ದಿಢೀರ್ ಸಿಕ್ ಲೀವ್ ಮೆಸೇಜ್ ಕಳುಹಿಸಿದ ಉದ್ಯೋಗಿ, ಮ್ಯಾನೇಜರ್ ಉತ್ತರ ಈಗ ವೈರಲ್, ಹುಷಾರಿಲ್ಲದ ಕಾರಣ ವಿಶ್ರಾಂತಿಯ ಅಗತ್ಯವಿದೆ. ನಾಳೆ ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಉದ್ಯೋಗಿ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಮ್ಯಾನೇಜರ್ ಬೆಂಕಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ (ಸೆ.23) ಉದ್ಯೋಗಿ ಹಾಗೂ ಮ್ಯಾನೇಜರ್ ನಡುವಿನ ವ್ಯಾಟ್ಸಾಪ್ ಮೆಸೇಜ್ ಇದೀಗ ಬಾರಿ ವೈರಲ್ ಆಗುತ್ತಿದೆ. ಉದ್ಯೋಗಿ ಒಂದು ದಿನದ ಸಿಕ್ ಲೀವ್ ಕೇಳಿದ್ದಾನೆ. ಕೆಲ ಆಹಾರ ತಿಂದು ಹೊಟ್ಟೆ ಸರಿಯಿಲ್ಲ. ತೀವ್ರ ನೋವು, ಸುಸ್ತು ಆಗುತ್ತಿದೆ. ಹೀಗಾಗಿ ನಾಳೆ ಸಿಕ್ ಲೀವ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಮ್ಯಾನೇಜರ್‌ಗೆ ಮೆಸೇಜ್ ಮಾಡಿದ್ದಾನೆ. ಮ್ಯಾನೇಜರ್ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಈ ಸ್ಕ್ರೀನ್‌ಶಾಟ್ ತೆಗೆದು ಮ್ಯಾನೇಜರ್ ರಿಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಿಕ್ ಲೀವ್ ಮನವಿಗೆ ಏನಂತೀರಿ ಎಂದು ಪ್ರಶ್ನಿಸಿದ್ದಾರೆ. ಹಲವರು ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯೋಗಿ ಮಾಡಿದ ಮೆಸೇಜ್ ಏನು?
ಉದ್ಯೋಗಿ ವ್ಯಾಟ್ಸಾಪ್ ಮೂಲಕ ಮ್ಯಾನೇಜರ್‌ಗೆ ಆರೋಗ್ಯ ಸರಿಯಿಲ್ಲದ ಕಾರಣ ಸಿಕ್ ಲೀವ್ ಕೇಳಿದ್ದಾನೆ. ಇದಕ್ಕಾಗಿ ಮೆಸೇಜ್ ಮಾಡಿದ್ದಾನೆ. ವಾರಾಂತ್ಯದಲ್ಲಿ ನಾನು ಕೆಲ ಆಹಾರಗಳನ್ನು ಸೇವಿಸಿದ್ದೇನೆ. ಇದರಿಂದ ನನ್ನ ಹೊಟ್ಟೆ ಕೆಟ್ಟಿದೆ. ಆಹಾರ ಸೇವಿಸಲು ಆಗುತ್ತಿಲ್ಲ. ಹೊಟ್ಟೆ ತೀವ್ರವಾಗಿ ನೋವಾಗುತ್ತಿದೆ. ಹೀಗಾಗಿ ವಿಶ್ರಾಂತಿ ಹಾಗೂ ಹೊಟ್ಟೆ ನೋವಿನಿಂದ ಚೇತರಿಸಿಕೊಳ್ಳಲು ನಾನು ರಜೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾನೆ.
ಇದು ಮನವಿ ಅಥವಾ ಆದೇಶವೇ?
