ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ಭೂಪಟದಂತೆ ಕಾಣುವ ಕರ್ನಾಟಕದ ಒಂದು ಡ್ಯಾಮ್‌ನ ವೀಡಿಯೊ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ಈ ಜಲಾಶಯವು ನೈಸರ್ಗಿಕವಾಗಿ ಭಾರತದ ಆಕಾರವನ್ನು ಹೋಲುತ್ತದೆ.

ಇಂದು ಭಾರತದ 79ನೇ ಸ್ವಾತಂತ್ರ ದಿನಾಚರಣೆ. ದೇಶದೆಲ್ಲೆಡೆ ಭಾರಿ ಸಂಭ್ರಮದಿಂದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹೀಗಿರುವಾಗ ಪ್ರಾಕೃತಿಕವಾಗಿ ನಮ್ಮ ದೇಶದ ಭೂಪಟವನ್ನೇ ಹೋಲುವ ಡ್ಯಾಂ ದೇಶದಲ್ಲಿದೆ ಎಂಬ ವಿಚಾರ ನಿಮಗೆ ಗೊತ್ತಾ? ಅದು ನಮ್ಮ ಕರ್ನಾಟಕದಲ್ಲಿ ಎಂಬುದು. ಸ್ವಾತಂತ್ರ ದಿನಾಚರಣೆಯ ದಿನವಾದ ಇಂದು ಈ ಡ್ಯಾಂನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.

ವೀಡಿಯೋದಲ್ಲಿ ಕಾಣುವಂತೆ ಭಾರತ ಭೂಪಟದಂತೆ ಈ ಜಲಾಶಯ ಕಾಣುತ್ತಿದೆ. ಜಲಾಶಯದ ಒಂದು ಕಡೆ ಅಣೆಕಟ್ಟಿದ್ದರೆ ಮತ್ತೆ ಮೂರು ಕಡೆ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು, ಭಾರತದ ಭೂಪಟವನ್ನೇ ಇಲ್ಲಿ ನೈಸರ್ಗಿಕವಾಗಿ ಪ್ರಕೃತಿಯೇ ಚಿತ್ರಿಸಿದಂತಿದೆ. ವೀಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಜಲಾಶಯ ಇರುವುದು ನಮ್ಮ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ. ವೀಡಿಯೋ ನೋಡಿದ ಅನೇಕರು ಇದು ನಮ್ಮ ಹಿರಿಯೂರಿನ ಡ್ಯಾಂ ಎಂದು ಕಾಮೆಂಟ್ ಮಾಡಿದ್ದಾರೆ.

ನಿಮಗೆ ತಿಳಿದಿರದೇ ಇದ್ದರೆ ಇದು ನಮ್ಮ ಚಿತ್ರದುರ್ಗದ ಹಿರಿಯೂರಿನಲ್ಲಿರುವ ವಾಣಿ ವಿಲಾಸ ಜಲಾಶಯವಾಗಿದೆ. ವಾಣಿ ವಿಲಾಸ ಸಾಗರ ಅಣೆಕಟ್ಟು ಅಥವಾ ಮಾರಿ ಕಣಿವೆ ಎಂದೂ ಕರೆಯಲ್ಪಡುವ ಇದನ್ನು ವೇದಾವತಿ ನದಿಗೆ ಕಟ್ಟಲಾಗಿದೆ. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಮಾರಿಕಣಿವೆ ಗ್ರಾಮದ ಬಳಿ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಮಹಾರಾಜರು ಈ ಅಣೆಕಟ್ಟನ್ನು ನಿರ್ಮಿಸಿದರು.

ಭಾರತದ ಸ್ವಾತಂತ್ರ್ಯಕ್ಕೂ ಮೊದಲು ಈ ಜಲಾಶಯವನ್ನು ಮೈಸೂರು ಮಹಾರಾಜರು ನಿರ್ಮಿಸಿದ್ದರು. 1897 ಮತ್ತು 1907 ರ ನಡುವೆ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ IV ಅವರ ಆಳ್ವಿಕೆಯಲ್ಲಿ ಇದರ ನಿರ್ಮಾಣ ಕಾರ್ಯ ನಡೆಯಿತು. ಈ ಯೋಜನೆಯನ್ನು ಮಹಾರಾಜ ಚಾಮರಾಜ ಒಡೆಯರ್ ಅವರ ವಿಧವೆಯಾಗಿದ್ದ ರಾಜಪ್ರತಿನಿಧಿ ರಾಣಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರು ಪ್ರಾರಂಭಿಸಿದರು. ಈ ಅಣೆಕಟ್ಟಿಗೆ ಅವರದೇ ಹೆಸರಿಡಲಾಗಿದೆ.

79ನೇ ಸ್ವಾತಂತ್ರ ದಿನಾಚರಣೆಯ ಈ ಸಂದರ್ಭದಲ್ಲಿ ವಿಡಿಯೋ ಮತ್ತೆ ವೈರಲ್ ಆಗ್ತಿದೆ.

View post on Instagram