ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ, 13 ವರ್ಷದ ಬಾಲಕಿಗೆ ಮರುಪ್ರವೇಶ ನೀಡಲು ಮದ್ರಾಸಾವೊಂದು ಕನ್ಯತ್ವ ಪರೀಕ್ಷಾ ವರದಿಯನ್ನು ಕೇಳಿದೆ. ಈ ಅವಮಾನಕಾರಿ ಬೇಡಿಕೆಯ ವಿರುದ್ಧ ಬಾಲಕಿಯ ತಂದೆ ದೂರು ನೀಡಿದ್ದು, ಪೊಲೀಸರು ಮದ್ರಾಸಾ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವಿರುದ್ಧ ಕೇಸ್ ದಾಖಲಿಸಿದ್ದಾರೆ.
13 ವರ್ಷದ ಬಾಲಕಿಗೆ ಕನ್ಯತ್ವ ಪರೀಕ್ಷಾ ವರದಿ ನೀಡುವಂತೆ ಕೇಳಿದ ಮದ್ರಾಸಾ
ಮದ್ರಾಸಾ ಶಾಲೆಗೆ ಸೇರಿಸಿಕೊಳ್ಳುವುದಕ್ಕೆ 13 ವರ್ಷದ ಅಪ್ರಾಪ್ತ ಬಾಲಕಿಗೆ ಕನ್ಯತ್ವ ಪರೀಕ್ಷಾ ವರದಿ ನೀಡುವಂತೆ ಕೇಳಿದ ಘಟನೆ ನಡೆದಿದ್ದು, ಈ ಸಂಬಂಧ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮದ್ರಾಸಾದ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನ ಪಕ್ಬಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಜಾಮಿಯಾ ಅಹ್ಸನುಲ್ ಬನಾತ್ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಬಾಲಕಿಯರ ಮದ್ರಾಸಾ ಶಾಲೆಯ ಪ್ರಾಂಶುಪಾಲರು, ಉಸ್ತುವಾರಿ ಇತರ ಸಿಬ್ಬಂದಿ ವಿರುದ್ಧ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದಾರೆ. ತನ್ನ 13 ವರ್ಷದ ಮಗಳಿಗೆ ಶಾಲೆಗೆ ಪ್ರವೇಶಕ್ಕಾಗಿ ಕನ್ಯತ್ವ ಪರೀಕ್ಷೆ ವರದಿಯನ್ನು ಸಲ್ಲಿಸಲು ಕೇಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಲಕಿಯ ತಂದೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಬಳಿಕ ಘಟನೆ ಬೆಳಕಿಗೆ
ಹೀಗೆ ಅವಮಾನಕಾರಿಯಾಗಿ ಮಾತನಾಡಿ ಮದರಸಾ ಆಡಳಿತ ಮಂಡಳಿಯು ತನ್ನ ಮಗಳನ್ನು ಅವಮಾನಿಸಿದೆ ಎಂದು ಆರೋಪಿಸಿ ಬಾಲಕಿಯ ತಂದೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಮದರಸಾ ಮತ್ತು ಇಂಟರ್ ಕಾಲೇಜಾಗಿ ಎರಡೂ ಒಂದೇ ಆಗಿ ಕಾರ್ಯನಿರ್ವಹಿಸುವ ಈ ಸಂಸ್ಥೆಯು ಉತ್ತರ ಪ್ರದೇಶ ಮಾಧ್ಯಮಿಕ ಶಿಕ್ಷಾ ಮಂಡಳಿ ಮತ್ತು ಮೂಲ ಶಿಕ್ಷಾ ವಿಭಾಗದಿಂದ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಯಾಗಿದೆ.
ಇಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದೀರ್ಘಕಾಲದಿಂದ ಕಾಲೇಜಿಗೆ ಹಾಜರಾಗಿರಲಿಲ್ಲ, ಈ ಬಗ್ಗೆ ಬಾಲಕಿ ಶಾಲೆಗೂ ಮಾಹಿತಿ ನೀಡಿರಲಿಲ್ಲ. ಆದರೆ ಚಂಡೀಗಢ ಮೂಲದ ಆದರೆ ಪ್ರಸ್ತುತ ಮೊರಾದಾಬಾದ್‌ನಲ್ಲಿ ವಾಸಿಸುತ್ತಿರುವ ಬಾಲಕಿಯ ತಂದೆ ಇತ್ತೀಚೆಗೆ ಆಕೆಯ ಮರು ದಾಖಲಾತಿಗಾಗಿ ಬೋರ್ಡಿಂಗ್ ಶಾಲೆಯನ್ನು ಸಂಪರ್ಕಿಸಿದಾಗ, ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ. ಬರೀ ಇಷ್ಟೇ ಆಗಿದ್ದರೆ ಇದು ದೊಡ್ಡ ವಿಚಾರ ಆಗ್ತಿರಲಿಲ್ಲ, ಆದರೆ ಅವರು ಈ ಅಪ್ರಾಪ್ತ ಬಾಲಕಿಗೆ ಕನ್ಯತ್ವ ಪರೀಕ್ಷೆಯ ವರದಿ ನೀಡುವಂತೆ ಕೋರಿದ್ದಾರೆ. ಮದರಸಾ ಸಿಬ್ಬಂದಿ ಕನ್ಯತ್ವ ಪ್ರಮಾಣಪತ್ರವನ್ನು ಕೇಳಿದರು ಮತ್ತು ತನ್ನ ಮಗಳು ಅದನ್ನು ಸಲ್ಲಿಸಲು ನಿರಾಕರಿಸಿದಾಗ ಆಕೆಯನ್ನು ಹೊರಹಾಕಿದರು ಎಂದು ಹುಡುಗಿಯ ತಂದೆ ಆರೋಪಿಸಿದ್ದಾರೆ.
ಮದರಾಸ ಶಾಲೆಯ ವಿರುದ್ಧ ಕೇಸ್ ದಾಖಲು
ಸಂತ್ರಸ್ತೆಯ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಈ ಮದರಾಸದ ಪ್ರವೇಶ ಕೋಶದ ಉಸ್ತುವಾರಿ ಶಹಜಹಾನ್, ಪ್ರಾಂಶುಪಾಲರಾದ ರಹನುಮಾ ಮತ್ತು ಇತರ ಸಿಬ್ಬಂದಿ ಆಕೆಯ ಪೋಷಕರಿಗೆ ಆಕೆಯ ಕನ್ಯತ್ವವನ್ನು ದೃಢೀಕರಿಸುವ ವೈದ್ಯಕೀಯ ಪರೀಕ್ಷಾ ಪತ್ರವನ್ನು ಹಾಜರುಪಡಿಸಿದ ನಂತರವೇ ಪ್ರವೇಶ ನೀಡಲಾಗುವುದು ಎಂದು ಹೇಳಿದ್ದಾರೆ. ನಂತರ ಹುಡುಗಿಯ ಕುಟುಂಬದವರು ಮೊರಾದಾಬಾದ್ ಎಸ್‌ಎಸ್‌ಪಿ ಸತ್ಪಾಲ್ ಅವರಿಗೆ ಔಪಚಾರಿಕ ದೂರು ಸಲ್ಲಿಸಿದೆ. ನಾವು ಕನ್ಯತ್ವ ದೃಢಿಕರಣ ಪ್ರಮಾಣಪತ್ರವನ್ನು ನೀಡದಿದ್ದರೆ, ನನ್ನ ಮಗಳನ್ನು ಮದರಸಾದಿಂದ ತೆಗೆದುಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಗರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರ್ ರಾಮ್‌ವಿಜಯ್ ಸಿಂಗ್ ಅವರು ಅಕ್ಟೋಬರ್ 14 ರಂದು ಅಂಚೆ ಮೂಲಕ ದೂರು ಸ್ವೀಕರಿಸಿರುವುದನ್ನು ದೃಢಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ನಂತರ, ಶಹಜಹಾನ್, ರಹನುಮಾ ಮತ್ತು ಇತರ ಸಿಬ್ಬಂದಿಗಳ ವಿರುದ್ಧ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 79, 351(2), 352, ಮತ್ತು 316(2) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012 ರ ಸೆಕ್ಷನ್ 11 ಮತ್ತು 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಕಟ್ಟಡ ಕೆಲಸಗಾರರ ಸೋಗಿನಲ್ಲಿ ಬಂದು ಕೋಟ್ಯಾಂತರ ಮೌಲ್ಯದ ವಸ್ತು ಕದ್ದು ಎಸ್ಕೇಪ್
ಇದನ್ನೂ ಓದಿ: ಸರ್ಕಾರಿ ಕೆಲಸವಿದ್ದರೂ ಮೂನ್ ಲೈಟಿಂಗ್ ಮಾಡಿದ ಭಾರತೀಯನಿಗೆ ಅಮೆರಿಕಾದಲ್ಲಿ 15 ವರ್ಷ ಜೈಲು
