6 ದಶಕಗಳಷ್ಟು ಸುದೀರ್ಘ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕೆಲಸ ಮಾಡಿದ ಮಿಗ್‌-21 ಯುದ್ಧವಿಮಾನ ಶುಕ್ರವಾರ ನಿವೃತ್ತಿ ಪಡೆಯಲಿದೆ. ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್-21ಕ್ಕೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ.

6 ದಶಕಗಳಷ್ಟು ಸುದೀರ್ಘ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕೆಲಸ ಮಾಡಿದ ಮಿಗ್‌-21 ಯುದ್ಧವಿಮಾನ ಶುಕ್ರವಾರ ನಿವೃತ್ತಿ ಪಡೆಯಲಿದೆ. ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್-21ಕ್ಕೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ. ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಿಮಾನದ ಕೊನೆಯ ಹಾರಾಟ ನಡೆಸಿ, ವಿದಾಯ ಹೇಳಲಿದ್ದಾರೆ. ಮಿಗ್‌-21 ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಏನಿದರ ವಿಶೇಷತೆ? ‘ಹಾರುವ ಶವಪೆಟ್ಟಿಗೆ’ ಎಂಬ ಅಪಖ್ಯಾತಿ ಬಂದಿದ್ದಾದರೂ ಏಕೆ? ಇಲ್ಲಿದೆ ಒಂದಿಷ್ಟು ಮಾಹಿತಿ

50ರ ದಶಕದಲ್ಲಿ ಹುಟ್ಟು

1950ರ ದಶಕದಲ್ಲಿ ಶೀತಲ ಸಮರದ ಸಂದರ್ಭದಲ್ಲಿ, ಸೋವಿಯತ್ ಒಕ್ಕೂಟವು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ವೇಗವಾದ, ಲಘು ಮತ್ತು ಸೂಪರ್‌ಸಾನಿಕ್ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿತು. ಸರಳ ವಿನ್ಯಾಸ ಮತ್ತು ಕಡಿಮೆ ವೆಚ್ಚದಲ್ಲಿ ಮಿಗ್‌-21 ಯುದ್ಧವಿಮಾನವನ್ನು ತಯಾರು ಮಾಡಿ, ತನ್ನ ಮಿತ್ರರಾಷ್ಟ್ರಗಳಾದ ಭಾರತ, ಈಜಿಪ್ಟ್, ವಿಯೆಟ್ನಾಂ ಇತ್ಯಾದಿಗಳಿಗೆ ರಫ್ತು ಮಾಡಿತು. ಆರ್ಥಿಕವಾಗಿ ಹಿಂದುಳಿದಿದ್ದ ಭಾರತದಂತಹ ರಾಷ್ಟ್ರಗಳಿಗೆ ಇದು ಕೈಗೆಟಕುವ ಮತ್ತು ಶಕ್ತಿಶಾಲಿ ಯುದ್ಧವಿಮಾನವಾಗಿತ್ತು.

ಭಾರತದ ಯುದ್ಧಗಳಲ್ಲಿ ನಿರ್ಣಾಯಕ ಪಾತ್ರ

ಮಿಗ್-21 ವಿಮಾನಗಳು 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ಎಫ್‌-86 ಸೇಬರ್ ಮತ್ತು ಎಫ್‌-104 ಸ್ಟಾರ್‌ಫೈಟರ್ ವಿಮಾನಗಳ ವಿರುದ್ಧ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು. 1965, 1999ರ ಯುದ್ಧ ಹಾಗೂ 2019ರ ಬಾಲಾಕೋಟ್‌ ವಾಯುದಾಳಿಯಲ್ಲೂ ಪ್ರಮುಖ ಪಾತ್ರ ವಹಿಸಿದವು.

