ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ಯಾಂಡ್ ಇದ್ದರೂ ಸಿಬ್ಬಂದಿ ತಕ್ಷಣವೇ ಕೊಡದೇ ನಿರ್ಲಕ್ಷ್ಯ ವಹಿಸಿದ ಕಾರಣ 72 ವರ್ಷದ ವೃದ್ಧೆ ಗ್ಲುಕೋಸ್ ಬಾಟಲಿ ಹಿಡಿದು ನಿಂತ ಘಟನೆ ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಸರ್ಕಾರ ಎಷ್ಟು ಸೌಲಭ್ಯ ನೀಡಿದರು ನಮ್ಮ ಸರ್ಕಾರಿ ಸಂಸ್ಥೆಗಳ ಪಾಡು ಸದಾ ನಾಯಿಪಾಡು ಅಲ್ಲಿ ಯಾವುದೇ ನಿಗದಿಯಾದ ಸವಲತ್ತುಗಳು ಇರುವುದೇ ಇಲ್ಲ, ಇದ್ದರೂ ಎಲ್ಲದಕ್ಕೂ ಹಣ ಕೇಳುವ ಸಿಬ್ಬಂದಿ ಹೀಗೆ ಬಡವರಿಗೆ ಎಲ್ಲಿ ಹೋದರೂ ಕಷ್ಟವೇ ಅದೇ ರೀತಿ ಇಲ್ಲೊಂದು ಕಡೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಬೆಡ್ ಸೌಲಭ್ಯವಿದ್ದರೂ ಗ್ಲುಕೋಸ್ ಇದ್ದರೂ ಅದನ್ನು ರೋಗಿಗೆ ಹಾಕಿ ನಿಲ್ಲಿಸಬೇಕಾದಂತಹ ಸ್ಟ್ಯಾಂಡ್ ಆಸ್ಪತ್ರೆಯಲ್ಲಿ ಇದರಿಂದ 72 ವರ್ಷದ ವೃದ್ಧೆಯೊಬ್ಬರು ಅರ್ಧ ಗಂಟೆಗೂ ಹೆಚ್ಚು ಕಾಲ ಗ್ಲುಕೋಸ್ ಬಾಟಲನ್ನು ಹಿಡಿದು ನಿಂತುಕೊಂಡ ಘಟನೆ ನಡೆದಿದೆ. ಇದರ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರ್ಕಾರಿ ಆಸ್ಪತ್ರೆ ವಿರುದ್ಧ ಭಾರಿ ಆಕ್ರೋಶ ಕೇಳಿ ಬಂದಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಸಣ್ಣ ಸಣ್ಣ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲ್ಲ ಜಿಲ್ಲಾಕೇಂದ್ರದಲ್ಲಿರುವ ದೊಡ್ಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ. ಮಧ್ಯಪ್ರದೇಶದ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ ಡ್ರಿಪ್ ಸ್ಟ್ಯಾಂಡ್ ಒದಗಿಸಲು ವಿಫಲವಾದ ಕಾರಣ, 72 ವರ್ಷದ ಮಹಿಳೆಯೊಬ್ಬರು ಗಾಯಗೊಂಡಿರುವ ತಮ್ಮ ಮೊಮ್ಮಗನಿಗಾಗಿ ಸುಮಾರು ಅರ್ಧ ಗಂಟೆಗಳ ಕಾಲ ಡ್ರಿಪ್ ಬಾಟಲಿಯನ್ನು ಹಿಡಿದಿಟ್ಟುಕೊಂಡು ನಿಂತಿದ್ದರು.

ಶುಕ್ರವಾರ ಈ ಘಟನೆ ನಡೆದಿದ್ದು, ಈ ಘಟನೆ ವೀಡಿಯೋ ಈಗ ವೈರಲ್ ಆಗ್ತಿದೆ. ರಸ್ತೆ ಅಪಘಾತದ ನಂತರ ಮೈಹಾರ್‌ನಿಂದ ಗಾಯಾಳು 35 ವರ್ಷದ ಅಶ್ವನಿ ಮಿಶ್ರಾ ಎಂಬಾತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರ ಸ್ಥಿತಿ ಗಂಭೀರವಾಗಿದ್ದರೂ, ಅಲ್ಲಿ ಆಸ್ಪತ್ರೆ ಸಿಬ್ಬಂದಿ ಅವರಿಗೊಂದು ಡ್ರಿಪ್ ಸ್ಟ್ಯಾಂಡ್ ಒದಗಿಸಲಿಲ್ಲ, ತುರ್ತು ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಆಸ್ಪತ್ರೆ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದನ್ನು ನೋಡಿದ ಅಶ್ವನಿ ಮಿಶ್ರಾ ಅವರ ಅಜ್ಜಿ ಗ್ಲುಕೋಸ್ ಬಾಟಲಿಯನ್ನು ಕೈಯಲ್ಲಿ ಹಿಡಿದು ಅರ್ಧ ಗಂಟೆ ನಿಂತಿದ್ದಾರೆ.