ಉದ್ಯೋಗಿಯ ಸಿಕ್ ಲೀವ್ ರಿಕ್ವೆಸ್ಟ್ ನೋಡಿದ ಮ್ಯಾನೇಜರ್, ಇದು ಮನವಿಯೋ ಅಥವಾ ಆರ್ಡರ್ ಯಾವುದು ಎಂದು ಪ್ರಶ್ನಿಸಿ ಮೆಸೇಜ್ ಮಾಡಿದ್ದಾರೆ. ಉದ್ಯೋಗಿ ಸಿಕ್ ಲೀವ್ ಕೇಳಿದ ವಿಧಾನ ಮನವಿ ರೀತಿ ಇರಲಿಲ್ಲ, ಆಜ್ಞೆ ರೀತಿ ಇದೆ ಎಂದು ಮ್ಯಾನೇಜರ್ ಸರಳವಾಗಿ ಪ್ರತಿಕ್ರಿಯಿಸಿದ್ದಾರೆ.
ಉದ್ಯೋಗಿಗೆ ಮನವಿ ಅಂದರೆ ಏನು ಎಂದು ತಿಳಿಸಿದ ಮ್ಯಾನೇಜರ್
ಮ್ಯಾನೇಜರ್ ರಿಪ್ಲೈ ನೋಡಿ ಉದ್ಯೋಗಿ ಹೌಹಾರಿದ್ದಾನೆ. ಇಲ್ಲಾ ಸರ್ ಕ್ಷಮಿಸಿ, ಇದು ಮನವಿ ಸರ್. ರಜೆಗಾಗಿ ಮಾಡಿದ ಮನವಿ , ಕಾರಣ ನಿಜಕ್ಕೂ ನನಗೆ ಹುಷಾರಿಲ್ಲ ಎಂದುು ಪ್ರತಿಕ್ರಿಯಿಸಿದ್ದಾನೆ. ಮತ್ತೊಂದು ಪ್ರತಿಕ್ರಿಯೆ ನೀಡಿದ ಮ್ಯಾನೇಜರ್, ಹಾಗಿದ್ದರೆ ಅದು ಮನವಿಯಾಗಿಯೇ ಇರಬೇಕು. ಅದು ಹೇಗೆ ಎಂದರೆ ನಾನು ನಾಳೆ ಸಿಕ್ ಲೀವ್ ತೆಗೆದುಕೊಳ್ಳಲೇ ಎಂಬ ಮನವಿಯಾಗಿರಬೇಕು ಎಂದು ತಿಳಿಸಿ ಹೇಳಿದ್ದಾರೆ.
ಈ ಪೋಸ್ಟ್‌ಗೆ ಪರ ವಿರೋಧ
ಮ್ಯಾನೇಜರ್ ಪೋಸ್ಟ್‌ಗೆ ಪರ ವಿರೋಧಗಳು ವ್ಯಕ್ತವಾಗಿದೆ. ಉದ್ಯೋಗಿ ಸಿಕ್ ಲೀವ್ ಪಡೆದುಕೊಳ್ಳುವುದು ಆತನ ಹಕ್ಕು. ಅದಕ್ಕೆ ಇಷ್ಟೆಲ್ಲಾ ಪ್ರಶ್ನೆಗಳು ಬೇಕಾ? ಉದ್ಯೋಗಿ ಮನವಿ ಮಾಡಬಹುದು, ಇಲ್ಲಾ ನಾಳೆ ಸಿಕ್ ಲೀವ್ ಎಂದಷ್ಟೆ ಮೆಸೇಜ್ ಮಾಡಬಹುದು. ಇಷ್ಟೆಲ್ಲಾ ಪ್ರಶ್ನಿಗೆ ಉತ್ತರಿ, ಮನವಿ ಮೂಲಕ ಪಡೆದುಕೊಳ್ಳಬೇಕಿಲ್ಲ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇತ್ತ ಕೆಲವರು ಪ್ರತಿ ವೃತ್ತಿಪರತೆಯಲ್ಲಿ ಪ್ರತಿಯೊಂದಕ್ಕೂ ಚೌಕಟ್ಟು, ಶಿಸ್ತು ಇರುತ್ತೆದೆ. ರಜೆ ಮನವಿ ಮೂಲಕ ಪಡೆಯುುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
