ಔರಿಯಾದಲ್ಲಿ ಕೋತಿಯೊಂದು 80 ಸಾವಿರ ರೂಪಾಯಿಗಳಿದ್ದ ಬ್ಯಾಗನ್ನು ಕದ್ದು ಮರದ ಮೇಲೇರಿ ನೋಟುಗಳನ್ನು ಚೆಲ್ಲಿದೆ. ವ್ಯಕ್ತಿಯೊಬ್ಬರು ಜಮೀನು ರಿಜಿಸ್ಟ್ರೇಷನ್‌ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಕೋತಿಯೊಂದು 80 ಸಾವಿರ ರೂಪಾಯಿಗಳಿದ್ದ ಬ್ಯಾಗೊಂದನ್ನು ಎತ್ತಿಕೊಂಡು ಮರದ ಮೇಲೇರಿ ಅಲ್ಲಿಂದ ನೋಟಿನ ಮಳೆ ಸುರಿಸಿದಂತಹ ಘಟನೆ ಉತ್ತರ ಪ್ರದೇಶದ ಔರಿಯಾದಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೈಕ್‌ನ ಟ್ರಂಕ್ ಮೇಲಿಟ್ಟಿದ್ದ 80 ಸಾವಿರವಿದ್ದ ಹಣದ ಚೀಲವನ್ನು ಎಗ್ಗರಿಸಿದ ಕೋತಿ ಅದನ್ನು ಹಿಡಿದುಕೊಂಡು ಸೀದಾ ಮರದ ಮೇಲೇರಿದೆ ಬಳಿಕ ಬ್ಯಾಗನ್ನು ತೆರೆದ ಕೋತಿ ಒಂದೊಂದೇ ನೋಟುಗಳನ್ನುಕೈಗೆ ತೆಗೆದುಕೊಂಡು ನೆಲಕ್ಕೆ ಚೆಲ್ಲಿದೆ.
ಜಮೀನು ರಿಜಿಸ್ಟ್ರೇಷನ್‌ಗೆ ಬಂದಿದ್ದಾಗ ಘಟನೆ
ದೊಂಡಾಪುರ ಗ್ರಾಮದ ಅನುಜ್‌ಕುಮಾರ್ ಅವರು ತಮ್ಮ ತಂದೆ ರೋಹಿತಾಸ್ ಚಂದ್ರ ಅವರ ಜೊತೆ ತಮ್ಮ ಜಮೀನೊಂದರ ರಿಜಿಸ್ಟ್ರೇಷನ್‌ಗಾಗಿ 80 ಸಾವಿರ ರೂಪಾಯಿಯನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರೋಹಿತಾಶ್ ಅವರು ವಕೀಲರೊಂದಿಗೆ ಪೇಪರ್ ಕೆಲಸದಲ್ಲಿ ತೊಡಗಿದ್ದಾಗ ಕೋತಿಯೊಂದು ಬಂದು ಅವರ ಮೊಪೆಡ್‌ನ ಡಿಕ್ಕಿ ತೆರೆದು ಅದರಲ್ಲಿ ಹಣದ ಬ್ಯಾಗನ್ನು ಹೊರತೆಗೆದು ಸೀದಾ ಮರದ ಮೇಲೇರಿ ಕುಳಿತಿದೆ. ಬರೀ ಇಷ್ಟೇ ಅಲ್ಲ ಅದು ಅಲ್ಲಿ ಬ್ಯಾಗಿನಿಂದ ನೋಟುಗಳನ್ನು ತೆಗೆದು ಹರಿಯಲು ಶುರು ಮಾಡಿದ್ದಲ್ಲದೇ ಅವುಗಳನ್ನು ಕೆಳಗೆಸೆದು ಹಣದ ಮಳೆ ಸುರಿಸಿದೆ. ಈ ವೇಳೆ ಅಲ್ಲಿದ್ದ ಜನರು ಕೆಳಗೆ ಬಿದ್ದ ನೋಟುಗಳನ್ನು ಹಿಡಿದುಕೊಳ್ಳಲು ಓಡೋಡಿ ಬಂದಿದ್ದಾರೆ.
ಬೈಕ್‌ನಲ್ಲಿದ್ದ ಹಣ ಕಸಿದು ಮರವೇರಿ ನೋಡಿನ ಮಳೆ ಸುರಿಸಿದ ಕೋತಿ:
ಹೀಗಾಗಿ ಈ ಎಲ್ಲಾ ಗೊಂದಲಗಳು ಮುಗಿದ ನಂತರ ರೋಹಿತಾಶ್ ಅವರು ಕೇವಲ 52 ಸಾವಿರ ರೂಪಾಯಿಯನ್ನು ಮಾತ್ರ ಕೋತಿಯಿಂದ ವಾಪಸ್ ಪಡೆಯಲು ಸಾಧ್ಯವಾಗಿದೆ. ಈ ವೇಳೆ ಉಳಿದ 28,000 ರೂಪಾಯಿಯನ್ನು ಬಹುಶಃ ಕೋತಿ ಹರಿದು ಹಾಕಿದೆ ಅಥವಾ ಕೋತಿ ಎಸೆದ ನೋಟುಗಳನ್ನು ಸಿಕ್ಕಿದ್ದೇ ಸೀರುಂಡೆ ಅಂತ ಬೇರೆ ಯಾರೋ ತೆಗೆದುಕೊಂಡು ಹೋಗಿದ್ದಾರೆ. ಬಿಧುನಾ ತಹಸಿಲ್ ಪ್ರದೇಶದಲ್ಲಿ ಕೋತಿಗಳ ಕಾಟ ಬಹಳ ಹಿಂದಿನಿಂದಲೂ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ನಾವು ಈ ಆವರಣದಲ್ಲಿ ಆಹಾರ ಸೇವಿಸಲು ಸಹ ಸಾಧ್ಯವಿಲ್ಲ. ಸಣ್ಣದೊಂದು ತಪ್ಪು ಸಂಭವಿಸಿದರೂ, ಕೋತಿಗಳು ತಕ್ಷಣ ದಾಳಿ ಮಾಡುತ್ತವೆ ಅಥವಾ ವಸ್ತುಗಳನ್ನು ಕಸಿದುಕೊಳ್ಳುತ್ತವೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ.
ಇದನ್ನೂ ಓದಿ: ಪಿರೇಡ್ಸ್ ಅನುಭವ ಪಡೆದುಕೊಳ್ಳಲು ಹೊರಟ ಯುವಕನಿಗೆ ಆಗಿದ್ದೇನು? ವೇದಿಕೆಯಲ್ಲೇ ಕುಸಿದ ಯುವಕ
ಇದನ್ನೂ ಓದಿ: ಬೀದಿಯಿಂದ ಬಂದು ಭದ್ರತಾ ಪಡೆ ಸೇರಿದ ಬೀದಿ ನಾಯಿ ಟೆಂಗಾನ ಕತೆ
