ಹಿಮಾಚಲ ಪ್ರದೇಶದಲ್ಲಿ ಭೀಕರ ಪ್ರವಾಹದ ನಡುವೆಯೂ ಹನುಮಾನ್ ದೇಗುಲದ ಅರ್ಚಕರು ಪ್ರವಾಹಕ್ಕೆ ಅಂಜದೇ ದೇವಸ್ಥಾನದ ಆವರಣದಲ್ಲೇ ಕೈ ಕಟ್ಟಿ ನಿಂತು ಪ್ರವಾಹದ ನೀರು ಉಕ್ಕೇರುವುದನ್ನು ನೋಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಉತ್ತರ ಭಾರತದ ಹಲವು ಕಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹಿಮಾಚಲ ಪ್ರದೇಶ ಹಾಗೂ ಜಮ್ಮುಕಾಶ್ಮೀರ, ಪಂಜಾಬ್, ಉತ್ತರಾಖಂಡ್‌ನಲ್ಲಿ ಧಾರಾಕಾರ ಮಳೆಗೆ ಹಲವು ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಳೆಯಿಂದಾಗಿ ಹಲವು ಪ್ರದೇಶಗಳು ಕೊಚ್ಚಿ ಹೋಗಿರುವುದು, ರಸ್ತೆ ಕುಸಿದು ವಾಹನಗಳು ನೀರು ಪಾಲಾಗಿರುವ ಹಲವು ದೃಶ್ಯಗಳು ಕ್ಯಾಮರಾದಲ್ಲಿಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಈಗ ಹಿಮಾಚಲ ಪ್ರದೇಶದ ಕುಲುವಿನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಉಕ್ಕೇರಿದ ಬಿಯಾಸ್ ನದಿ ಮುಂದೆ ಕೈಕಟ್ಟಿ ನಿಂತ ಅರ್ಚಕ:
ಇಲ್ಲಿನ ಬಿಯಾಸ್ ನದಿ ಪ್ರವಾಹದ ನೀರಿನಿಂದ ಉಕ್ಕಿ ಹರಿಯುತ್ತಿದ್ದು, ಈ ನದಿಯ ತಟದಲ್ಲಿಯೇ ಇರುವ ಹನುಮಾನ್ ದೇಗುಲದ ಆವರಣಕ್ಕೆ ಮಾತ್ರ ಪ್ರವಾಹದ ನೀರು ಪ್ರವೇಶಿಸಿಲ್ಲ. ದೇಗುಲದ ಆವರಣದ ತಡೆಗೋಡೆಯೆತ್ತರಕ್ಕೆ ನೀರು ಉಕ್ಕೇರುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಆದರೂ ಆ ಹನುಮಾನ್ ದೇಗುಲದ ಅರ್ಚಕರು ಪ್ರವಾಹಕ್ಕೆ ಅಂಜದೇ ದೇವಸ್ಥಾನದ ಆವರಣದಲ್ಲೇ ಕೈ ಕಟ್ಟಿ ನಿಂತು ಪ್ರವಾಹದ ನೀರು ಉಕ್ಕೇರುವುದನ್ನು ನೋಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಅರ್ಚಕನ ಧೈರ್ಯಕ್ಕೆ ಅಚ್ಚರಿಪಟ್ಟ ಜನ:
ನಿಕಿಲ್ ಸೈನಿ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕುಲ್ಲುವಿನ ಹನುಮಾನ್ ಮಂದಿರದಲ್ಲಿ, ಪಕ್ಕದಲ್ಲಿಯೇ ಬಿಯಾಸ್ ನದಿ ಉಕ್ಕೇರುತ್ತಿದ್ದರೆ ದೇವಾಲಯದ ಆವರಣದೊಳಗೆ ಪೂಜಾರಿ ದೃಢವಾಗಿ ನಿಂತಿದ್ದಾರೆ. ಇಂತಹ ಕ್ಷಣಗಳು ಪ್ರಕೃತಿಯೇ ದೇವರ ನಿಜವಾದ ರೂಪ ಎಂಬುದನ್ನು ನಮಗೆ ನೆನಪಿಸುತ್ತವೆ ಎಂದು ಬರೆದು ಅವರು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದು, ಪೂಜಾರಿಯ ಧೈರ್ಯದ ಬಗ್ಗೆ ಅಚ್ಚರಿಪಟ್ಟಿದ್ದಾರೆ.
