ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆಯಿಂದ ತೆರವಾದ ಉಪ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ನವದೆಹಲಿ: ಜಗದೀಪ್‌ ಧನಕರ್‌ ದಿಢೀರ್‌ ರಾಜೀನಾಮೆಯಿಂದ ತೆರವಾದ ಉಪ ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಅವರನ್ನು ಆಯ್ಕೆ ಮಾಡಲಾಗಿದೆ. ಭಾನುವಾರ ಇಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ, ಹಾಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ, ಹಿರಿಯ ಆರ್‌ಎಸ್‌ಎಸ್‌ ನಾಯಕನನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿತು.

ಬಿಜೆಪಿ ಸಂಸದೀಯ ಮಂಡಳಿಯ ಸಭೆಯ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮೈತ್ರಿಕೂಟದ ಅಭ್ಯರ್ಥಿಯ ಹೆಸರು ಪ್ರಕಟಿಸಿದರು. 2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದರ ಬೆನ್ನಲ್ಲೇ ಒಬಿಸಿ (ಗೌಂಡರ್‌) ಸಮುದಾಯಕ್ಕೆ ಸೇರಿದ ದಕ್ಷಿಣದ ರಾಜ್ಯದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ.

ತಮಿಳುನಾಡಿನ ಎಂದೇ ಬಣ್ಣಿತ ರಾಧಾಕೃಷ್ಣನ್‌ ರಾಜಕೀಯ ವಲಯದಲ್ಲಿ ದಮನಿತರ ಸಬಲೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಾನವೀಯತೆ ಜೀವಿ ಎಂದೇ ಹೆಗ್ಗಳಿಕೆ ಹೊಂದಿದ್ದಾರೆ.

ಸೆ.9ರಂದು ಉಪರಾಷ್ಟ್ರಪತಿ ಚುನಾವಣೆ ನಿಗದಿಯಾಗಿದ್ದು, ಒಂದು ವೇಳೆ ವಿಪಕ್ಷಗಳು ತಮ್ಮ ಅಭ್ಯರ್ಥಿ ಹಾಕಿದರೆ ಅಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ.

ಸಿ.ಪಿ. ರಾಧಾಕೃಷ್ಣನ್ತಮಿಳ್ನಾಡಿನ ಮೋದಿ

ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ 1957ರ ಅ.20ರಂದು ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿದ್ದ ರಾಧಾಕೃಷ್ಣನ್‌, ‘ತಮಿಳುನಾಡಿನ ಮೋದಿ’ ಎಂದು ಜನಪ್ರಿಯತೆ ಪಡೆದಿದ್ದಾರೆ.1996ರಲ್ಲಿ, ತಮಿಳುನಾಡಿನ ಬಿಜೆಪಿ ಕಾರ್ಯದರ್ಶಿಯಾಗಿ, 2004ರಿಂದ 2007ರವರೆಗೆ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ವೇಳೆ ಭಯೋತ್ಪಾದನೆ, ಅಸ್ಪೃಶ್ಯತೆ ನಿರ್ಮೂಲನೆಗಾಗಿ 93 ದಿನಗಳ ಬೃಹತ್ ರಥಯಾತ್ರೆ ನಡೆಸಿದರು. 2020ರಿಂದ 2022ರವರೆಗೆ ಕೇರಳ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿದ್ದರು. 2024ರ ಜು.31ರಂದು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. 2023ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ, 2024ರಲ್ಲಿ ತೆಲಂಗಾಣ ರಾಜ್ಯಪಾಲರಾಗಿ ಮತ್ತು ಅದೇ ವರ್ಷ ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. 1998 ಮತ್ತು 1999ರಲ್ಲಿ 2 ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ರಾಧಾಕೃಷ್ಣನ್‌, ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ವ್ಯಾಪಕ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರನ್ನು ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ.

ನರೇಂದ್ರ ಮೋದಿ, ಪ್ರಧಾನಿ

ಇಂದು ವಿಪಕ್ಷಗಳಿಂದ

ಅಭ್ಯರ್ಥಿ ಬಗ್ಗೆ ಚರ್ಚೆನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿ ಕಣಕ್ಕಿಳಿಸುವ ಇರಾದೆ ಹೊಂದಿರುವ ವಿಪಕ್ಷಗಳು, ಸೋಮವಾರ ಈ ಕುರಿತು ಚರ್ಚೆ ನಡೆಸಲಿವೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ನಿಗದಿಯಾಗಿದೆ.