ಡ್ರಗ್ ದಂಧೆಯಲ್ಲಿ ತೊಡಗಿದ್ದ ಮಚ್ಲಿ ಕುಟುಂಬದ ಐಷಾರಾಮಿ ಮನೆಯನ್ನು ಭೋಪಾಲ್‌ನಲ್ಲಿ ಧ್ವಂಸಗೊಳಿಸಲಾಗಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಈ ಮನೆಯಲ್ಲಿ 30 ಕ್ಕೂ ಹೆಚ್ಚು ಕೊಠಡಿಗಳು, ಗ್ಯಾರೇಜ್ ಮತ್ತು ಉದ್ಯಾನವನವಿತ್ತು.
ಡ್ರಗ್ ಮಾರಾಟ ದಂಧೆಯಿಂದಲೇ ಕುಖ್ಯಾತಿ ಗಳಿಸಿದ್ದಲ್ಲದೇ ಮೂರಂತಸ್ಥಿನ ಐಷಾರಾಮಿ ಮನೆ ಕಟ್ಟಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಡ್ರಗ್ ಪೆಡ್ಲರ್ ಮಚ್ಲಿ ಎಂಬಾತನಿಗೆ ಸೇರಿದ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಈ ಘಟನೆ ನಡೆದಿದೆ. 1990ರಲ್ಲಿ ನಿರ್ಮಿಸಲಾದ ಈ ಮೂರಂತಸ್ಥಿನ ಈ ಐಷಾರಾಮಿ ಮನೆಯಲ್ಲಿ ಗ್ಯಾರೇಜ್, ಪಾರ್ಕ್ 30 ಕೊಠಡಿಗಳು, ಫ್ಯಾಕ್ಟರಿಯೂ ಇತ್ತು.
ಇದಕ್ಕೂ ಮೊದಲು ಜುಲೈ 30 ರಂದು ನಡೆದ ಧ್ವಂಸ ಕಾರ್ಯಾಚರಣೆಯಲ್ಲಿ ಮನೆಗಳು, ಗೋದಾಮುಗಳು, ಕಾರ್ಖಾನೆಗಳು, ತೋಟದ ಮನೆಗಳು ಮತ್ತು ಅಕ್ರಮ ಮದರಸಾವೂ ಸೇರಿದಂತೆ ಕುಟುಂಬಕ್ಕೆ ಸೇರಿದ ₹100 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆ.
ಸರ್ಕಾರಿ ಭೂಮಿ ಅತಿಕ್ರಮಿಸಿ ಐಷಾರಾಮಿ ಬಂಗಲೆ ನಿರ್ಮಾಣ
ಇತ್ತೀಚಿನ ಈ ಧ್ವಂಸ ಕಾರ್ಯಾಚರಣೆಯೂ ಅನಂತಪುರ ಕೊಕ್ತಾದ ವಾರ್ಡ್ ಸಂಖ್ಯೆ 62 ರಲ್ಲಿ ನಡೆದಿದ್ದು, ಅಲ್ಲಿ ಕುಟುಂಬವು 15,000 ಚದರ ಅಡಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಹಲು ನಿರ್ಮಿಸಿತ್ತು ಎಂದು ವರದಿಯಾಗಿದೆ. ಆ ಜಾಗದಲ್ಲಿ 30 ಕ್ಕೂ ಹೆಚ್ಚು ಕೊಠಡಿಗಳು, ಗ್ಯಾರೇಜ್, ಉದ್ಯಾನವನ, ಉಯ್ಯಾಲೆ ಕೂಡ ಇತ್ತು ಎಂದು ವರದಿಯಾಗಿದೆ. ಅತಿಕ್ರಮಣ ಮಾಡಲಾದ ಸರ್ಕಾರಿ ಭೂಮಿಯನ್ನು ಕುಟುಂಬವು ₹150 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನಾಗಿ ಮಾಡಿತ್ತು ಎಂದು ವರದಿಗಳು ಸೂಚಿಸುತ್ತವೆ. ಸುಮಾರು ಐದೂವರೆ ಗಂಟೆಗಳ ಕಾಲ ನಡೆದ ಈ ಧ್ವಂಸ ಕಾರ್ಯಾಚರಣೆಯಲ್ಲಿ 250 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಆಡಳಿತ ಅಧಿಕಾರಿಗಳು ಮತ್ತು ಪುರಸಭೆಯ ತಂಡಗಳು ಭಾಗವಹಿಸಿದ್ದವು.