ಈ ಅರ್ಚಕರ ಧೈರ್ಯ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ಜೈ ಭಜರಂಗ್ ಬಲಿ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೆಯೇ ಅವಧೇಶ್ ಶರ್ಮಾ ಎಂಬುವವರು ಕಾಮೆಂಟ್ ಮಾಡಿ ಕಳೆದ ವರ್ಷಗಳಿಗಿಂತ ಹೆಚ್ಚಿನ ನೈಸರ್ಗಿಕ ವಿಕೋಪಗಳನ್ನು ಈ ಬಾರಿ ನಾವು ನೋಡಿದ್ದೇವೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವಾಗ ನಾವು ಬಹಳ ಜಾಗರೂಕರಾಗಿರಬೇಕು. ನಾವು ಅದನ್ನು ನಿಲ್ಲಿಸದಿದ್ದರೆ ಅಂತಹ ಎಲ್ಲಾ ಚಟುವಟಿಕೆಗಳು ಇನ್ನೂ ಅನೇಕ ವಿಪತ್ತುಗಳನ್ನು ಆಹ್ವಾನಿಸುತ್ತವೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಕೆಲವರು ಈ ಅರ್ಚಕನನ್ನು ಹನುಮಾನ್ ಜೀಯೇ ರಕ್ಷಣೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ದೇವಾಲಯವು ಎತ್ತರದ ಬಂಡೆಗಳ ಮೇಲೆ ಇರುವುದರಿಂದ ಪ್ರವಾಹದಿಂದ ರಕ್ಷಿಸಲ್ಪಟ್ಟಿದೆ ಎಂದು ತಜ್ಞರು ಹೇಳಿದ್ದಾರೆ ಆದರೆ ಸ್ಥಳೀಯರು ಹನುಮಂತನ ಆಶೀರ್ವಾದ ಮಾತ್ರ ಅಂತಹ ಬದುಕುಳಿಯುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ. ಸುತ್ತಮುತ್ತಲಿನ ಎಲ್ಲವೂ ಅಲುಗಾಡಿತು, ಆದರೆ ದೇವಾಲಯವು ಸ್ಥಿರವಾಗಿ ನಿಂತಿತು ಮತ್ತು ಒಳಗಿದ್ದ ಅರ್ಚಕ ಸುರಕ್ಷಿತವಾಗಿದ್ದರು. ಇದು ದೇವರ ಪವಾಡಕ್ಕಿಂತ ಕಡಿಮೆ ಏನಲ್ಲ ಎಂದು ಎಂದು ಕುಲ್ಲು ನಿವಾಸಿಯೊಬ್ಬರು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಬಿಯಾಸ್ ನದಿ ಅನೇಕ ಸ್ಥಳಗಳಲ್ಲಿ ಅನಾಹುತವನ್ನುಂಟುಮಾಡಿದೆ. ಅನೇಕ ರಸ್ತೆಗಳು ಹಾನಿಗೊಳಗಾಗಿವೆ, ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಕೆಲವು ಗ್ರಾಮಗಳಿಗೆ ಸಂಪರ್ಕವೇ ಕಡಿದು ಹೋಗಿದೆ ಕಳೆದುಕೊಂಡಿವೆ. ಅಂತಹ ಸಮಯದಲ್ಲಿ ಕುಲುವಿನ ಈ ಹನುಮಾನ್ ದೇವಾಲಯದ ಸಂಕೀರ್ಣದ ಸುರಕ್ಷತೆ ಮತ್ತು ಅರ್ಚಕರ ದೃಢತೆ ಭಕ್ತರಿಗೆ ಒಂದು ಪವಾಡದಂತೆ ಕಾಣ್ತಿದೆ. ಕುಲ್ಲು ಆಡಳಿತವು ಜನರು ನದಿ ದಂಡೆಗೆ ಹೋಗದಂತೆ ಮನವಿ ಮಾಡಿದೆ ಮತ್ತು ಯಾವುದೇ ಸಮಯದಲ್ಲಿ ನೀರಿನ ಮಟ್ಟ ಮತ್ತಷ್ಟು ಏರಬಹುದು ಎಂದು ಹೇಳಿದೆ. ಆದರೂ, ಹನುಮಾನ್ ದೇವಾಲಯದಲ್ಲಿ ಈ ಅರ್ಚಕರು ಪ್ರವಾಹವನ್ನು ಎದುರಿಸುವಂತೆ ಧೈರ್ಯವಾಗಿ ನಿಂತಿದ್ದು ನೋಡಿ ಜನ ಅಚ್ಚರಿ ಪಟ್ಟಿದ್ದಾರೆ. ಈ ದೃಶ್ಯವು ನಂಬಿಕೆ ಮತ್ತು ಧೈರ್ಯದ ಮುಂದೆ ಉಗ್ರ ಪ್ರಕೃತಿಯೂ ಸಹ ಸೋಲನ್ನು ಒಪ್ಪಿಕೊಳ್ಳುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ
ಇದನ್ನೂ ಓದಿ: ಹೈಕ್ಲಾಸ್ ಜನರ ಮುಖವಾಡ ತೆರೆದಿಟ್ಟ ಹೌಸ್ ಕೀಪರ್: ಐಐಟಿ ಬಾಂಬೆ ಪ್ರೊಫೆಸರ್ ಪೋಸ್ಟ್ ಭಾರಿ ವೈರಲ್
