ಶಿಕ್ಷಕರು ಪಾಠ ಮಾಡುವಾಗ ಬಾಲಕನೊಬ್ಬ ಕದ್ದು ತಿನ್ನುತ್ತಿದ್ದ ದೃಶ್ಯ ಟೀಚರ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲ್ಯದ ನೆನಪುಗಳನ್ನು ಮರುಕಳಿಸಿದೆ.
ಶಾಲೆಯಲ್ಲಿ ಟೀಚರ್ ಪಾಠ ಮಾಡ್ತಿರುವಾಗ ಅವರಿಗೆ ಗೊತ್ತಿಲ್ಲದಂತೆ ಟಿಪನ್ ಬಾಕ್ಸ್‌ನಿಂದ ಕದ್ದು ತಿನ್ನುವುದು ಬಾಲ್ಯದ ಒಂದು ಅದ್ಬುತ ನೆನಪುಗಳಲ್ಲಿ ಒಂದು. 5ನೇ ಕ್ಲಾಸ್ ದಾಟಿದ ಮಕ್ಕಳು ಒಂತರ ಖುಷಿಗಾಗಿ ಎಲ್ಲರೂ ಸೇರಿ ಅದರಲ್ಲೂ ವಿಶೇಷವಾಗಿ ಕೊನೆಯ ಬೆಂಚ್‌ನಲ್ಲಿ ಕುಳಿತವರು ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗಲೇ ಮೆಲ್ಲನೆ ಯಾರಿಗೂ ಕಾಣದಂತೆ ಟಿಫನ್ ಬಾಕ್ಸ್ ತೆರೆದು ಅದರೊಳಗಿರುವುದನ್ನು ಮೆಲ್ಲನೆ ಬಾಯಿಗಿಟ್ಟುಕೊಂಡು ಬಿಡುತ್ತಾರೆ. ಒಂದು ಕಡೆ ಶಿಕ್ಷಕರು ಪಾಠ ಮಾಡ್ತಾ ಇದ್ರೆ ಇನ್ನೊಂದು ಕಡೆ ಮಕ್ಕಳು ತಿನ್ನುವುದರಲ್ಲಿ ತೊಡಗಿರುತ್ತಾರೆ.
ಕದ್ದು ತಿನ್ನುತ್ತಿರುವಾಗಲೇ ಟೀಚರ್ ಕೈಗೆ ಸಿಕ್ಕಿಬಿದ್ದ ಪುಟಾಣಿ:
ಹಾಗೆಯೇ ಇಲ್ಲೊಂದು ಕಡೆ ಪುಟ್ಟ ಬಾಲಕನೋರ್ವ ಶಿಕ್ಷಕರು ತರಗತಿಯಲ್ಲಿ ಇರುವಾಗಲೇ ಮೆಲ್ಲನೆ ತನ್ನ ಬ್ಯಾಗ್ ಒಳಗೆ ಮುಖವಿಟ್ಟು ಬಿಸ್ಕೆಟ್‌ನ್ನು ತಿನ್ನುತ್ತಿದ್ದು , ಈ ವೀಡಿಯೋ ಭಾರಿ ವೈರಲ್ ಆಗಿದೆ. ಅಂದಹಾಗೆ ಈ ವೀಡಿಯೋ ಟೀಚರ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಲಕನಿಗೆ ತನ್ನ ಹಿಂದೆ ಶಿಕ್ಷಕಿ ನಿಂತುಕೊಂಡು ತಾನು ತಿನ್ನುತ್ತಿರುವ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂಬ ಯೋಚನೆಯ ಇರಲಿಲ್ಲ. ಹಸಿದಿದ್ದ ಈ ಪುಟ್ಟ ಬಾಲಕ ನಿಧಾನವಾಗಿ ತನ್ನ ಟೇಬಲ್ ಮೇಲಿದ್ದ ಬ್ಯಾಗ್ ಒಳಗೆ ಮುಖ ಹುದುಗಿಸಿ ಬಿಸ್ಕೆಟ್ ತಿನ್ನುವುದನ್ನು ವೀಡಿಯೋದಲ್ಲಿ ಕಾಣಬಹುದು.