ಮಾದಕವಸ್ತು ಕಳ್ಳಸಾಗಣೆ, ಲೈಂಗಿಕ ಶೋಷಣೆ ಆರೋಪ
ಈ ಡ್ರಗ್ ಪೆಡ್ಲರ್, ಯಾಸಿನ್ ಮಚ್ಲಿ ವಿರುದ್ಧ ಮಾದಕವಸ್ತು ಕಳ್ಳಸಾಗಣೆ, ಲೈಂಗಿಕ ಶೋಷಣೆ, ಆಕ್ಷೇಪಾರ್ಹ ವೀಡಿಯೊಗಳನ್ನು ಮಾಡುವ ಮೂಲಕ ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡುವುದು, ಮಾದಕ ವ್ಯಸನಕ್ಕೆ ಒತ್ತಾಯಿಸುವುದು, ಹೈ ಪ್ರೊಫೈಲ್ ಮಾದಕವಸ್ತು ಪಾರ್ಟಿಗಳನ್ನು ಆಯೋಜಿಸುವುದು, ಅಪಹರಣ, ಹಲ್ಲೆ ಮತ್ತು ಲೂಟಿ ಆರೋಪವಿದೆ. ಕ್ಲಬ್‌ಗಳಲ್ಲಿ ಡಿಜೆಯಾಗಿಯೂ ಕೆಲಸ ಮಾಡುತ್ತಿದ್ದ ಆತ ಅದನ್ನು ತನ್ನ ಕಾನೂನುಬಾಹಿರ ಕಾರ್ಯಾಚರಣೆಗಳಿಗೆ ಸೋಗಿನಂತೆ ಬಳಸಿಕೊಂಡಿದ್ದ ಎಂಬ ಆರೋಪವಿದೆ.
ಈತನ ಕುಟುಂಬದ ಮತ್ತೊಬ್ಬ ಸದಸ್ಯ ಶಹ್ವಾರ್ ಮಚ್ಲಿ ವಿರುದ್ಧ ಅಪ್ರಾಪ್ತೆಯ ಮೇಲೆ ಹಲ್ಲೆ ಮಾದಕವಸ್ತು ಕಳ್ಳಸಾಗಣೆ ಮತ್ತು ಅಶ್ಲೀಲ ವೀಡಿಯೊಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ ಆರೋಪವಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವಿದೆ. ಅಲ್ಲದೇ ಈತನ ಕುಟುಂಬದ ಇತರ ಸದಸ್ಯರಾದ ಶಕೀಲ್ ಅಹ್ಮದ್, ಶಾರಿಕ್ ಅಹ್ಮದ್, ಸೊಹೈಲ್ ಅಹ್ಮದ್ ಮತ್ತು ಶಫೀಕ್ ಅಹ್ಮದ್ ಸೇರಿದಂತೆ ಇತರ ಕುಟುಂಬ ಸದಸ್ಯರು ಸಹ ಈ ಪ್ರದೇಶದಲ್ಲಿ ಅಕ್ರಮ ಆಸ್ತಿಗಳು ಮತ್ತು ವ್ಯವಹಾರಗಳೊಂದಿಗೆ ಸಂಬಂಧ ಹೊಂದಿರುವ ಆರೋಪವಿದೆ.
ಒಟ್ಟಿನಲ್ಲಿ ಡ್ರಗ್ ಮಾರಾಟ ಮಾಡಿ ಕಂಡವರ ಮಕ್ಕಳ ಬಾವಿಗೆ ತಳ್ಳಿ ತಾವು ಐಷಾರಾಮಿ ಜೀವನ ನಡೆಸುತ್ತಾ ಶೋಕಿ ಮಾಡ್ತಿದ್ದ ಯಾಸಿನ್ ಮಚ್ಲಿ ಹಾೂಗೂ ಆತನ ಕುಟುಂಬಕ್ಕೆ ಪೊಲೀಸರು ಈಗ ತನ್ನದೇ ಔಷಧಿಯ ರುಚಿ ನೋಡುವಂತೆ ಮಾಡಿದ್ದಾರೆ.
ಇದನ್ನೂ ಓದಿ: ಚಿಕನ್‌ಗಾಗಿ ಕ್ರೂಸ್ ಶಿಪ್‌ನಲ್ಲಿ ಮುಖ ಮೂತಿ ಒಡೆಯೋ ತರ ಬಡಿದಾಡ್ಕೊಂಡ ಜನ
ಇದನ್ನೂ ಓದಿ: 50 ಪೈಸೆಗೆ ಫುಲ್ ಮಿಲ್, 20 ಪೈಸೆಗೆ ಇಡ್ಲಿ: 1962ರ ರೇಟ್‌ನಲ್ಲಿ ಊಟ ತಿಂಡಿ ಚಹಾ ಕೊಟ್ಟ ಉಡುಪಿ ವಿಹಾರ್
