ಬಿಹಾರ ವಿಧಾನಸಭಾ ಚುನಾವಣೆಗೆ ಟಿಕೆ್ಟ್‌ ಕೇಳಿದ್ದಕ್ಕೆ ಆರ್‌ಜೆಡಿ ನಾಯಕ ಸಂಜಯ್ ಯಾದವ್ ನನ್ನ ಬಳಿ 2.7 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರ್‌ಜೆಡಿಯಿಂದ ಟಿಕೆಟ್ ವಂಚಿತರಾಗಿರುವ ಮದನ್ ಶಾ, ಆರೋಪಿಸಿದ್ದಾರೆ.

ಟಿಕೆಟ್ ನೀಡುವ ಭರವಸೆ ನೀಡಿ ಈಗ 2.7 ಕೋಟಿಗೆ ಬೇಡಿಕೆ

ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಆರ್‌ಜೆಡಿಯಿಂದ ಟಿಕೆಟ್ ಕೈತಪ್ಪಿದ ಅಭ್ಯರ್ಥಿ ಮದನ್ ಶಾ ಲಾಲೂ ನಿವಾಸದ ಮುಂದೆ ಹೈಡ್ರಾಮಾ ಮಾಡಿದ್ದು, ಆರ್‌ಜೆಡಿ ನಾಯಕ ಸಂಜಯ್ ಯಾದವ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನಗೆ ಲಾಲು ಪ್ರಸಾದ್ ಯಾದವ್‌ 2025ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದರು. ಆದರೆ ಸಂಜಯ್ ಯಾದವ್‌ ನನಗೆ ಟಿಕೆಟ್ ನೀಡಲುು 2.7 ಕೋಟಿ ಹಣ ಪಾವತಿ ಮಾಡುವಂತೆ ಬೇಡಿಕೆ ಇಟ್ಟರು, ನಾನು ನಿರಾಕರಿಸಿದಾಗ ನನಗೆ ನೀಡಬೇಕಾಗಿದ್ದ ಟಿಕೆಟ್‌ನ್ನು ಬೇರೆಯವರಿಗೆ ನೀಡಿದರು ಎಂದು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಆಪ್ತ ಮದನ್‌ ಶಾ ಆರೋಪಿಸಿದ್ದಾರೆ.

ಟಿಕೆಟ್ ಕೈತಪ್ಪಿದ್ದಕ್ಕೆ ಲಾಲೂ ನಿವಾಸದ ಮುಂದೆ ರಸ್ತೆಯಲ್ಲಿ ಹೊರಳಾಡಿದ ಮದನ್ ಶಾ:

ತಮಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ದುಃಖಿತರಾದ ಮದನ್ ಶಾ ಅವರು ಅವರು ಲಾಲೂ ಪ್ರಸಾದ್ ನಿವಾಸದ ಮುಂದೆ ರಸ್ತೆಯಲ್ಲಿ ಬಿದ್ದು ಹೊರಳಾಡಿ ತಾನು ಸಾಯುವುದಾಗಿ ಹೇಳಿದ್ದಾರೆ. ನನಗೆ ಮೋಸವಾಗಿದೆ. ಸಂಜಯ್ ಯಾದವ್ ನನಗೆ ಟಿಕೆಟ್ ತಪ್ಪಿಸಿದ, ಟಿಕೆಟ್ ಕೇಳಿದಾಗ 2. 7 ಕೋಟಿ ರೂಪಾಯಿ ಕೇಳಿದ, ನನ್ನ ಬಳಿ ಅಷ್ಟು ಹಣವಿಲ್ಲ, ಲಾಲು ಯಾದವ್ ನನ್ನ ಗುರು, ಆದರೆ ಇಲ್ಲಿ ನನಗೆ ಸಂಜಯ್ ಯಾದವ್ ಹಾಗೂ ತೇಜಸ್ವಿ ಯಾದವ್‌ರಿಂದ ಮೋಸವಾಗಿದೆ. ನನಗೆ ಟಿಕೆಟ್ ತಪ್ಪಿಸಿ ಕಳ್ಳನಿಗೆ ಟಿಕೆಟ್ ನೀಡ್ತಿದ್ದಾರೆ. ಆತ ಬಿಜೆಪಿ ಏಜೆಂಟ್ ಎಂದು ಮದನ್ ಶಾ ಆರೋಪಿಸಿದ್ದಾರೆ.

ಆರ್‌ಜೆಡಿ ನಾಯಕ ಸಂಜಯ್ ಯಾದವ್ ವಿರುದ್ಧ ಮದನ್ ಶಾ ಗಂಭೀರ ಆರೋಪ

ಮಾಧ್ಯಮಗಳೊಂದಿಗೆ ಮಾತನಾಡಿದ ಮದನ್‌ ಶಾ, ಲಾಲು ಪ್ರಸಾದ್ ಯಾದವ್ ಅವರು 2025 ರ ಬಿಹಾರ ವಿಧಾನಸಭಾ ಚುನಾವಣೆಗೆ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು ಆದರೆ, ಆರ್‌ಜೆಡಿ ನಾಯಕ ಸಂಜಯ್ ಯಾದವ್ ತಮ್ಮಿಂದ 2.7 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರ. ಹಣ ನೀಡಲು ನಿರಾಕರಿಸಿದಾಗ, ಪಕ್ಷದ ಟಿಕೆಟ್ ಅನ್ನು ಬೇರೆ ಅಭ್ಯರ್ಥಿಗೆ ಹಸ್ತಾಂತರಿಸಲಾಯಿತು ಎಂದು ಶಾ ಹೇಳಿದರು.

