮ್ನಾ ಬಾಯಿ ಸಾಹಿಬ್ ಗಾಯಕ್ವಾಡ್ ಅವರ ಪರವಾಗಿ ಜವಾಹರಲಾಲ್ ನೆಹರು ಅವರು ಆರ್ಡರ್ ಮಾಡಿ ತಮ್ಮ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದರು. ಆದರೆ ತನ್ನ ಮಾವ ಮತ್ತು ಪತಿ ಕಾರಿನ ಮೇಲಿನ ತಮ್ಮ ಆಕರ್ಷಣೆಯನ್ನು ಬಹಿರಂಗವಾಗಿ ಪ್ರದರ್ಶಿಸಿದರು ಮತ್ತು ಅದನ್ನು ಅವರಿಗೆ ಉಡುಗೊರೆಯಾಗಿ ನೀಡಬೇಕೆಂದು ನಿರೀಕ್ಷಿಸಿದ್ದರು ಮತ್ತು ಈ ಬೇಡಿಕೆಯನ್ನು ಪೂರೈಸದಿದ್ದಾಗ, ತನಗೆ ವೈವಾಹಿಕ ಮನೆಗೆ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ನನ್ನ ವ್ಯಕ್ತಿತ್ವವನ್ನುಅವಮಾನಿಸಲಾಯ್ತು ಎಂದು ಅವರು ಆರೋಪಿಸಿದ್ದರು.
ಆರೋಪ ನಿರಾಕರಿಸಿದ ಪತಿ ಅರ್ಜುನ್:
ಆದರೆ ಪತಿ ಅರ್ಜುನ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ಏಪ್ರಿಲ್ 20, 2018 ರಂದು ರಿಷಿಕೇಶದಲ್ಲಿ ನಡೆದ ವಿವಾಹವು ಆಕೆಯ ಕುಟುಂಬದ ಗುರುವಿನ ಸಲಹೆಯ ಮೇರೆಗೆ ಜ್ಯೋತಿಷ್ಯ ಕಾರಣಗಳಿಗಾಗಿ ನಡೆಸಿದ ಸಾಂಕೇತಿಕ ಆಚರಣೆಯಾಗಿತ್ತು. ದಂಪತಿಗಳಾಗಿ ನಾವು ಎಂದಿಗೂ ಒಟ್ಟಿಗೆ ಇರಲಿಲ್ಲ, ಮದುವೆ ಎಂದಿಗೂ ಪೂರ್ಣಗೊಳ್ಳಲಿಲ್ಲ ಮತ್ತು ಗ್ವಾಲಿಯರ್‌ನಲ್ಲಿ ಸಿಕ್ಕ ವಿವಾಹದ ನೋಂದಣಿ ವಂಚನೆಯಿಂದ ಕೂಡಿದೆ. ವಿವಾಹ ಪ್ರಮಾಣಪತ್ರವನ್ನು ರಚಿಸುವಲ್ಲಿ ಪತ್ನಿ ಮತ್ತು ಅವರ ಸಂಬಂಧಿಕರು ನಕಲಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಅವರು ರೋಲ್ಸ್ ರಾಯ್ಸ್ ಅಥವಾ ಮುಂಬೈ ಫ್ಲಾಟ್‌ಗಾಗಿ ನಾವು ಎಂದಿಗೂ ಬೇಡಿಕೆಯಿಟ್ಟಿಲ್ಲ ಎಂದು ಅರ್ಜುನ್ ಹೇಳಿದ್ದರು.
ಈ ಮೊದಲು ನಡೆದ ಸಂಧಾನದ ಸಮಯದಲ್ಲಿಯೂ ಅರ್ಜುನ್ ತಿಂಗಳಿಗೆ 1.5 ಲಕ್ಷ ರೂಪಾಯಿ ಜೀವನಾಂಶ ನೀಡಲು ಒಪ್ಪಿಕೊಂಡಿದ್ದರು. ಆದರೆ, ಕಾತ್ಯಾಯನಿ ಆಸ್ತಿಯಲ್ಲಿ ಪಾಲು ಜೊತೆಗೆ 36 ಕೋಟಿ ರೂಪಾಯಿ ಮೌಲ್ಯದ ಶಾಶ್ವತ ಇತ್ಯರ್ಥಕ್ಕೆ ಒತ್ತಾಯಿಸಿದರು. ಆದರೆ ನಿರೀಕ್ಷೆಗಳಲ್ಲಿನ ವ್ಯಾಪಕ ಅಂತರವು ಮಧ್ಯಸ್ಥಿಕೆ ಕುಸಿಯಲು ಕಾರಣವಾಗಿತ್ತು.
ಕೊನೆಗೂ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣ..
ಆದರೆ ಈಗ ಈ ಪ್ರಕರಣವೂ ಈಗ ಕೊನೆಗೂ ಸುಪ್ರೀಂಕೋರ್ಟ್‌ನಲ್ಲಿ ಇಬ್ಬರ ಒಪ್ಪಿಗೆಯ ಮೇರೆಗೆ ಇತ್ಯರ್ಥ ಕಂಡಿದ್ದು, ಅರ್ಜುನ್ ಅವರು ಕಾತ್ಯಾಯಿನಿ ಅವರಿಗೆ 2.25 ಕೋಟಿ ನೀಡಿ ಈ ಪ್ರಕರಣವನ್ನು ಶಾಶ್ವತವಾಗಿ ಮುಗಿಸಲಾಗಿದೆ. ವರ್ಷಗಳ ಕಾಲ ನಡೆದ ಸುದೀರ್ಘ ಮೊಕದ್ದಮೆಯ ನಂತರ ಎರಡೂ ಪಕ್ಷಗಳು ಅಂತಿಮವಾಗಿ ರಾಜಿಗೆ ಒಪ್ಪಿಕೊಂಡವು. ಆಗಸ್ಟ್ 29, 2025 ರಂದು, ಸುಪ್ರೀಂಕೋರ್ಟ್ ಇತ್ಯರ್ಥದ ನಿಯಮಗಳನ್ನು ಅಂತಿಮಗೊಳಿಸಿತು, ಅರ್ಜುನ್ ಕಾತ್ಯಾಯನಿಗೆ 2.25 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಬೇಕೆಂದು ಆದೇಶಿಸಿತು, ಇದನ್ನು ನವೆಂಬರ್ 2025 ರೊಳಗೆ ಪಾವತಿಸಬೇಕು ಎಂದು ಆದೇಶಿಸಿತ್ತು. ಈ ನಿರ್ಧಾರವು ಎರಡೂ ಕುಟುಂಬಗಳಿಗೆ ಸಮಾಧಾನ ತಂದಿತು. ಅಂತಿಮವಾಗಿ ನಕಲಿ ದಾಖಲೆ, ವರದಕ್ಷಿಣೆ ಕಿರುಕುಳ ಮತ್ತು ವಿಚ್ಛೇದನ ಅರ್ಜಿಗಳು ಸೇರಿದಂತೆ ಹಲವಾರು ಕಾನೂನು ಪ್ರಕರಣಗಳಾಗಿ ಉಲ್ಬಣಗೊಂಡಿದ್ದ ಈ ವಿವಾದವನ್ನು ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿತು.
ಇದನ್ನೂ ಓದಿ: ಕದ್ದು ತಿನ್ನುವಾಗಲೇ ಟೀಚರ್ ಕೈಗೆ ಸಿಕ್ಕಿಬಿದ್ದ ಪುಟಾಣಿ: ವೀಡಿಯೋ ಭಾರಿ ವೈರಲ್