ಮಿಗ್‌-21ನ ವಿಶೇಷತೆ

ಮಿಗ್-21 ಪ್ರತಿ ಗಂಟೆಗೆ 2,230 ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲದು. ಇದರಿಂದಾಗಿ ಶತ್ರು ವಿಮಾನಗಳನ್ನು ತ್ವರಿತವಾಗಿ ಹಿಮ್ಮೆಟ್ಟಿಸಲು ಸಾಧ್ಯ. ವಿನ್ಯಾಸ ಸರಳವಾಗಿರುವುದರಿಂದ ಉತ್ಪಾದನೆ ಮತ್ತು ನಿರ್ವಹಣೆಗೆ ಕಡಿಮೆ ವೆಚ್ಚ ಸಾಕು. ಲಘುವಾದ ಗಾತ್ರ ಮತ್ತು ತೂಕದಿಂದಾಗಿ ಚುರುಕಾಗಿ ಚಲಿಸಬಲ್ಲದು. ಗನ್‌, ಕ್ಷಿಪಣಿ ಮತ್ತು ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲದಾಗಿತ್ತು.

‘ಹಾರುವ ಶವಪೆಟ್ಟಿಗೆ’ ಕುಖ್ಯಾತಿ

1963ರಿಂದ 2023ರವರೆಗೆ ಭಾರತೀಯ ವಾಯುಸೇನೆಯ 400ಕ್ಕೂ ಹೆಚ್ಚು ಮಿಗ್-21 ವಿಮಾನಗಳು ಅಪಘಾತಕ್ಕೀಡಾಗಿವೆ. ಇದರಲ್ಲಿ 200ಕ್ಕೂ ಹೆಚ್ಚು ಪೈಲಟ್‌ಗಳು ಮತ್ತು ಕೆಲವು ಜನಸಾಮಾನ್ಯರು ಸಾವನ್ನಪ್ಪಿದ್ದಾರೆ. ಈ ದುರಂತಗಳು ಮಿಗ್-21ನ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದವು. ಜೊತೆಗೆ, ‘ಹಾರುವ ಶವಪೆಟ್ಟಿಗೆ’ ಎಂಬ ಕುಖ್ಯಾತಿಗೂ ಕಾರಣವಾದವು.

ಅಮೆರಿಕದ ಎಫ್‌ 16 ಹೊಡೆದುರುಳಿಸಿತ್ತು

ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕ್‌ನ ಬಾಲಾಕೋಟ್‌ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತ್‌ಮಾನ್‌, ದಶಕಗಳ ಹಳೆಯ ಮಿಗ್ 21 ವಿಮಾನದ ಮೂಲಕ ಪಾಕ್‌ ಸೇನೆಗೆ ಸೇರಿದ ಅಮೆರಿಕದ ಅತ್ಯಾಧುನಿಕ ಎಫ್‌ 16 ವಿಮಾನ ಹೊಡೆದುರುಳಿಸಿದ್ದರು. ಇದು ಜಾಗತಿಕ ಅಚ್ಚರಿಗೆ ಕಾರಣವಾಗಿತ್ತು.

ಮಿಗ್ 21 ವಿಮಾನಗಳ ನಿವೃತ್ತಿ ಏಕೆ?

ಇವುಗಳ ತಂತ್ರಜ್ಞಾನ ಹಳೆಯದ್ದು, ನಿರ್ವಹಣಾ ವೆಚ್ಚ ದುಬಾರಿ, ಸುರಕ್ಷತಾ ವ್ಯವಸ್ಥೆ ಬಹಳ ಹಳೆಯದ್ದಾಗಿತ್ತು, ಅಪಘಾತ ಸಾಧ್ಯತೆ ಅಧಿಕ. ಜೊತೆಗೆ ಭಾರತೀಯ ಸೇನೆಗೆ ಅತ್ಯಾಧುನಿಕ ವಿಮಾನಗಳ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿತ್ತು. ಹೀಗಾಗಿ ಮಿಗ್‌ 21 ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯಲು ಭಾರತ ನಿರ್ಧರಿಸಿದೆ. ಒಂದು ಹಂತದಲ್ಲಿ ಭಾರತದ ಯುದ್ಧ ವಿಮಾನಗಳ ಪೈಕಿ ಮಿಗ್‌ 21 ಪಾಲು ಶೇ.67ರಷ್ಟಿತ್ತು.

870 - ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಒಟ್ಟು ವಿಮಾನಗಳು

10 - ಆರಂಭಿಕ ವರ್ಷದಲ್ಲಿ ಪ್ರತಿ ಯುದ್ಧ ವಿಮಾನದ ಬೆಲೆ ₹10 ಕೋಟಿ