ಲಾಲೂ ಪ್ರಸಾದ್ ಯಾದವ್ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮದನ್ ಶಾ ಅಲ್ಲಿ ರಸ್ತೆಯಲ್ಲಿ ಬಿದ್ದು ಹೊರಳಾಡಿ ತಮ್ಮ ಬಟ್ಟೆಗಳನ್ನು ಹರಿದುಕೊಂಡು ತಮಗೆ ಮೋಸವಾಗಿದೆ ತಾನು ಸಾಯುವುದಾಗಿ ಹೇಳಿದರು. ಅವರು ಸರ್ಕಾರ ರಚಿಸುವುದಿಲ್ಲ, ತೇಜಸ್ವಿ ತುಂಬಾ ದುರಹಂಕಾರಿ ಆತ ಜನರನ್ನು ಭೇಟಿಯಾಗುವುದಿಲ್ಲ. ಅವರು ಟಿಕೆಟ್ ಬೇರೆಯವರಿಗೆ ನೀಡುತ್ತಿದ್ದಾರೆ. ಸಂಜಯ್ ಯಾದವ್ ಇದನ್ನೆಲ್ಲ ಮಾಡುತ್ತಿದ್ದಾರೆ. ನಾನು ಇಲ್ಲಿಗೆ ಸಾಯಲು ಬಂದಿದ್ದೇನೆ. ಲಾಲು ಯಾದವ್ ನನ್ನ ಗುರು. ಅವರು ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು, ಆದರೆ ಇವರು ಬಿಜೆಪಿ ಏಜೆಂಟ್ ಸಂತೋಷ್ ಕುಶ್ವಾಹ ಅವರಿಗೆ ಟಿಕೆಟ್ ನೀಡಿದರು ಎಂದು ಮದನ್ ಶಾ ಆರೋಪಿಸಿದ್ದಾರೆ.

ನಾನು ಬಡವ, 1990ರಿಂದಲೂ ಪಕ್ಷಕ್ಕಾಗಿ ದುಡಿದೆ ಭೂಮಿ ಮಾರಿದೆ: ಮದನ್ ಶಾ

2020 ರಲ್ಲಿ, ಲಾಲು ಜಿ ನನ್ನನ್ನು ರಾಂಚಿಗೆ ಕರೆದು ತೇಲಿ ಸಮುದಾಯದ ಜನಸಂಖ್ಯೆಯ ಬಗ್ಗೆ ಸಮೀಕ್ಷೆ ನಡೆಸಿದರು. ಮತ್ತು ಮದನ್ ಶಾ ಮಧುಬನ್ ಕ್ಷೇತ್ರದಿಂದ ರಣಧೀರ್ ಸಿಂಗ್ ಅವರನ್ನು ಸೋಲಿಸುತ್ತಾರೆ ಎಂದು ಹೇಳಿದರು. ತೇಜಸ್ವಿ ಜಿ ಮತ್ತು ಲಾಲು ಜಿ ಇಬ್ಬರೂ ನನಗೆ ಕರೆ ಮಾಡಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ನಾನು ನಾನು 90 ರ ದಶಕದಿಂದಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಬಡವ, ರಾಜಕಾರಣಕ್ಕಾಗಿ ನಾನು ನನ್ನ ಭೂಮಿಯನ್ನು ಮಾರಿದ್ದೇನೆ ಎಂದು ಮದನ್ ಶಾ ಗೋಳಾಡಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ನವೆಂಬರ್ 6 ಹಾಗೂ 11ರಂದು ಚುನಾವಣೆ ನಡೆಯಲಿದೆ. ನವೆಂಬರ್ 14ರಂದು ಮತಎಣಿಕೆ ನಡೆದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣೆಯ ಹಿನ್ನೆಲೆ ಬಿಹಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇತ್ತ ಮದನ್ ಶಾ ಹೈಡ್ರಾಮಾದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಇವರು ಒಂದು ಟಿಕೆಟ್‌ಗೆ ಇಷ್ಟು ಹಣ ಪಡೆದು ಗೆದ್ದರೆ ನಂತರ ಮುಂದೆ ಹೇಗೆ ಇವರು ದುಡ್ಡು ಮಾಡಬಹುದು ಎಂದು ಜನ ಪ್ರಶ್ನೆ ಮಾಡ್ತಿದ್ದಾರೆ. ಆರ್‌ಜೆಡಿ ನಾಯಕಿ ಮದನ್ ಶಾ ಅವರು, 2.7 ಕೋಟಿ ರೂಪಾಯಿ ನೀಡಲು ಸಾಧ್ಯವಾಗದ ಕಾರಣ ಟಿಕೆಟ್ ನಿರಾಕರಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಪಕ್ಷದ ಟಿಕೆಟ್ ಪಡೆಯಲು ಈ ಶಾಸಕರು 2.7 ಕೋಟಿ ರೂಪಾಯಿ ಲಂಚ ನೀಡಿ ಗೆದ್ದರೆ ಮುಂದೆ ಅವರು ಎಂತಹ ಭ್ರಷ್ಟಾಚಾರ ಮಾಡಬಹುದು ಎಂದು ಊಹಿಸಿ ಎಂದು ಬರೆದು @NCMIndiaa ಎಂಬ ಖಾತೆಯಿಂದ ಈ ವೀಡಿಯೋ ಪೋಸ್ಟ್ ಆಗಿದ್ದು,ಭಾರಿ ವೈರಲ್ ಆಗಿದೆ.

Scroll to load tweet…

Scroll to load tweet…