ರಾಜಸ್ಥಾನದ ಜೋಧ್‌ಪುರದಲ್ಲಿರುವ ಡೈಲನ್ಸ್ ಕೆಫೆಯು, ಭಾರತೀಯ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನಿರಾಕರಿಸಿದೆ. ಕೇವಲ ವಿದೇಶಿಗರಿಗೆ ಮಾತ್ರ ಸೇವೆ ನೀಡುತ್ತೇವೆ ಎಂಬ ಹೊಟೇಲ್ ಮಾಲೀಕನ ಉದ್ಧಟತನದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತದ ನೆಲ ಭಾರತೀಯರಿಗೆ ಪ್ರವೇಶ ನಿಷೇಧ...
ಕೆಲವು ಪ್ರವಾಸಿ ತಾಣಗಳಲ್ಲಿ ವಿದೇಶಿಯರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ. ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತದೆ. ವಿದೇಶಿಯರ ಯಮಾರಿಸಿ ದುಬಾರಿ ಹಣ ವಸೂಲಿ ಮಾಡುವುದು ಇದರ ಹಿಂದಿನ ಉದ್ದೇಶ. ವಿದೇಶಿಯರಿಗೆ ವಿಶೇಷ ಸವಲತ್ತು ನೀಡುವುದೇನೋ ಸರಿ ಆದರೆ ಸ್ಥಳೀಯರಿಗೆ ಪ್ರವೇಶವೇ ನೀಡದಿದ್ದರೆ ಅದೆಷ್ಟು ಸರಿ. ಪ್ರವಾಸಿ ತಾಣವಾದ ರಾಜಸ್ಥಾನದ ಜೋಧ್‌ಪುರದಲ್ಲಿ ಇಂತಹದೊಂದು ಘಟನೆ ನಡೆದಿದೆ. ಭಾರತದ ನೆಲದಲ್ಲಿರುವ ಈ ಹೊಟೇಲ್‌ಗೆ ಭಾರತೀಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಸ್ನೇಹಿತರ ಜೊತೆ ಜೋಧ್‌ಪುರದ ಹೊಟೇಲೊಂದಕ್ಕೆ ತೆರಳಿದ ಐಐಟಿಯ ವಿದ್ಯಾರ್ಥಿಯೊಬ್ಬರಿಗೆ ಇಲ್ಲಿ ಇಂತಹ ಕೆಟ್ಟ ಅನುಭವ ಆಗಿದೆ.
ಭಾರತೀಯರೆಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಣೆ
ಕೇವಲ ವಿದೇಶಿಗರಿಗೆ ಮಾತ್ರ ಅವಕಾಶ, ಇಲ್ಲಿ ಭಾರತೀಯರಿಗೆ ಅವಕಾಶ ಇಲ್ಲ ಎಂದು ಹೊಟೇಲ್ ಸಿಬ್ಬಂದಿ ಅಲ್ಲಿಗೆ ಭೇಟಿ ನೀಡಿದ ಯುವಕನಿಗೆ ಹೇಳಿದ್ದಾರೆ. ಇದಾದ ನಂತರ ವಿದ್ಯಾರ್ಥಿ ಮಾಲೀಕನಿಗೆ ಕರೆ ಮಾಡಿದ್ದು, ಮಾಲೀಕನೂ ಅದೇ ರೀತಿ ಉತ್ತರಿಸಿದ್ದಾನೆ. ಈ ಮಾತುಕತೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಹೊಟೇಲ್‌ನ ಮಾಲೀಕರ ಉದ್ಧಟತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಜೋಧ್‌ಪುರದ ಡೈಲನ್ಸ್ ಕೆಫೆ ಎಂಬ ಐಷಾರಾಮಿ ಹೊಟೇಲ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹೊಟೇಲ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ನಂತರ ಅದರ ಮಾಲೀಕ ಭಾಕರ್ ಖಾನ್ ಎಂಬಾತನಿಗೆ ಕರೆ ಮಾಡಿದಾಗ ಆತನೂ ಅದನ್ನೇ ಹೇಳಿದ್ದಾನೆ. ತಮ್ಮ ಹೊಟೇಲ್ ಕೇವಲ ವಿದೇಶಿಗರಿಗೆ ಭಾರತೀಯರಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಹೇಳಿದ್ದಾನೆ.
ಕೇವಲ ವಿದೇಶಿಗರಿಗೆ ಮಾತ್ರ... ಜೋಧ್‌ಪುರದ ಹೊಟೇಲ್ ಉದ್ಧಟತನ
ಇದು ಜನಾಂಗೀಯ ನಿಂದನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಥ್ರೆಡ್ಸ್,, ಟ್ವಿಟ್ಟರ್, ರೆಡಿಟ್ ಮುಂತಾದ ಜಾಲತಾಣಗಳಲ್ಲಿ ಜನ ಹೊಟೇಲ್ ಮಾಲೀಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಡೈಲನ್ಸ್ ಕೆಫೆಯಾಗಲಿ ಅದರ ಮಾಲೀಕ ಭಾಖರ್ ಖಾನ್ ಆಗಲಿ ಯಾವುದೇ ಸ್ಪಷ್ಟನೆಯಾಗಲಿ ಹೇಳಿಕೆಯನ್ನಾಗಲಿ ಬಿಡುಗಡೆ ಮಾಡಿಲ್ಲ, ಹೀಗಾಗಿ ಸ್ಥಳೀಯ ನಿವಾಸಿಗಳು ಕೂಡ ಈ ಹೊಟೇಲ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. indian.now ಎಂಬ ಇನ್ಸ್ಟಾಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸಾವಿರಾರು ಜನ ವೀಡಿಯೋ ವೀಕ್ಷಿಸಿ ಹೊಟೇಲ್ ಮಾಲೀಕರ ಉದ್ಧಟತನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೀಡಿಯೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ...
ಯಾಕೆ ಈ ವಿಚಾರ ಇಷ್ಟೊಂದು ಸುದ್ದಿಯಾಗುತ್ತಿದೆ. ಇದೊಂದು ಕೊಳಕು ಸ್ಥಳ ನಾನು ಕೆಲ ಸಮಯಕ್ಕೂ ಹಿಂದೆ ಅಲ್ಲೇ ಇದ್ದೆ ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಭಾರತದಲ್ಲೇ ಇದ್ದು ಭಾರತೀಯರಿಗೆ ಪ್ರವೇಶ ನಿರಾಕರಿಸಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಬಹುಶಃ ಅವರು ದನದ ಮಾಂಸ ಮಾರುತ್ತಿರಬೇಕು ಅದಕ್ಕೆ ಸ್ಥಳೀಯರಿಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ದೇಶವನ್ನು ಮತ್ತೆ ಬ್ರಿಟಿಷರ ಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆಗಲೂ ಭಾರತದಲ್ಲಿ ಭಾರತದವರಿಗೆ ಪ್ರವೇಶ ಇರಲಿಲ್ಲ. ಕೂಡಲೇ ಇದನ್ನು ನಿಲ್ಲಿಸಿ, ನಿಮಗೆ ಈ ರೀತಿ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಈ ಹೊಟೇಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: 72ರ ವೃದ್ಧನ ಕೈ ಹಿಡಿದ 27ರ ಯುವತಿ: ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ಇದನ್ನೂ ಓದಿ: ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್
