Odisha Teacher Suspended for Beating 31 Students ಒಡಿಶಾದಲ್ಲಿ ಶಿಕ್ಷಕಿಯೊಬ್ಬರು ಕಾಲು ಮುಟ್ಟಿ ನಮಸ್ಕರಿಸದ 31 ವಿದ್ಯಾರ್ಥಿಗಳಿಗೆ ಬೆತ್ತದಿಂದ ಹೊಡೆದಿದ್ದಾರೆ. ಈ ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ನವದೆಹಲಿ (ಸೆ.15): ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕಿಯೊಬ್ಬರು ಬೆಳಗಿನ ಪ್ರಾರ್ಥನೆಯ ನಂತರ ತನ್ನ ಕಾಲುಗಳನ್ನು ಮುಟ್ಟಿ ನಮಸ್ಕಾರ ಪಡೆಯದ ಕಾರಣಕ್ಕಾಗಿ 31 ವಿದ್ಯಾರ್ಥಿಗಳಿಗೆ ಬೆತ್ತದಿಂದ ಬಾಸುಂಡೆ ಬರುವಂತೆ ಹೊಡೆದಿದ್ದರು. ಈ ಆರೋಪದ ವೇಳೆ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಬೆಟ್ನೋಟಿ ಬ್ಲಾಕ್‌ನ ಪ್ರತಿಮದೀಪುರ ಕ್ಲಸ್ಟರ್‌ನ ಖಂಡದೇವುಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಸಹಾಯಕ ಶಿಕ್ಷಕಿ ಸುಕಾಂತಿ ಕರ್ ಶಾಲೆಗೆ ತಡವಾಗಿ ಬಂದಿದ್ದರು. VI, VII ಮತ್ತು VIII ತರಗತಿಗಳ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳುವ ಸಮಯದಲ್ಲಿ, ಪ್ರಾರ್ಥನೆ ಅವಧಿಯ ನಂತರ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದ ಗೌರವವನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಲವು ವಿದ್ಯಾರ್ಥಿಗಳು ಕಾಲುಗಳನ್ನು ಮುಟ್ಟಿ ನಮಸ್ಕಾರ ಮಾಡಿಲ್ಲ ಎಂದು ಒಪ್ಪಿಕೊಂಡಾಗ, ಅವರು ಬೆತ್ತದಿಂದ ನಿರ್ದಯವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಗಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡರು ಮತ್ತು ಒಂದು ಮಗುವಿನ ಕೈಯಲ್ಲಿ ಮೂಳೆ ಮುರಿತ ಸಂಭವಿಸಿದೆ.
ಘಟನೆಯ ಸುದ್ದಿ ಪೋಷಕರಿಗೆ ತಲುಪಿತು. ಇದು ಪೋಷಕರು ಮತ್ತು ಶಾಲಾ ನಿರ್ವಹಣಾ ಸಮಿತಿ (SMC) ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಮುಖ್ಯೋಪಾಧ್ಯಾಯರು ತಕ್ಷಣ ಈ ವಿಷಯವನ್ನು ಬೆಟ್ನೋಟಿ ಬಿಇಒ ಬಿಪ್ಲಾಬ್ ಕರ್ ಮತ್ತು ಕ್ಲಸ್ಟರ್ ಸಂಯೋಜಕ ದೇಬಾಶಿಶ್ ಸಾಹು ಅವರಿಗೆ ವರದಿ ಮಾಡಿದ ಬೆನ್ನಲ್ಲಿಯೇ ಅವರು ತನಿಖೆಗೆ ಆಗಮಿಸಿದರು.
ಶಿಸ್ತು ಸಮಿತಿ ತನಿಖೆಯ ಬಳಿಕ ಶಿಕ್ಷಕಿ ಅಮಾನತು!
ವಿಚಾರಣೆಯ ಸಮಯದಲ್ಲಿ, ಪೋಷಕರು, ಎಸ್‌ಎಂಸಿ ಸದಸ್ಯರು, ಮುಖ್ಯೋಪಾಧ್ಯಾಯರು ಮತ್ತು ಗಾಯಗೊಂಡ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿಕ್ಷಕಿಯ ಕಾಲು ಮುಟ್ಟಿ ನಮಸ್ಕರಿಸದಿದ್ದಕ್ಕಾಗಿ ಮೂರು ತರಗತಿಗಳ ಒಟ್ಟು 31 ವಿದ್ಯಾರ್ಥಿಗಳನ್ನು ಥಳಿಸಲಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ಶಿಸ್ತು ಕ್ರಮ ಕೈಗೊಂಡ ಬೆನ್ನಲ್ಲಿಯೇ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. "ಘಟನೆಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಮುಂದಿನ ಪ್ರಕ್ರಿಯೆಗಳವರೆಗೆ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ" ಎಂದು ಬಿಇಒ ಕರ್ ದೃಢಪಡಿಸಿದರು.
