ಮದುವೆ ಮಾತುಕತೆಗೆಂದು ಯುವಕನನ್ನು ಮನೆಗೆ ಕರೆಸಿ ಬಳಿಕ ಆತನನ್ನು ಸರಿಯಾಗಿ ಥಳಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ್ ಪ್ರದೇಶದಲ್ಲಿ ನಡೆದಿದೆ.

ಮುಂಬೈ: ಮದುವೆ ಮಾತುಕತೆಗೆಂದು ಯುವಕನನ್ನು ಮನೆಗೆ ಕರೆಸಿ ಬಳಿಕ ಆತನನ್ನು ಸರಿಯಾಗಿ ಥಳಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚವಾಡ್ ಪ್ರದೇಶದಲ್ಲಿ ನಡೆದಿದೆ. 26 ವರ್ಷದ ರಾಮೇಶ್ವರ್‌ ಗೆಂಗಟ್ ಕೊಲೆಯಾದ ಯುವಕ. ಘಟನೆಗೆ ಸಂಬಂಧಿಸಿದಂತೆ ಯುವತಿಯ ತಂದೆಯೂ ಸೇರಿದಂತೆ ಒಟ್ಟು 9 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿ ಜೊತೆ ಮದುವೆ ಮಾಡಲು ಒಪ್ಪದ ಯುವತಿ ಪೋಷಕರು

26 ವರ್ಷದ ರಾಮೇಶ್ವರ್ ಗೆಂಗಟ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ, ಆಕೆಯೂ ಈತನನ್ನು ಪ್ರೀತಿಸುತ್ತಿದ್ದಳು. ಆದರೆ ಯುವಕನ ಹಿನ್ನೆಲೆ ಸರಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಯುವತಿ ಮನೆಯವರಿಗೆ ಆತನಿಗೆ ಮಗಳನ್ನು ಮದುವೆ ಮಾಡಿ ಕೊಡುವುದಕ್ಕೆ ಇಷ್ಟವಿರಲಿಲ್ಲ, ಆದರೆ ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಯುವತಿ ಆತನನ್ನು ಮದುವೆಯಾಗುವುದಕ್ಕೆ ಹಠಕ್ಕೆ ಬಿದ್ದಿದ್ದಳು. ಇತ್ತ ಯುವಕನಿಗೆ ಕ್ರಿಮಿನಲ್ ಹಿನ್ನೆಲೆ ಇತ್ತು. ಆತನ ವಿರುದ್ಧದ ಪ್ರಕರಣಗಳು ಸಣ್ಣಪುಟ್ಟದಾಗಿರಲಿಲ್ಲ, ಆತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವಿತ್ತು. ಅತ್ಯಾ*ಚಾರದ ಆರೋಪವೂ ಸೇರಿದಂತೆ ಪೋಸ್ಕೋ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ)ಪ್ರಕರಣವೂ ಆತನ ವಿರುದ್ಧ ದಾಖಲಾಗಿತ್ತು. ಹೀಗಾಗಿ ಆತನ ಜೊತೆ ಮಗಳ ಮದುವೆ ಮಾಡುವುದಕ್ಕೆ ಪೋಷಕರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ.

ಆತನನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದ ಯುವತಿ: ಮದ್ವೆ ಮಾತುಕತೆಗೆ ಕರೆಸಿ ಕೊಲೆ:

ಆದರೆ ಇತ್ತ ಮಗಳು ಆತನನ್ನೇ ಮದುವೆಯಾಗುವುದಾಗಿ ಹಠಕ್ಕೆ ಬಿದ್ದಿದ್ದರಿಂದ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದರು. ಕೊನೆಗೆ ಜುಲೈ 22ರಂದು ಆತನನ್ನು ಮದುವೆ ಬಗ್ಗೆ ಮಾತುಕತೆ ನಡೆಸುವುದಕ್ಕಾಗಿ ಮನೆಗೆ ಕರೆಸಿದ್ದಾರೆ. ಆತ ತನ್ನ ಅಪ್ಪ ಅಮ್ಮನೊಂದಿಗೆ ಮನೆಗೆ ಬಂದಿದ್ದಾನೆ. ಈ ವೇಳೆ ಆತನಿಗೂ ಹುಡುಗಿ ಕಡೆಯವರಿಗೂ ಜಗಳವಾಗಿದ್ದು, ಆತನನ್ನು ಮನೆ ಕೋಣೆಯೊಂದಕ್ಕೆ ಕರೆದೊಯ್ದ ಯುವತಿ ಕುಟುಂಬದವರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಹೊಡೆತದಿಂದ ಗಂಭೀರವಾಗಿ ಗಾಯಗೊಂಡ ರಾಮೇಶ್ವರನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು.

ಇದಾದ ನಂತರ ಯುವತಿಯ ತಂದೆ ಪ್ರಶಾಂತ್ ಸರ್ಸರ್‌ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಪ್ರಕರಣದ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಸಾಂಗ್ವಿಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಕೋಲಿ ಹೇಳಿದ್ದಾರೆ.

ಇದನ್ನೂ ಓದಿ: ಪೆಪ್ಸಿಯಿಂದ ಮ್ಯಾಕ್‌ಡೋನಲ್ಡ್‌ವರೆಗೆ: ಟ್ರಂಪ್ ತೆರಿಗೆಯಿಂದಾಗಿ ಅಮರಿಕನ್ ಕಂಪನಿಗಳಿಗೆ ಭಾರತೀಯರ ಸ್ವದೇಶಿ ಬಿಸಿ

ಇದನ್ನೂ ಓದಿ: ಕುಡಿದು ರಸ್ತೆಯಲ್ಲೇ ಮಲಗಿದ ಶಿಕ್ಷಕ: ವೀಡಿಯೋ ವೈರಲ್ ಆಗ್ತಿದ್ದಂಗೆ ಸಸ್ಪೆಂಡ್