ಚಂಡೀಗಢದ ವಾಯುನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಏರ್ ಮಾರ್ಷಲ್ ಎ.ಪಿ. ಸಿಂಗ್ ಮಿಗ್-21 ವಿಮಾನದ ಅಂತಿಮ ಹಾರಾಟ ನಡೆಸಿ, ವಿದಾಯ ಹೇಳಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಸ್.ಪಿ. ತ್ಯಾಗಿ ಮತ್ತು ಬಿ.ಎಸ್. ಧನೋವಾ, ಶುಭಾಂಶು ಶುಕ್ಲಾ ಹಲವಾರು ಗಣ್ಯರು ಭಾಗವಹಿಸಿದ್ದರು.
ಚಂಡೀಗಢ : 6 ದಶಕಗಳ ಕಾಲ ಭಾರತೀಯ ವಾಯುಸೇನೆಯ ಬೆನ್ನೆಲುಬಾಗಿ ಕೆಲಸ ಮಾಡಿದ್ದ ರಷ್ಯಾನಿರ್ಮಿತ ಮಿಗ್-21 ಯುದ್ಧವಿಮಾನಕ್ಕೆ ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ಉಪಸ್ಥಿತರಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ , ‘ಮಿಗ್-21 ನಮ್ಮ ಸೇನಾ ವಾಯುಯಾನ ಪಯಣಕ್ಕೆ ಹಲವು ಹೆಮ್ಮೆಯ ಕ್ಷಣಗಳನ್ನು ಸೇರಿಸಿದೆ. ಅದು ಕೇವಲ ಒಂದು ವಿಮಾನ ಅಥವಾ ಯಂತ್ರವಲ್ಲ, ಭಾರತ-ರಷ್ಯಾ ನಡುವಿನ ಆಳವಾದ ಸಂಬಂಧಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು. ಶುಕ್ರವಾರ ಚಂಡೀಗಢದ ವಾಯುನೆಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ, ಏರ್ ಮಾರ್ಷಲ್ ಎ.ಪಿ. ಸಿಂಗ್ ಮಿಗ್-21 ವಿಮಾನದ ಅಂತಿಮ ಹಾರಾಟ ನಡೆಸಿ, ವಿದಾಯ ಹೇಳಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆಯ ಮಾಜಿ ಮುಖ್ಯಸ್ಥರಾದ ಎಸ್.ಪಿ. ತ್ಯಾಗಿ ಮತ್ತು ಬಿ.ಎಸ್. ಧನೋವಾ, ಗ್ರುಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ವೈಮಾನಿಕ ಪ್ರದರ್ಶನ:
ವಾಯುಪಡೆಯ ‘ಆಕಾಶಗಂಗಾ’ ಸ್ಕೈಡೈವಿಂಗ್ ತಂಡವು 8,000 ಅಡಿ ಎತ್ತರದಲ್ಲಿ ವೈಮಾನಿಕ ಪ್ರದರ್ಶನ ನೀಡಿತು. ನಂತರ 23 ಸ್ಕ್ವಾಡ್ರನ್‌ಗೆ ಸೇರಿದ ಮಿಗ್-21 ವಿಮಾನಗಳು ಅಂತಿಮ ವೈಮಾನಿಕ ಪ್ರದರ್ಶನ ನೀಡಿದವು. ಏರ್ ವಾರಿಯರ್ ತಂಡದಿಂದ ಕವಾಯತು ಮತ್ತು ನಿವೃತ್ತ ವಿಮಾನಕ್ಕೆ ವಂದನೆಗಳನ್ನು ಸಲ್ಲಿಸಲಾಯಿತು.
ನಿವೃತ್ತಿ ನಂತರ ಏನಾಗುತ್ತದೆ?:ದೆಹಲಿಯ ಪಾಲಂನಲ್ಲಿರುವ ವಾಯುಪಡೆಯ ವಸ್ತುಸಂಗ್ರಹಾಲಯಲ್ಲಿ ನಿವೃತ್ತ ಮಿಗ್-21 ವಿಮಾನಗಳನ್ನು ಪ್ರದರ್ಶನಕ್ಕಿಡುವ ಸಾಧ್ಯತೆಯಿದೆ. ಕೆಲವು ವರದಿಗಳ ಪ್ರಕಾರ, ಕೆಲವು ಮಿಗ್-21 ವಿಮಾನಗಳು ಸುಸ್ಥಿತಿಯಲ್ಲಿರುವ ಕಾರಣ, ಅವುಗಳನ್ನು ವಿಂಟೇಜ್ ಸ್ಕ್ವಾಡ್ರನ್ ಆಗಿ ಬಳಸುವ ನಿರೀಕ್ಷೆಯಿದೆ.
6 ದಶಕಗಳಷ್ಟು ಸುದೀರ್ಘ ಕೆಲಸ : ಥ್ಯಾಂಕ್ ಯು ಮಿಗ್-21... ಗುಡ್‌ಬೈ
6 ದಶಕಗಳಷ್ಟು ಸುದೀರ್ಘ ಕಾಲ ಭಾರತೀಯ ವಾಯುಪಡೆಯ ಬೆನ್ನೆಲುಬಾಗಿ ಕೆಲಸ ಮಾಡಿದ ಮಿಗ್-21 ಯುದ್ಧವಿಮಾನ ಶುಕ್ರವಾರ ನಿವೃತ್ತಿ ಪಡೆಯಲಿದೆ. ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್’ ಹೆಸರಿನ ಮಿಗ್-21ಕ್ಕೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿದೆ. ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಿಮಾನದ ಕೊನೆಯ ಹಾರಾಟ ನಡೆಸಿ, ವಿದಾಯ ಹೇಳಲಿದ್ದಾರೆ. ಮಿಗ್-21 ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಏನಿದರ ವಿಶೇಷತೆ? ‘ಹಾರುವ ಶವಪೆಟ್ಟಿಗೆ’ ಎಂಬ ಅಪಖ್ಯಾತಿ ಬಂದಿದ್ದಾದರೂ ಏಕೆ? ಇಲ್ಲಿದೆ ಒಂದಿಷ್ಟು ಮಾಹಿತಿ
50ರ ದಶಕದಲ್ಲಿ ಹುಟ್ಟು
1950ರ ದಶಕದಲ್ಲಿ ಶೀತಲ ಸಮರದ ಸಂದರ್ಭದಲ್ಲಿ, ಸೋವಿಯತ್ ಒಕ್ಕೂಟವು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ವೇಗವಾದ, ಲಘು ಮತ್ತು ಸೂಪರ್‌ಸಾನಿಕ್ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿತು. ಸರಳ ವಿನ್ಯಾಸ ಮತ್ತು ಕಡಿಮೆ ವೆಚ್ಚದಲ್ಲಿ ಮಿಗ್-21 ಯುದ್ಧವಿಮಾನವನ್ನು ತಯಾರು ಮಾಡಿ, ತನ್ನ ಮಿತ್ರರಾಷ್ಟ್ರಗಳಾದ ಭಾರತ, ಈಜಿಪ್ಟ್, ವಿಯೆಟ್ನಾಂ ಇತ್ಯಾದಿಗಳಿಗೆ ರಫ್ತು ಮಾಡಿತು. ಆರ್ಥಿಕವಾಗಿ ಹಿಂದುಳಿದಿದ್ದ ಭಾರತದಂತಹ ರಾಷ್ಟ್ರಗಳಿಗೆ ಇದು ಕೈಗೆಟಕುವ ಮತ್ತು ಶಕ್ತಿಶಾಲಿ ಯುದ್ಧವಿಮಾನವಾಗಿತ್ತು.