ಆದರೆ ಈ ಆಸ್ಪತ್ರೆಯಲ್ಲಿ ಡ್ರಿಪ್ ಸ್ಟ್ಯಾಂಡ್‌ನ ಕೊರತೆ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಹಾಗಿದ್ದು, ಒಬ್ಬ ಅತ್ಯಂತ ಅಗತ್ಯವಿದ್ದ ರೋಗಿಗೇ ಡ್ರಿಪ್ ಸ್ಟ್ಯಾಂಡ್‌ ನೀಡದೇ ಅವರ ಹಾಗೂ ಅವರ ಕುಟುಂಬದವರನ್ನು ಆತಂಕಕ್ಕೆ ದೂಡಿದ ಸಿಬ್ಬಂದಿಯ ಬಗ್ಗೆ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಅಲ್ಲಿದ್ದ ಇತರರು ದೂರಿದ್ದಾರೆ.

ಆಸ್ಪತ್ರೆಯವರ ಡ್ರಿಪ್ ಸ್ಟ್ಯಾಂಡ್‌ಗಾಗಿ ಕಾದರೆ ತನ್ನ ಮೊಮ್ಮಗನ ಜೀವ ಅಪಾಯಕ್ಕೆ ಸಿಲುಕಲಿದೆ ಎಂದು ಅರಿತ ವೃದ್ಧೆ ತಾವೇ ಡ್ರಿಪ್ ಸ್ಟ್ಯಾಂಡ್ ಆಗಲು ಮುಂದಾಗಿದ್ದಾರೆ. ಅಲ್ಲದೇ ಅಲ್ಲಿ ಹನಿ ಹನಿಯಾಗಿ ಗ್ಲುಕೋಸ್ ಮೊಮ್ಮಗನ ದೇಹ ಸೇರುವುದಕ್ಕಾಗಿ ಅವರು ಅರ್ಧಗಂಟೆಗೂ ಹೆಚ್ಚು ಕಾಲ ಅಲ್ಲಿ ನಿಂತಿದ್ದಾರೆ. ಇದಕ್ಕೂ ಮೊದಲು ಅಶ್ವನಿ ಮಿಶ್ರಾ ಅವರನ್ನು ಕರೆತಂದ ಆಂಬ್ಯುಲೆನ್ಸ್‌ನ ಸ್ಥಿತಿಯು ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಯ ಗೇಟ್‌ನಲ್ಲಿ ಇಳಿಸಿದ ನಂತರ, ವಾಹನವು ಕೆಟ್ಟುಹೋಯಿತು ಮತ್ತು ಅದನ್ನು ಮತ್ತೆ ಓಡಿಸಲು ಪಕ್ಕದಲ್ಲಿದ್ದವರು ಅದನ್ನು ತಳ್ಳಬೇಕಾಯಿತು.

ಆದರೆ ಈ ಬಗ್ಗೆ ಅಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನು ಕೇಳಿದಾಗ, ಆಸ್ಪತ್ರೆಯಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯದ ಕೊರತೆ ಇಲ್ಲ ಎಂದಿದ್ದಾರೆ. ಅಥವಾ ನಿರ್ಲಕ್ಷ್ಯದ ಯಾವುದೇ ಆರೋಪಗಳನ್ನು ದೃಢವಾಗಿ ನಿರಾಕರಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಡ್ರಿಪ್ ಸ್ಟ್ಯಾಂಡ್‌ಗಳು ಲಭ್ಯವಿದ್ದು, ಗಾಯಗೊಂಡ ರೋಗಿಗೆ ಬಂದ 5 ರಿಂದ 7 ನಿಮಿಷಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದ್ದಾರೆ. ವೈದ್ಯಕೀಯ ತಂಡಕ್ಕೆ ಸಹಾಯ ಮಾಡುವ ಭಾಗವಾಗಿ ಅಜ್ಜಿ ಸ್ವಯಂಪ್ರೇರಣೆಯಿಂದ ಡ್ರಿಪ್ ಬಾಟಲಿಯನ್ನು ಹಿಡಿದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

View post on Instagram

ಇದನ್ನೂ ಓದಿ: ಕೃಷ್ಣವೇಷಧಾರಿ ಮಗನ ದೃಷ್ಟಿ ತೆಗೆದ ಮುಸ್ಲಿಂ ತಾಯಿ, ಮಗಳಿಗೆ ರಾಧೆ ವೇಷ ಹಾಕಿದ ಮತ್ತೊಬ್ಬ ಮುಸ್ಲಿಂ ಅಮ್ಮ

ಇದನ್ನೂ ಓದಿ: ಪತ್ನಿ ನೀಡಿದ ವಿಚಿತ್ರ ಚಿಕಿತ್ಸೆಯಿಂದ ಮತ್ತೆ ನಡೆದಾಡಲು ಶುರು ಮಾಡಿದ ಪಾರ್ಶ್ವವಾಯು ಪೀಡಿತ ಪತಿ