ಕ್ಲಾಸ್‌ರೂಮಲ್ಲಿ ಬಾಲಕ ಕದ್ದು ತಿನ್ನುತ್ತಿರುವ ವೀಡಿಯೋ ಭಾರೀ ವೈರಲ್
ವೀಡಿಯೋದಲ್ಲಿ ಕಾಣುವಂತೆ ಬಾಲಕ ತಿನ್ನುವುದರಲ್ಲಿ ಬ್ಯುಸಿಯಾಗಿದ್ದು, ಆತನಿಗೆ ಶಿಕ್ಷಕರು ಬಂದು ತನ್ನ ಬೆನ್ನಹಿಂದೆ ನಿಂತಿರುವುದು ಗೊತ್ತಿಲ್ಲ. ಆತ ನಿಧಾನವಾಗಿ ಬ್ಯಾಗ್‌ನಿಂದ ಬಿಸ್ಕೆಟ್ ತೆಗೆದು ತಿನ್ನುತ್ತಿದ್ದವನು ಮೆಲ್ಲನೆ ತಿರುಗಿ ನೋಡಿದಾಗ ಅಲ್ಲಿ ಶಿಕ್ಷಕರು ಇರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಈ ವೀಡಿಯೋಗೆ ಲೈಕ್ ಒತ್ತಿದ್ದು, ಈ ಪುಟ್ಟ ಬಾಲಕನ ವೀಡಿಯೋ ನಮಗೆ ಬಾಲ್ಯದ ದಿನಗಳನ್ನು ನೆನಪು ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು ಈ ವೀಡಿಯೋಗೆ ಈಗ ಭಾರಿ ಸ್ಪಂದನೆ ವ್ಯಕ್ತವಾಗ್ತಿದೆ.
ಅನೇಕರಿಗೆ ತಮ್ಮ ಬಾಲ್ಯದ ನೆನಪು ಮಾಡಿದ ಪುಟಾಣಿಯ ವೀಡಿಯೋ
ಇನ್ಸ್ಟಾಗ್ರಾಮ್‌ನಲ್ಲಿ comedyculture.in ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಹೃದಯಸ್ಪರ್ಶಿ ತರಗತಿಯ ದೃಶ್ಯ! ಕೊನೆಯ ಬೆಂಚಿನಲ್ಲಿ ಕುಳಿತು ರಹಸ್ಯವಾಗಿ ಊಟ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಶಿಕ್ಷಕರು ಹಿಡಿದರು, ಆ ವಿದ್ಯಾರ್ಥಿ ಎಲ್ಲರಿಗೂ ತಮ್ಮ ಶಾಲಾ ದಿನಗಳ ಮುಗ್ಧ ಕಿಡಿಗೇಡಿತನವನ್ನು ನೆನಪಿಸಿದ್ದಾನೆ ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ.
ವೀಡಿಯೋ ನೋಡಿದ ಒಬ್ಬರು ಬಾಲ್ಯದ ನಿಜವಾದ ಖುಷಿಯ ಕ್ಷಣಗಳಿವು ಎಂದು ಕಾಮೆಂಟ್ ಮಾಡಿದ್ದಾರೆ. ವಾವ್ ಆ ದಿನಗಳನ್ನು ಮರೆಯಲಾಗದು. ಈ ವೀಡಿಯೋದಲ್ಲಿ ನಾನೇ ಇರುವಂತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ನನ್ನ ಇಡೀ ಬಾಲ್ಯದಲ್ಲಿ ಇದೇ ರೀತಿ ಮಾಡಿದ್ದ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು 11ನೇ ತರಗತಿಯಲ್ಲಿದ್ದಾಗಲೂ ಇದೇ ರೀತಿ ಮಾಡಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಹೆಂಡ್ತಿನೂ ಹಿಂಗೆ ಮಾಡ್ತಿದ್ಳು ಎಂದು ಆಕೆಯ ಸೋದರಿ ಹೇಳ್ತಿದ್ದಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದೊಂದು ಬೇರೆ ರೀತಿಯ ಸಾಹ ಎಂದು ಅದಕ್ಕೆ ಮತ್ತೊಬ್ಬರು ಪ್ರತಿಕಿಯಿಸಿದ್ದಾರೆ. ಒಟ್ಟಿನಲ್ಲಿ ಪುಟ್ಟ ಬಾಲಕನ ವೀಡಿಯೋ ಅನೇಕರಿಗೆ ಅವರ ಬಾಲ್ಯ ನೆನಪಿಸಿದೆ.
ಇದನ್ನೂ ಓದಿ:
ದಂಪತಿ ವಿಚ್ಛೇದನಕ್ಕೆ ಕಾರಣವಾಯಿತು ನೆಹರೂ ಆರ್ಡರ್ ಮಾಡಿದ್ದ ಕಾರು!
